ರಾಜ್ಯದ 31 ಜಿಲ್ಲೆಗಳಲ್ಲಿ KRS ಪಕ್ಷದ ರಾಜ್ಯವ್ಯಾಪಿ ಜನಜಾಗೃತಿ ಬೈಕ್ ಜಾಥಾ ಪ್ರಾರಂಭ

ತಮ್ಮ ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಮತ್ತು ರಾಜ್ಯದ ಏಕೈಕ ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಿ ಎಂದು ರಾಜ್ಯದ ಜನರನ್ನು ಕೋರಲು ಹಾಗೂ ಸ್ವಚ್ಚ, ಪ್ರಾಮಾಣಿಕ, ಜನಪರ, ಪ್ರಾದೇಶಿಕ ರಾಜಕಾರಣದ ಕುರಿತು ಜನಜಾಗೃತಿ ಮೂಡಿಸಲು ಇದೇ 19-02-2024 ರಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು #ಕರ್ನಾಟಕಕ್ಕಾಗಿನಾವು ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ ಬೈಕ್ ಜಾಥಾ ಹಮ್ಮಿಕೊಂಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಿಂದ ಆರಂಭವಾಗಲಿರುವ ಈ ಜಾಥಾದ ನೇತೃತ್ವವನ್ನು KRS ಪಕ್ಷದ ಅಧ್ಯಕ್ಷರಾದ ರವಿ ಕೃಷ್ಣಾರೆಡ್ಡಿಯವರು ವಹಿಸಲಿದ್ದು, ದಿ: 19-02-2024 (ಸೋಮವಾರ) ದಿಂದ ದಿ: 02-03-2024 (ಶನಿವಾರ) ದವರೆಗೆ, ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ #ಕರ್ನಾಟಕಕ್ಕಾಗಿನಾವು ಬೈಕ್ ಜಾಥಾ ಸಂಚರಿಸಲಿದೆ. 29 ಜಿಲ್ಲಾ ಕೇಂದ್ರಗಳು ಮತ್ತು ಐವತ್ತಕ್ಕಿಂತ ಹೆಚ್ಚು ತಾಲ್ಲೂಕು ಕೆಂದ್ರಗಳು ಸೇರಿದಂತೆ ಸುಮಾರು 82 ಪಟ್ಟಣ/ನಗರಗಳಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ದಿ: 02-03-2024, ಶನಿವಾರ, ನೆಲಮಂಗಲದಲ್ಲಿ ಬೃಹತ್ ಸಮಾರೋಪ ಸಮಾವೇಶ ನಡೆಯಲಿದೆ.
KRS ಪಕ್ಷವು ಈ ಹಿಂದೆ 2021ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ “ಭ್ರಷ್ಟರೇ, ಪವಿತ್ರ ರಾಜಕಾರಣವನ್ನು ಬಿಟ್ಟು ತೊಲಗಿ; ನಾಡಪ್ರೇಮಿಗಳೇ, ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ” ಎನ್ನುವ ಹೆಸರಿನಲ್ಲಿ ಹಮ್ಮಿಕೊಂಡಿದ್ದ 32 ದಿನಗಳ ಕಾಲದ, 3500 ಕಿಲೋಮೀಟರ್‍ಗಳ ಬೈಕ್ ಜಾಥಾವು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ರಾಜ್ಯದ ಜನರಿಗೆ ಪರಿಚಯಿಸಿದ್ದು ಮಾತ್ರವಲ್ಲದೆ, ಆ ಸಮಯದಲ್ಲಿ ರಾಜ್ಯದ ಸುಮಾರು 63 ತಾಲ್ಲೂಕು ಕಚೇರಿಗಳಲ್ಲಿ ಮಾಡಿದ್ದ “ಲಂಚಮುಕ್ತ ಕರ್ನಾಟಕ” ಅಭಿಯಾನದ ಮೂಲಕ ಜನರಿಗೂ ಹತ್ತಿರವಾಗಿತ್ತು. ಆ ಜಾಥಾದ ಕಾರಣದಿಂದ ಸಾವಿರಾರು ಜನ ಪಕ್ಷದ ಸದಸ್ಯತ್ವ ಪಡೆದರು, ನೂರಾರು ಜನ ನಾಯಕತ್ವದ ಜವಾಬ್ದಾರಿ ತೆಗೆದುಕೊಂಡರು, ನೂರಾರು ಸಾರ್ವಜನಿಕರು ದೇಣಿಗೆ ನೀಡಿದರು. ಪಕ್ಷಕ್ಕೆ ಬಲ ತುಂಬಿದರು.
