ನಾವು ಜನರಿಗೆ ಬಾಗ್ಯ ಕರುಣಿಸಿದರೆ ದಿವಾಳಿ ಬಿಜೆಪಿಗರು ಕೊಟ್ಟರೆ ದೀಪಾವಳಿ ಜನಸೇವೆ ಮಾಡಿದರೆ ಇವರಿಗ್ಯಾಕೆ ಉರಿ . ಸಚಿವ ಮಂಕಾಳು ವೈದ್ಯ ಆಕ್ರೋಶದ ಪ್ರಶ್ನೆ

ಇದು ಅನ್ಯಾಯ ಮಾಡುವವರ ವಿರುದ್ಧ ನ್ಯಾಯದ ಚುನಾವಣೆ: ಡಾ.ಅಂಜಲಿ

ಭಟ್ಕಳ: ಬಿಜೆಪಿ ಅಭ್ಯರ್ಥಿ ಜಿಲ್ಲೆಗೆ ಅನ್ಯಾಯ ಮಾಡುವವರು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ಸ್ಪಂದಿಸದವರು. ನಮ್ಮದು ಈ ಅನ್ಯಾಯ ಮಾಡುವವರ ವಿರುದ್ಧದ ನ್ಯಾಯದ ಚುನಾವಣೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.

ಶಿರಾಲಿ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಆರು ಬಾರಿ ಆಯ್ಕೆಯಾದರೂ ಜನರಿಗೆ ನ್ಯಾಯ ಕೊಡಿಸಲಾಗದವರನ್ನ ಈಗ ಮತ್ತೆ ಅಭ್ಯರ್ಥಿಯಾಗಿ ಬಿಜೆಪಿಯವರು ಸ್ಪರ್ಧೆಗೆ ಇಳಿಸಿದ್ದಾರೆ. ಆರು ಬಾರಿಯೂ ಜನರಿಗಾಗಿ ಏನನ್ನೂ ಮಾಡದ ಮಹಾತ್ಮರು ಅವರು ಎಂದು ವ್ಯಂಗ್ಯವಾಡಿದ ಅವರು, ಸೀತಾಪಹರಣದ ವೇಳೆ ಸೀತೆಯನ್ನ ಲಂಕೆಯಿಂದ ಕರೆತರಲು ಹನುಮಾನ್ ಕಾರಣರಾಗಿದ್ದರು. ಬಿಜೆಪಿಗರು ಅದಾನಿ, ಅಂಬಾನಿಯರ ಮೂಲಕ ನಮ್ಮ ತೆರಿಗೆ ಹಣವನ್ನ ಲಂಕೆಗೆ ಕೊಂಡೊಯ್ಯುತ್ತಿದ್ದಾರೆ. ಜನರೆಲ್ಲ ಸೇರಿ ಹನುಮಂತರಾಗಿ ನಮ್ಮ ಹಣವನ್ನ ನಾವು ವಾಪಸ್ಸು ತರಬೇಕಿದೆ ಎಂದು ಕರೆನೀಡಿದರು.

ಮನ್ ಕಿ ಬಾತ್ ಬೇಡ, ಜನ್ ಕಿ ಬಾತ್ ಕೇಳಬೇಕಿದೆ. ಪ್ರತಿ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿ ಅದಾನಿ, ಅಂಬಾನಿ ಹೊಟ್ಟೆ ತುಂಬಿಸುತ್ತಿರುವ ಬಿಜೆಪಿಗರನ್ನ ಜನ ಪ್ರಶ್ನಿಸಬೇಕಿದೆ. ನಿಮಗಾಗಿ, ನಿಮ್ಮ ತೆರಿಗೆ ಹಣ ನಿಮಗೆ ವಾಪಸ್ಸು ಬರಲು ಕಾಂಗ್ರೆಸ್ ಗೆ ಮತ ನೀಡಬೇಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಕೆಲಸ ಮಾಡದವರು ಮತ್ತೆ ಜನಪ್ರತಿನಿಧಿಗಳಾಗಬಾರದು. ಬಿಜೆಪಿಗರು ೧೦ ವರ್ಷದಲ್ಲಿ ಒಂದೊಳ್ಳೆ ಕೆಲಸ ಮಾಡಿದ್ದರೆ ಹೇಳಲಿ. ಚುನಾವಣೆ ಬರುತ್ತಿದ್ದಂತೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಪಾದಯಾತ್ರೆ ಮಾಡುತ್ತಾರೆ. ವಿಧಾನಸಭೆಯ ಅಧಿವೇಶನದಲ್ಲಿ ಆಸ್ಪತ್ರೆಯ ಬಗ್ಗೆ ಚರ್ಚೆಯಾದರೂ ಈಗಿನ ಬಿಜೆಪಿ ಆಭ್ಯರ್ಥಿ, ಅಂದಿನ ಸ್ಪೀಕರ್ ಮೌನಿಯಾಗಿದ್ದರು ಎಂದು ಕಿಡಿಕಾರಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಮಾ ಮೊಗೇರ ಮಾತನಾಡಿ, ತಿನ್ನುವ ಅನ್ನ, ಬೆಳೆಯುವ ಬೆಳೆಗೆ ಬಳಸುವ ರಸಗೊಬ್ಬ ಸೇರಿದಂತೆ ಎಲ್ಲದಕ್ಕೂ ಜಿಎಸ್‌ಟಿ ವಿಧಿಸಿ ಮೋದಿಯವರು ದರೋಡೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಮಾಡಿದ ಸರ್ಕಾರಿ ಆಸ್ತಿಗಳನ್ನ ಮಾರಿದ್ದನ್ನ ಬಿಟ್ಟರೆ ಬಿಜೆಪಿ ಸರ್ಕಾರ ಬೇರೇನನ್ನೂ ಮಾಡಿಲ್ಲ ಎಂದು ವಾಗ್ದಾಳಿ ಮಾಡಿದರು.

