ಅಗ್ನಿಪಥದಡಿ ಮತ್ತೆ ಭಾರತೀಯ ಸೇನೆಗೆ ನೇಮಕ ಮಾಡಿಕೊಳ್ಳಿ ಎಂದು ನೇಪಾಳಿಗರ ಪ್ರತಿಭಟನೆ: ಇಂಡಿಯನ್‌ ಆರ್ಮಿ ಸೇರಲು ಗೂರ್ಖಾಗಳಿಗೆ ಏಕಿಷ್ಟು ಹಂಬಲ? Explained

ಭಾರತ-ನೇಪಾಳದ 2ಶತಮಾನಗಳ ಮಿಲಿಟರಿ ಸಂಬಂಧಗಳನ್ನು ಪುನಃಸ್ಥಾಪಿಸಲು ಆ.16ರಿಂದ 5 ದಿನಗಳ ಕಾಲ ಭಾರತೀಯ ಸೇನಾ ಮುಖ್ಯಸ್ಥ ಧೀರಜ್‌ ಸೇಠ್‌ ಕಠ್ಮಾಂಡು ಪ್ರಯಾಣ ಬೆಳಸಲಿದ್ದಾರೆ. ಆದರೆ, ಇದಕ್ಕೂ ಮೊದಲೇ ನೇಪಾಳದಲ್ಲಿ ಹೋರಾಟದ ಕಿಚ್ಚು ಹೆಚ್ಚಾಗಿದ್ದು, ಅಗ್ನಿಪಥ ಯೋಜನೆಯಡಿ ಭಾರತೀಯ ಸೇನೆಯಲ್ಲಿ ನೇಪಾಳದ ಯುವಕ,ಯುವತಿಯರಿಗೆ ಮರುನೇಮಕಾತಿಗೆ ಅವಕಾಶ ನೀಡಬೇಕು ಎಂದು ನೇಪಾಳದ ಇಂಡಿಯನ್‌ ಎಕ್ಸ್‌-ಸವೀರ್‍ಸ್‌ಮೆನ್‌ ಗೂರ್ಖಾ ಬ್ರಿಗೇಡ್‌ ನೇತೃತ್ವದಲ್ಲಿ ಪ್ರತಿಭಟನೆಗಳು ಶುರುವಾಗಿದೆ. ಏನಿದ ಪ್ರತಿಭಟನೆ, ಭಾರತೀಯ ಸೇನೆಯಲ್ಲಿ ಸೇರಲು ನೇಪಾಳದ ಯುವಕರಿಗೇಕಿಷ್ಟು ಆಸಕ್ತಿ? ಇದರ ಹಿನ್ನಲೆಯೇನು? ಈ ಕುರಿತ ವಿಸ್ತೃತ ಲೇಖನ ಇಲ್ಲಿದೆ..

ಕಠ್ಮಾಂಡು: ಭಾರತೀಯ ಸೇನೆ ಎಂದರೇನೇ ಅಂದೊಂದು ರೀತಿಯ ಗತ್ತು. ಇಂತಹ ಭಾರತೀಯ ಸೇನೆಯಲ್ಲಿ ನೇಮಕಗೊಳ್ಳುವುದು ಎಂದರೆ ಅದು ಸಾಮಾನ್ಯದ ವಿಚಾರ ಅಲ್ಲ. ಹಾಗಾಗಿಯೇ ಇದೀಗ ನೇಪಾಳದ ಯುವಸಮುದಾಯ ಸಹ ಅಗ್ನಿಪಥ ಯೋಜನೆಯಡಿ ಭಾರತೀಯ ಸೇನೆಯಲ್ಲಿ ತನ್ನ ಯುವಕ ಹಾಗೂ ಯುವತಿಯರಿಗೆ ಮರುನೇಮಕಾತಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಆ.16ರಂದು ಭಾರತ ಸೇನಾ ಮುಖ್ಯಸ್ಥ ಧೀರಜ್ ಸೇಠ್ ನೇಪಾಳದ ರಾಜಧಾನಿ ಕಠ್ಮಾಂಡುವಿಗೆ ಭೇಟಿ ನೀಡುವ ಮುನ್ನವೇ ಬಂದಿರುವುದು ಸದ್ಯ ಗಮನಸೆಳೆದಿದೆ.

