ಸರ್ಕಾರಕ್ಕೆ ಹೈಕೊರ್ಟ ನಿರ್ದೇಶನ
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಯಸ್ಕ ಸಂತ್ರಸ್ತೆಯರ ಖಾಸಗಿತನದ ಹಕ್ಕನ್ನು ರಕ್ಷಿಸುವ ಸಲುವಾಗಿ ಅವರ ಆರೋಗ್ಯ ತಪಾಸಣೆಯನ್ನು ಮಹಿಳಾ ವೈದ್ಯರೇ ನಡೆಸಲು ಅವಕಾಶ ಕಲ್ಪಿಸುವ ಸಲುವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಗೆ (ಬಿಎನ್‌ಎಸ್‌ಎಸ್) ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಬಿಹಾರ ಮೂಲದ ಅಜಯ್ ಕುಮಾರ್ ಬೆಹೆರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ವೇಳೆ ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ಕೇಂದ್ರ ಸರ್ಕಾರಕ್ಕೆ ಕೆಲ ಸೂಚನೆಗಳನ್ನು ನೀಡಿದೆ.
ಬಿಎನ್‌ಎಸ್‌ಎಸ್‌ನ ಸೆಕ್ಷನ್ 184ಕ್ಕೆ ಸೂಕ್ತ ತಿದ್ದುಪಡಿ ಮಾಡುವವರೆಗೆ ಅತ್ಯಾಚಾರ ಸಂತ್ರಸ್ತೆಯರ ವೈದ್ಯಕೀಯ ಪರೀಕ್ಷೆಯನ್ನು ನೋಂದಾಯಿತ ಮಹಿಳಾ ವೈದ್ಯಾಧಿಕಾರಿ ಮಾಡುವುದನ್ನು ಖಾತರಿಪರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.
ಬಿಎನ್‌ಎಸ್‌ಎಸ್ ಸೆಕ್ಷನ್ 184 ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಯಸ್ಕ ಮಹಿಳೆಯರ ವೈದ್ಯಕೀಯ ಪರೀಕ್ಷೆಗೆ ಸಂಬಂಧಿಸಿದ್ದು, ಈಗ ಹಿಂಪಡೆಯಲಾಗಿರುವ ಸಿಆರ್‌ಪಿಸಿಯ 164ಎ ಅನ್ನು ಅಕ್ಷರಶಃ ನಕಲು ಮಾಡಲಾಗಿದೆ ಎಂದು ಪೀಠ ಹೇಳಿದೆ. ಹೊಸ ಮತ್ತು ಹಳೆಯ ಎರಡೂ ಸೆಕ್ಷನ್‌ಗಳಲ್ಲಿ ಸಂತ್ರಸ್ತೆಯ ಪರೀಕ್ಷೆಯನ್ನು ಮಹಿಳೆ ಅಥವಾ ಪುರುಷ ವೈದ್ಯಾಧಿಕಾರಿ ಮಾಡಬೇಕು ಎಂದು ಹೇಳಲಾಗಿದೆ ಎಂದು ನ್ಯಾಯಾಲಯ ವಿವರಿಸಿದೆ.
ಬಿಎನ್‌ಎಸ್‌ಎಸ್ ಮತ್ತು ಸಿಆರ್‌ಪಿಸಿಯ ಎರಡೂ ಸೆಕ್ಷನ್‌ಗಳು ಪೋಕ್ಸೊ ಕಾಯ್ದೆಯೆ ನಿಬಂಧನೆಗಳಿಗೆ ತದ್ವಿರುದ್ದವಾಗಿದೆ. ಪೋಕ್ಸೊ ಕಾಯ್ದೆಯಲ್ಲಿ ಅಪ್ರಾಪ್ತ ಸಂತ್ರಸ್ತೆಯರ ವೈದ್ಯಕೀಯ ಪರೀಕ್ಷೆಯನ್ನು ಮಹಿಳಾ ವೈದ್ಯಾಧಿಕಾರಿ ಮಾತ್ರ ಮಾಡಬೇಕು ಎಂದು ಹೇಳಲಾಗಿದೆ. ಆದರೆ, ಸಿಆರ್‌ಪಿಸಿ ಮತ್ತು ಬಿಎನ್‌ಎಸ್‌ಎಸ್ ಸೆಕ್ಷನ್‌ಗಳಾದ 53 ಮತ್ತು 51ರಲ್ಲಿ ಮಹಿಳಾ ಸಂತ್ರಸ್ತೆಯನ್ನು ಮಹಿಳಾ ಅಧಿಕಾರಿ ಅಥವಾ ಕನಿಷ್ಠ ಮಹಿಳಾ ವೈದ್ಯಾಧಿಕಾರಿಯ ಉಸ್ತುವಾರಿಯಲ್ಲಿ ಮಾತ್ರ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯನ್ನು ಮಹಿಳಾ ವೈದ್ಯ ಸಿಬ್ಬಂದಿ ಅಥವಾ ಅವರ ಉಸ್ತುವಾರಿಯಲ್ಲಿ ಪರೀಕ್ಷೆಗೆ ಒಳಪಪಡಿಸಬಾರದು. ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರು ಪುರುಷ ವೈದ್ಯಾಧಿಕಾರಿಗಳಿಂದ ದೈಹಿಕ ಪರೀಕ್ಷೆಗೆ ಒಳಗಾಗುವ ಮೂಲಕ ಏಕೆ ಮುಜುಗರ ಅನುಭವಿಸಬೇಕು? ಎಂದು ನ್ಯಾಯಾಲಯ ಕೇಳಿದೆ.
ಆರೋಪಿಯ ಹಕ್ಕುಗಳನ್ನು ಕಾನೂನು ರಕ್ಷಿಸುತಿದ್ದು, ಸಂತ್ರಸ್ತರ ಹಕ್ಕು ರಕ್ಷಿಸುವಲ್ಲಿ ವಿಫಲವಾಗಿದೆ. ಇದರಿಂದ ಸಾಮಾನ್ಯ ಜನರ ಮನಸ್ಸಿನಲ್ಲಿ ಆರೋಪಿಗಳ ಹಕ್ಕಿನ ಬಗ್ಗೆ ವ್ಯವಸ್ಥೆ ಹೆಚ್ಚು ಉತ್ಸುಕವಾಗಿದ್ದು, ಸಂತ್ರಸ್ತರ ಬಗ್ಗೆ ಅದೇ ನಿಲುವು ಹೊಂದಿಲ್ಲ ಎಂಬ ಭಾವನೆ ಉಂಟು ಮಾಡಬಹುದು ಎಂದು ನ್ಯಾಯಾಲಯ ಬೇಸರಿಸಿದೆ.
ಈ ನೆಲೆಯಲ್ಲಿ ಪರಿಸ್ಥಿತಿಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಗಮನಹರಿಸಬೇಕು. ಬಿಎನ್‌ಎಸ್‌ಎಸ್‌ನ ಸೆಕ್ಷನ್ 184ಕ್ಕೆ ತಿದ್ದುಪಡಿ ತರಬೇಕು ಎಂದು ಪೀಠ ನಿರ್ದೇಶಿಸಿದೆ.