ದೇವಾಡಿಗ ಸಮಾಜದ ಮುಖಂಡ ವೆಂಕಟಯ್ಯ ಭೈರುಮನೆ, ಕಾಂಗ್ರೆಸ್ ಸರ್ಕಾರ ಕೊಟ್ಟ ಐದು ಗ್ಯಾರಂಟಿಗಳ ಬಗ್ಗೆ ಜನ ಯೋಚಿಸಬೇಕಿದೆ. ಭೂಸುಧಾರಣಾ ಕಾಯ್ದೆ ಮೂಲಕ ರೈತರಿಗೆ ಜೀವನ ಕಲ್ಪಿಸಿದ್ದು ಕಾಂಗ್ರೆಸ್ ಸರ್ಕಾರ. ನಮ್ಮ ಇನ್ನಷ್ಟು ಕೆಲಸಗಳಾಗಬೇಕೆಂದರೆ ಡಾ.ನಿಂಬಾಳ್ಕರ್ ಅವರು ಆರಿಸಿ ಬರಲೇಬೇಕು ಎಂದರು.

ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಐದು ವರ್ಷಗಳಲ್ಲಿ ಮಾರ್ಗರೇಟ್ ಆಳ್ವಾ ಅವರು ಮಾಡಿದಷ್ಟು ಕೆಲಸ ೩೦ ವರ್ಷಗಳಲ್ಲಿ ಬಿಜೆಪಿ ಸಂಸದರಿಂದ ಮಾಡಲಾಗಿಲ್ಲ. ಬಿಜೆಪಿ ಅಭ್ಯರ್ಥಿ ಕಾಗೇರಿ ಕೂಡ ಕೆಲ ಇಲಾಖೆಗಳನ್ನ ಶಿರಸಿಗೆ ವರ್ಗಾಯಿಸಿದ್ದು ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ ಎಂದರು.

ಈ ಸಂದರ್ಭದಲ್ಲಿ ಮಹಿಳೆಯರಿಂದ ಡಾ.ಅಂಜಲಿ ಅವರಿಗೆ ಉಡಿ ತುಂಬಿ ಗೌರವಿಸಲಾಯಿತು.

ಕೆಪಿಸಿಸಿ ಸಂಯೋಜಕ ವಿಶ್ವಾಸ್ ಅಮೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ನಾಮಧಾರಿ ಮುಖಂಡ ಸುಬ್ರಾಯ ನಾಯ್ಕ, ಗೊಂಡ ಸಮಾಜದ ಮುಖಂಡ ಮಾಸ್ತಿ ಗೊಂಡ, ಮುಸ್ಲಿಂ ಮುಖಂಡ ನಜೀರ್, ವಿಷ್ಣು ದೇವಾಡಿಗ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷೆ ಅಬ್ದುಲ್ ಮಜೀದ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜು ನಾಯ್ಕ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಅಲ್ಬರ್ಟ್ ಡಿಕೋಸ್ತಾ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ ಸೇರಿದಂತೆ ಮುಂತಾದವರಿದ್ದರು.

  • ಮಂಕಾಳ ವೈದ್ಯ, ಜಿಲ್ಲಾ ಉಸ್ತುವಾರಿ ಸಚಿವ


ನಾವು ಕೊಟ್ಟರೆ ದಿವಾಳಿ, ಬಿಜೆಪಿಗರು ಕೊಟ್ಟರೆ ದೀಪಾವಳಿಯಾ? ಬಡವರಿಗೆ ಹಣ ಕೊಟ್ಟರೆ ಇವರಿಗ್ಯಾಕೆ ಅಸಮಾಧಾನ? ಬಡವರ ವಿರುದ್ಧದ ಬಿಜೆಪಿಗೆ ಮತ ನೀಡದಿರಿ.

  • ಡಾ.ಅಂಜಲಿ ನಿಂಬಾಳ್ಕರ್, ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ಪ್ರಧಾನಿ ಹೆಸರಲ್ಲಿ ಬಿಜೆಪಿಗರು ಮತ ಕೇಳುತ್ತಿದ್ದಾರೆ. ಅವರು ನಮ್ಮ ಜನರ ಕೆಲಸ ಮಾಡಿಕೊಡಲು ಬರುತ್ತಾರಾ? ಈ ಚುನಾವಣೆ ಬಿಟ್ಟರೆ ಮುಂದಿನ ಚುನಾವಣೆಗೇ ಮನೆಯಿಂದ ಹೊರಬರುವವರ ಅವಶ್ಯಕತೆ ಈ ಜಿಲ್ಲೆಗಿಲ್ಲ.

WhatsApp
Facebook
Telegram
error: Content is protected !!
Scroll to Top