ಭಾರತ ಮತ್ತು ನೇಪಾಳ ನಡುವಿನ ಐತಿಹಾಸಿಕ ಮಿಲಿಟರಿ ಸಂಪ್ರದಾಯ ಸದ್ಯ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದು, ಈ ನಡುವೆ ಅಗ್ನಿಪಥ್ ಯೋಜನೆಯಡಿಯಲ್ಲಿ ಭಾರತವು ನೇಪಾಳಿ ಯುವಕರ ನೇಮಕಾತಿಯನ್ನು ಪುನರಾರಂಭಿಸಬೇಕು ಎಂದು ನೇಪಾಳದ ಪೋಖರಾ ನಗರದಲ್ಲಿ ‘ಇಂಡಿಯನ್‌ ಎಕ್ಸ್‌-ಸವೀರ್‍ಸ್‌ಮೆನ್‌ ಗೂರ್ಖಾ ಬ್ರಿಗೇಡ್‌ ನೇಪಾಳ ಪೋಖರಾ’ ಸಂಘಟನೆಯ ನೇತೃತ್ವದಲ್ಲಿ ಮಾಜಿ ಗೂರ್ಖಾ ಸೈನಿಕರು ಹಾಗೂ ಅವರ ಬೆಂಬಲಿಗರು ಬೃಹತ್‌ ಪ್ರತಿಭಟನೆ ನಡೆಸಿದ್ದಾರೆ.

ನೇಪಾಳಿ ಯುವಕರ ಆಗ್ರಹವೇನು?
ನೇಪಾಳದ ಸುದ್ದಿ ಪೋರ್ಟಲ್ ಪ್ರಕಾರ, ಈ ಗುಂಪು ಜಿಲ್ಲಾಡಳಿತ ಕಚೇರಿಯ ಮೂಲಕ ನೇಪಾಳದ ಫೆಡರಲ್ ಸರ್ಕಾರಕ್ಕೆ ಎರಡು ಅಂಶಗಳ ಜ್ಞಾಪಕ ಪತ್ರವನ್ನು ಸಲ್ಲಿಸಿದೆ. ನೇಮಕಾತಿಯನ್ನು ತಕ್ಷಣ ಪುನರಾರಂಭಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಅಗ್ನಿಪಥ ಜಾರಿಯಿಂದಾಗಿ ನೇಮಕಾತಿ ಸ್ಥಗಿತವು ನೇಪಾಳಿ ಯುವಕರಿಗೆ ಪ್ರಮುಖ ಉದ್ಯೋಗಾವಕಾಶವನ್ನು ಕಳೆದುಕೊಂಡಿದೆ ಮತ್ತು ಶತಮಾನಗಳಷ್ಟು ಹಳೆಯದಾದ ಮಿಲಿಟರಿ ಸಂಪ್ರದಾಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಪ್ರತಿಭಟನಾಕಾರರು ಹೇಳುತ್ತಾರೆ.

