ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ಶನಿವಾರ ಮೀನುಗಾರಿಕೆ ಇಲಾಖೆ ವತಿಯಿಂದ ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯವನ್ನು ಉತ್ತಮ ಪಡಿಸಲು ಉತ್ತರ ಕನ್ನಡ ಜಿಲ್ಲೆಯ ಸಮುದ್ರದ 25 ಸ್ಥಳಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಡಿ ಕೃತಕ ಬಂಡೆಸಾಲುಗಳ ಅಳವಡಿಕೆ ಕಾರ್ಯಕ್ರಮಕ್ಕೆ ಸಚಿವ ಮಂಕಾಳ ಎಸ್ ವೈದ್ಯ ಚಾಲನೆ ನೀಡಿದರು.
ತಾಲೂಕಿನ ಬೆಳಕೆ ಗ್ರಾಮದಲ್ಲಿ ಶನಿವಾರ ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯವನ್ನು ಉತ್ತಮ ಪಡಿಸಲು ಉತ್ತರ ಕನ್ನಡ ಜಿಲ್ಲೆಯ ಸಮುದ್ರದ 25 ಸ್ಥಳಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಡಿ ಕೃತಕ ಬಂಡೆಸಾಲುಗಳ ಅಳವಡಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ
ಮೀನುಗಾರಿಕೆ ನಿರ್ವಹಣೆಗಾಗಿ, ಸಮುದ್ರ ಮೀನುಗಾರಿಕೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಆಹಾರ ಭದ್ರತೆ ಕಲ್ಪಿಸಲು ಹಾಗೂ ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯಕ್ಕಾಗಿ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳ 56 ಆಯ್ದ ಸೂಕ್ತ ಸ್ಥಳಗಳಲ್ಲಿ 17.37 ಕೋಟಿ ರೂ ವೆಚ್ಚದಲ್ಲಿ ಕೃತಕ ಬಂಡೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದರ ಮೊದಲ ಭಾಗವಾಗಿ ಭಟ್ಕಳ ತಾಲೂಕಿನ ಬೆಳಕೆಯಲ್ಲಿ 180 ಕೃತಕ ಬಂಡೆಗಳನ್ನು ಅಳವಡಿಸಲಾಗುತ್ತಿದೆ ಮೀನುಗಾರರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಬೆಳಕೆಯಲ್ಲಿ ರೂ. 200 ಕೋಟಿ ವೆಚ್ವದಲ್ಲಿ ಬಂದರು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಹಾಗೂ ಬೆಳಕೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ರಾಜ್ಯದ ಈ ವರ್ಷದ ಬಜೆಟ್‌ನಲ್ಲಿ ಮೀನುಗಾರಿಕೆ ಮತ್ತು ಬಂದರು ಇಲಾಖೆಗೆ 5000 ಕೋಟಿ ರೂ. ಮೀಸಲಿಡುವ ಮೂಲಕ ರಾಜ್ಯದ ಸಮಸ್ತ ಮೀನುಗಾರರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು
ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ ಕುಮಾರ್ ಕಳ್ಳೇರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಸಾಂಪ್ರದಾಯಕ ಮತ್ತು ನಾಡುದೋಣಿ ಮೀನುಗಾರಿಕೆ ಮಾಡಲು ಅನುಕೂಲವಾಗುವ ದೃಷ್ಟಿಯಿಂದ 5 ನಾಟಿಕಲ ಮೈಲು ಒಳಗೆ ಕೃತಕ ಬಂಡೆ ಸಾಲುಗಳನ್ನು ಅಳವಡಿಸಲಾಗುತ್ತಿದ್ದು, ವರ್ಷಕೊಮ್ಮೆ ಇದರ ನಿರ್ವಹಣೆ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬೆಳಕೆ ಗ್ರಾ. ಪಂ. ಅಧ್ಯಕ್ಷ ಜಗದೀಶ್ ಎಲ್ ನಾಯ್ಕ, ಕೆ.ಎಫ್.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕ ಗಣೇಶ್, ಕಾರವಾರ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಬಬಿನ್ ಬೋಪಣ್ಣ, ಉಡುಪಿ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್ ನಾಯಕ, ದ.ಕ. ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸಿದ್ದಯ್ಯ, ಕೆ.ಆರ್.ಐ.ಡಿ.ಎಲ್. ಮುಖ್ಯ ಅಭಿಯಂತರ ಎಸ್.ಪಿ.ರಾಜಣ್ಣ, ಉ.ಕ. ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ರಾಜು ಲೋಕಪ್ಪ ತಾಂಡೇಲ್, ಮೀನುಗಾರಿಕಾ ಸಂಕಷ್ಟ ಪರಿಹಾರ ನಿಧಿ ಸಮಿತಿ ಸದಸ್ಯ ವೆಂಕಟರಮಣ, ಮೀನುಗಾರಿಕಾ ಮುಖಂಡರಾದ ಶಂಕರ ಅಣ್ಣಪ್ಪ ಮೊಗೇರಾ, ಭಾಸ್ಕರ ಮೊಗೇರಾ ಹಾಗೂ ಇತರರು ಉಪಸ್ಥಿತರಿದ್ದರು.