ಹೊನ್ನಾವರ, ಮಾರ್ಚ್ 25: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) ವತಿಯಿಂದ ‘ಸುರಕ್ಷಿತ ತಟ, ಸಮೃದ್ಧ ಭಾರತ’ ಧ್ಯೇಯ ವಾಕ್ಯದೊಂದಿಗೆ ಗುಜರಾತ್‌ನಿಂದ ಕನ್ಯಾಕುಮಾರಿ ವರೆಗೆ ಸಾಗುತ್ತಿರುವ ಸಮುದ್ರತೀರ ಸೈಕ್ಲೋಥಾನ್ ಜಾಥಾ ಇಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಭವ್ಯ ಸ್ವಾಗತ ಪಡೆದಿತು. ಈ ಜಾಥಾವನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಮಂಕಾಳು ವೈದ್ಯರ ನೇತೃತ್ವದಲ್ಲಿ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು.
ಸಂಜೆ 4 ಗಂಟೆಗೆ ಹೊನ್ನಾವರದ ಇಕೋ ಬೀಚ್‌ಗೆ ಆಗಮಿಸಿದ ಈ ಸೈಕ್ಲೋಥಾನ್‌ನಲ್ಲಿ 24 ಜನ CISF ಯೋಧರು ಭಾಗವಹಿಸಿದ್ದರು. ಜಾಥಾವನ್ನು ಪ್ರೋತ್ಸಾಹಿಸಲು ಸಚಿವರು ವಿಶೇಷ ಸೂಚನೆ ನೀಡಿದರೆ, ಅವರ ಪುತ್ರಿ ಹಾಗೂ ಅರ್ಬನ್ ಬ್ಯಾಂಕ್ ನಿರ್ದೇಶಕಿ ಬಿನಾ ವೈದ್ಯ CISF ಯೋಧರಿಗೆ ಆತ್ಮೀಯ ಸ್ವಾಗತ ನೀಡಿದರು.
ರಾಷ್ಟ್ರಭಕ್ತಿಯ ಮಹತ್ವದ ಘೋಷಣೆ
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿನಾ ವೈದ್ಯರು, “ಇಂತಹ ರಾಷ್ಟ್ರಭಕ್ತಿಯ ಕಾರ್ಯಕ್ರಮವನ್ನು ಹೊನ್ನಾವರದಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳುವುದು ನಮ್ಮೆಲ್ಲರ ಪಾಲಿಗೆ ಹೆಮ್ಮೆ. CISF ಯೋಧರು ದೇಶದ ಸುರಕ್ಷತೆಗಾಗಿ ಸಲ್ಲಿಸುತ್ತಿರುವ ಸೇವೆ ಅಮೂಲ್ಯ,” ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರದ ಅಧಿಕಾರಿಗಳು, ನಾಗರಿಕರು ಸೇರಿ ಹಲವಾರು ಮಂದಿ ಭಾಗವಹಿಸಿ CISF ಯೋಧರಿಗೆ ಬೆಂಬಲ ವ್ಯಕ್ತಪಡಿಸಿದರು. ಡೆಪ್ಯೂಟಿ ಕಮಾಂಡೆಂಟ್ ರಾಜೇಂದ್ರ ಪ್ರಸಾದ್ ಪಾಟಕ್, ಅಸಿಸ್ಟೆಂಟ್ ಕಮಾಂಡೆಂಟ್ ದುರ್ಗೇಶ್ ಕಲಾಲ್, ಡೆಪ್ಯೂಟಿ ಕಮಾಂಡೆಂಟ್ ವಿಬೂ ಸಿಂಗ್, ಗ್ರೂಪ್ ಕಮಾಂಡೆಂಟ್ ಅನುಪ್ ಸಿನ್ನಾ ಸೇರಿದಂತೆ CISF ಅಧಿಕಾರಿಗಳು ಈ ಜಾಥಾಕ್ಕೆ ಸ್ಪಂದಿಸಿದರು.
ಜಿಲ್ಲೆಯಾದ್ಯಂತ ಈ ಸೈಕ್ಲೋಥಾನ್ ಜಾಥಾವನ್ನು ಸ್ವಾಗತಿಸಲು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದು, ದೇಶದ ಕರಾವಳಿ ಪ್ರದೇಶಗಳ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಈ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.