ಈ ಕುರಿತು ಪ್ರತಿಭಟನೆಯ ನೇತೃತ್ವದ ವಹಿಸಿದ ಗೂರ್ಖಾ ಬ್ರಿಗೇಡ್‌ ಅಧ್ಯಕ್ಷ ಕರ್ನಲ್‌ ಕೃಷ್ಣ ಬಹದ್ದೂರ್‌ ಖತ್ರಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ‘‘ಸುಗೌಲಿ ಒಪ್ಪಂದದ ನಂತರ ಕಳೆದ 207 ವರ್ಷಗಳಿಂದ ಭಾರತೀಯ ಸೇನೆಗೆ ನೇಪಾಳದ ಯುವಕರ ನೇಮಕಾತಿ ನಿರಂತರವಾಗಿ ನಡೆಯುತ್ತಿತ್ತು. ಆದರೆ ಅಗ್ನಿಪಥ ಯೋಜನೆ ಜಾರಿಗೆ ಬಂದ ನಂತರ ಸರಕಾರವು ನಾನಾ ಕಾರಣಗಳನ್ನು ನೀಡಿ ನೇಪಾಳಿ ಯುವಕರು ಭಾರತೀಯ ಸೇನೆಗೆ ಸೇರುವುದನ್ನು ತಡೆದಿದ್ದು, ಇದರಿಂದಾಗಿ ಎರಡು ಶತಮಾನಗಳ ಚಾರಿತ್ರಿಕ ಮಿಲಿಟರಿ ಬಾಂಧವ್ಯ ಅಪಾಯದಲ್ಲಿದೆ,’’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಅಲ್ಲದೆ, ” ಸೇನೆಯಲ್ಲಿ ನೇಮಕಾತಿ ಸ್ಥಗಿತಗೊಂಡಿರುವುದರಿಂದ ನೇಪಾಳಿ ಯುವಕರು ತಮ್ಮ ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅಗ್ನಿಪಥ ಯೋಜನೆಯ 4 ವರ್ಷಗಳ ಸೇವಾವಧಿಯಲ್ಲಿ ಯುವಕರು ವಿವಿಧ ಸೌಲಭ್ಯಗಳೊಂದಿಗೆ ಸುಮಾರು 45 ರಿಂದ 50 ಲಕ್ಷ ರೂ.ಗಳನ್ನು ಸಂಪಾದಿಸಬಹುದು. 50 ಡಿಗ್ರಿ ಸೆಲ್ಸಿಯಸ್‌ ಸುಡುವ ಬಿಸಿಲಿನಲ್ಲಿ ಕನಿಷ್ಠ ವೇತನಕ್ಕಾಗಿ ಗಲ್ಫ್ ದೇಶಗಳಿಗೆ ಕೆಲಸಕ್ಕೆ ಹೋಗುವುದಕ್ಕಿಂತ ಭಾರತೀಯ ಸೇನೆಗೆ ಸೇರುವುದು ನೂರಾರು ಪಟ್ಟು ಮೇಲು ಎಂದು ಜ್ಞಾಪನಾ ಪತ್ರದಲ್ಲಿಉಲ್ಲೇಖಿಸಿದ್ದೇವೆ”‌ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಭಾರತ ತಮ್ಮ ಆಗ್ರಹಕ್ಕೆ ಮನ್ನಣೆ ನೀಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಈ ಕುರಿತು ಇನ್ನೂ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಏನಿದು ಭಾರತೀಯ ಸೇನೆಯಲ್ಲಿ ನೇಪಾಳಿಗರ ನೇಮಕಾತಿ ಖ್ಯಾತೆ?
ನೇಪಾಳ, ಭಾರತ ಮತ್ತು ಬ್ರಿಟನ್ ನಡುವೆ ಸುಗೌಲಿ ಎಂಬ ತ್ರಿಪಕ್ಷೀಯ ಒಪ್ಪಂದವಾಗಿದೆ. ಈ ಒಪ್ಪಂದದ ಪ್ರಕಾರ, ನೇಪಾಳದ 1ನೇ, 3ನೇ, 4ನೇ, 5ನೇ, 8ನೇ ಮತ್ತು 9ನೇ, ( 11ನೇ ಸ್ವಾತಂತ್ರ್ಯದ ನಂತರ) ಗೂರ್ಖಾ ಸೈನಿಕರ ರಜಿಮೆಂಟ್‌ಗಳನ್ನು ಭಾರತಕ್ಕೆ ನಿಯೋಜಿಸಲಾಗಿತ್ತು. ಅಂದಿನಿಂದ ಸುಮಾರು 200 ವರ್ಷಗಳ ಕಾಲ ಎಂದ ಬರೋಬ್ಬರಿ 2 ಶತಮಾನಗಳ ನೇಪಾಳಿಗರು ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದಿದ್ದು, ಇವರಿಗೆ ಷರತ್ತುಗಳ ಜೊತೆಗೆ ಭಾರತೀಯ ಸೈನಿಕರಿಗೆ ನೀಡಲಾಗುವ ನಿವೃತ್ತಿ ಬಳಿಕ ಸಿಗುವ ಸೌಲಭ್ಯ ಹಾಗೂ ಪಿಂಚಣಿಯಂತಹ ಸವಲತ್ತುಗಳನ್ನು ಸಹ ನೀಡಲಾಗಿತ್ತು.

