ಭಟ್ಕಳದಲ್ಲಿ  76%  ಮತದಾನ

ಶಾಂತಿಯುತವಾಗಿ ನಡೆದ ಮತದಾನ ಪ್ರಕ್ರಿಯೇ

ಸಾಮಾನ್ಯರಲ್ಲಿ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ಕುಟುಂಬ ಸಹಿತ ನಿಂತು ಮತದಾನ‌ ಮಾಡಿದ ಸಚಿವ ಮಂಕಾಳು ವೈದ್ಯ

ಭಟ್ಕಳ ತಾಲ್ಲೂಕಿನಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆ ಶಾಂತಿಯುತವಾಗಿ ಮುಕ್ತಾಯ ಕಂಡಿದ್ದು, ಭಟ್ಕಳ ಕ್ಷೇತ್ರದಲ್ಲಿ ಶೇ. ೭೬ ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ.

 

ತಾಲ್ಲೂಕಿನಲ್ಲಿ ಮಂಗಳವಾರ ಬೆಳಿಗ್ಗೆ ಕೆಲವು ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ನಡೆದರೂ ಮಧ್ಯಾಹ್ನ ಮಂದಗತಿಯಲ್ಲಿ ಮತದಾನ ನಡೆಯಿತು. ೪ ಗಂಟೆಯ ನಂತರ ಮತ್ತೆ ಮತದಾನ ಬಿರುಸು ಪಡೆಯಿತು. ಎಲ್ಲಿಯೂ ಗಲಾಟೆಗಳು ಗೊಂದಲಗಳು  ನಡೆದ ಬಗ್ಗೆ ವರದಿಯಾಗಿಲ್ಲ. ಎಲ್ಲಾ ಕಡೆ ಯಾವುದೇ ಗೊಂದಲ ಇಲ್ಲದೇ ಮತದಾನ ನಡೆಯಿತು. ಎಲ್ಲಾ ಮತಗಟ್ಟೆಗಳಲ್ಲಿ ಬಿಗು ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿತ್ತು. ಗ್ರಾಮಾಂತರ ಮತ್ತು ಪಟ್ಟಣದಲ್ಲಿ ಹೆಚ್ಚಿನ ಮತದಾನವಾದ ಬಗ್ಗೆ ವರದಿಯಾಗಿದೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ೭೭.೪ ರಷ್ಟು ಮತದಾನ ಆಗಿದ್ದರೆ, ಲೋಕಸಭಾ ಚುನಾವಣೆಯಲ್ಲಿ ಶೇ. ೭೬ ರಷ್ಟು ಮತದಾನವಾಗಿದೆ. ಸಹಾಯಕ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಡಾ. ನಯನಾ,ತಹಸೀಲ್ದಾರ ನಾಗರಾಜ ನಾಯ್ಕ ಸೇರಿದಂತೆ ನೋಡಲ್ ಅಧಿಕಾರಿಗಳು ಮತಗಟ್ಟೆಗಳಿಗೆ ತೆರಳಿ ವ್ಯವಸ್ಥೆ ಪರಿಶೀಲಿಸಿದರು. ಸಚಿವ ಮಂಕಾಳ ಎಸ್ ವೈದ್ಯ ಅವರು ತಮ್ಮ ಮನೆ ಸನಿಹದ ಬೆದರಕೇರಿ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ತಾಲೂಕಿನಲ್ಲಿ ಮಹಿಳೆಯರಿಗೆ, ವಿಶೇಷ ಚೇತನರಿಗೆ, ಯುವಕರಿಗಾಗಿ ಮಾಡಿದ ಕೆಲವು ಮಾದರಿ ಮತಗಟ್ಟೆಗಳು ಗಮನ ಸೆಳೆದವು. ಮತದಾನ ಶಾಂತಿಯುತವಾಗಿ ನಡೆದು ಸಂಜೆ ಮತಪೆಟ್ಟಿಗೆಗಳನ್ನು ಪ್ರಥಮವಾಗಿ ತಂದು ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ತಲುಪಿಸಿದ ಪ್ರಥಮ ತಂಡಕ್ಕೆ ಸಹಾಯಕ ಆಯುಕ್ತೆ ಹಾಗೂ ಸಹಾಯಕ ಚುನಾವಣಾಧಿಕಾರಿ ಡಾ. ನಯನಾ ಎನ್. ಅವರು ಗುಲಾಬಿ ಹೂವು ನೀಡಿ ಸ್ವಾಗತಿಸಿದರು. ಗುರು ಸುಧೀಂದ್ರ ಕಾಲೇಜಿನಲ್ಲಿ ಮತಯಂತ್ರ ಸ್ವೀಕರಿಸಲು ನೂರಾರು ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

WhatsApp
Facebook
Telegram
error: Content is protected !!
Scroll to Top