ಭಟ್ಕಳ : ಭಾನುವಾರ ಅಕ್ರಮ ಸಾಗಾಟದ ನಾಲ್ಕು ಜಾನುವಾರುಗಳನ್ನು ರಕ್ಷಿಸಿದ್ದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಸೋಮವಾರ ಕೂಡ ಕಸಾಯಿಖಾನೆಗೆ ಸಾಗಿಸಲು ಮಹಾರಾಷ್ಟ್ರದಿಂದ ಭಟ್ಕಳಕ್ಕೆ ಬರುತ್ತಿದ್ದ ೧೩ ಜಾನುವಾರುಗಳನ್ನು ರಕ್ಷಿಸಿದ್ದಾರೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಸಹಿತ ಓರ್ವನನ್ನು ಬಂಧಿಸಿರುವ ಪೊಲೀಸರು, ಮೂವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಜಮೀಲ್ ಯೂಸುಫ್ ಶೇಖ್ (೪೯) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಭಟ್ಕಳ ತಾಲೂಕಿನ ಶಿರಾಲಿ ಚೆಕ್ ಪೋಸ್ಟ್ ಬಳಿ ಲಾರಿ ತಡೆಹಿಡಿದ ಪೊಲೀಸರು ಪರಿಶೀಲಿಸಿದಾಗ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ೯ ಎತ್ತು ಮತ್ತು ೪ ಕೋಣಗಳನ್ನು ರಕ್ಷಿಸಿದ್ದಾರೆ. ಇವುಗಳು ಮಹರಾಷ್ಟ್ರದ ಪಾಲೆಗಾಂವ್‌ನಿಂದ ಭಟ್ಕಳಕ್ಕೆ ಬರುತ್ತಿತ್ತು ಎನ್ನಲಾಗಿದೆ. ಸಾಗಾಟಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳು ಸಿಕ್ಕಿಲ್ಲ. ಇವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹಿಂದು ಜಾಗರಣಾ ವೇದಿಕೆ ಮತ್ತು ಬಿಜೆಪಿ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. . ಹಿಂದು ಜಾಗರಣಾ ವೇದಿಕೆ ಸಹ ಸಂಚಾಲಕರಾದ ನಾಗೇಶ ನಾಯ್ಕ ಹೊನ್ನೆಗದ್ದೆ, ಕುಮಾರ ನಾಯ್ಕ ಹನುಮಾನನಗರ, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮೂಡಭಟ್ಕಳ, ಲೋಕೇಶ ದೇವಾಡಿಗ ಪೊಲೀಸರಿಗೆ ಸಹಕರಿಸಿದ್ದರು.