ಆದರೆ, 20242ರಲ್ಲಿ ಭಾರತ ಸರ್ಕಾರ ಸೇನೆಯ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಯನ್ನು ಪರಿಚಯಿಸಿದ ಬಳಿಕ ಇದಕ್ಕೆ ನೇಪಾಳದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಕಾರಣ ನೇಪಾಳ ಸರ್ಕಾರವು ಈ ಯೋಜನೆಯು ಭಾರತ, ನೇಪಾಳ ಮತ್ತು ಬ್ರಿಟನ್ ನಡುವಿನ 1947 ರ ತ್ರಿಪಕ್ಷೀಯ ಒಪ್ಪಂದದ ನಿಬಂಧನೆಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ವಾದಿಸಿದ್ದು, ಪಕ್ಷೀಯ ಒಪ್ಪಂದದ ಸದಸ್ಯರಾಗಿ, ಭಾರತ ಸರ್ಕಾರವು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ನೇಪಾಳದಿಂದ ಸಲಹೆ ಕೇಳಬೇಕಾಗಿತ್ತು ಎಂದು ಆಗ್ರಹಿಸಿತ್ತು. ಆದರೆ, ಭಾರತೀಯ ಸೇನೆಯಲ್ಲಿ ನೇಪಾಳಿಗರನ್ನು ನೇಮಕ ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಿತ್ತು.

ಇದರಿಂದಾಗಿ ಭಾರತೀಯ ಸೇನೆಯನ್ನು ಅವಲಂಬಿಸಿದ್ದ ಸಾವಿರಾರು ನೇಪಾಳಿ ಯುವಕರಿಗೆ ಉದ್ಯೋಗಾವಕಾಶಗಳು ವಂಚಿತರಾಗುವ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಸದ್ಯ ಮತ್ತೆ ಭಾರತೀಯ ಸೇನೆಯಲ್ಲಿ ನೇಮಕಾತಿಗೆ ನೇಪಾಳದ ಯುವ ಸಮುದಾಯ ಆತುರರಾಗಿದ್ದು ಅಂದು ಆಕ್ಷೇಪ ವ್ಯಕ್ತಪಡಿಸಿದ್ದ ಅಗ್ನಿಪಥ ಯೋಜನೆಯಡಿಯೇ ಎಂದು ತಮಗೆ ಉದ್ಯೋಗ ನೀಡಿ ಸೇನೆಗೆ ನೇಮಕ ಮಾಡಿಕೊಳ್ಳಿ ಎಂದು ಆಗ್ರಹಿಸುತ್ತಿದ್ದಾರೆ.

ಆ.16ರಂದು ನೇಪಾಳಕ್ಕೆ ಭಾರತೀಯ ಸೇನಾ ಮುಖ್ಯಸ್ಥರ ಭೇಟಿ
ಭಾರತ ಮತ್ತು ನೇಪಾಳ ತಮ್ಮ ಮಿಲಿಟರಿ ಸಂಬಂಧಗಳನ್ನು ಪುನಸ್ಥಾಪಿಸುವ ಅಂಗವಾಗಿ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಧೀರಜ್ ಸೇಠ್ ಆಗಸ್ಟ್ 16 ರಿಂದ 5 ದಿನಗಳ ಕಾಲ ನೇಪಾಳಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ನೇಪಾಳದ ಅಧ್ಯಕ್ಷ ರಾಮಚಂದ್ರ ಪೌಡೆಲ್ ಸೇಠ್‌ಗೆ ನೇಪಾಳಿ ಸೇನೆಯ ಜನರಲ್ ಗೌರವ ಹುದ್ದೆಯ ಗೌರವ ನೀಡುವ ನೀರಿಕ್ಷಯಿದೆ. ಇದಾದ ಬಳಿಕ ಜನರಲ್ ಸೇಠ್ ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಕಠ್ಮಾಂಡು ಪೋಸ್ಟ್ ವರದಿ ಮಾಡಿದೆ. ಇನ್ನು, ಈ ಭೇಟಿಯ ಹೊತ್ತಿನಲ್ಲೇ ಈ ಪ್ರತಿಭಟನೆಗಳು ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.

Comments

One response to “ಅಗ್ನಿಪಥದಡಿ ಮತ್ತೆ ಭಾರತೀಯ ಸೇನೆಗೆ ನೇಮಕ ಮಾಡಿಕೊಳ್ಳಿ ಎಂದು ನೇಪಾಳಿಗರ ಪ್ರತಿಭಟನೆ: ಇಂಡಿಯನ್‌ ಆರ್ಮಿ ಸೇರಲು ಗೂರ್ಖಾಗಳಿಗೆ ಏಕಿಷ್ಟು ಹಂಬಲ? Explained”

  1. A WordPress Commenter Avatar

    Hi, this is a comment.
    To get started with moderating, editing, and deleting comments, please visit the Comments screen in the dashboard.
    Commenter avatars come from Gravatar.

Leave a Reply

Your email address will not be published. Required fields are marked *