ಇದೇ ರೀತಿಯ ಹತ್ತಾರು ಯಶಸ್ವಿ ಜಾಥಾ ಮತ್ತು ಅಭಿಯಾನಗಳ ಕಾರಣಕ್ಕಾಗಿಯೇ ಕಳೆದ ವರ್ಷ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಚುನಾವಣಾ ಅಕ್ರಮಗಳನ್ನು ಎಸಗದೆ, ಹಣ-ಹೆಂಡ ಹಂಚದೆ, ಜಾತಿ-ಕೋಮುಗಳ ಅನೈತಿಕ ರಾಜಕಾರಣ ಮಾಡದೆ KRS ಪಕ್ಷವು 195 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗಿದ್ದು. ಸರ್ಕಾರಿ ಅಧಿಕಾರಿಗಳ ಲಂಚಗುಳಿತನ, ಭ್ರಷ್ಟಾಚಾರ, ಪೊಲೀಸರ ದುರ್ವರ್ತನೆ ಮತ್ತು ದೌರ್ಜನ್ಯ, ನ್ಯಾಯಬೆಲೆ ಅಂಗಡಿಗಳಲ್ಲಿ ಬಡವರಿಗೆ ಆಗುವ ವಂಚನೆ ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳ ಮತ್ತು ರಾಜಕಾರಣಿಗಳ ಕರ್ತವ್ಯಲೋಪದ ವಿಚಾರ ಬಂದಾಗ ರಾಜ್ಯದ ಜನರಿಗೆ ಇಂದು ನೆನಪಾಗುವುದೇ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಾಮಾಣಿಕ ಮತ್ತು ಧೈರ್ಯಶಾಲಿ ಸೈನಿಕರು. ರಾಜ್ಯದಲ್ಲಿ ಪ್ರಾಮಾಣಿಕ, ಜನಪರ, ಮೌಲ್ಯಾಧಾರಿತ ರಾಜಕಾರಣ ಹಾಗೂ ಭ್ರಷ್ಟಾಚಾರರಹಿತ ಆಡಳಿತ ಬಯಸುವ ಕನ್ನಡಿಗರ ಏಕೈಕ ಆಶಾಕಿರಣವಾಗಿ ಇಂದು KRS ಪಕ್ಷವು ಹೊರಹೊಮ್ಮಿದೆ.
ಈ ಜಾಥಾದ ಸಂದರ್ಭದಲ್ಲಿ “ಭ್ರಷ್ಟರನ್ನು, ಅಪ್ರಾಮಾಣಿಕರನ್ನು, ಸ್ವಜನಪಕ್ಷಪಾತಿಗಳನ್ನು, ಅನೈತಿಕ ನಡವಳಿಕೆ ಉಳ್ಳವರನ್ನು, ಸುಳ್ಳರನ್ನು, ಸಮಾಜಘಾತುಕ ಶಕ್ತಿಗಳನ್ನು, ಕುಟುಂಬ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವ ಜೆ.ಸಿ.ಬಿ. ಪಕ್ಷಗಳ ಪರಮಸ್ವಾರ್ಥಿ ರಾಜಕಾರಣಿಗಳನ್ನು ತಮ್ಮ ಮತ್ತು ತಮ್ಮ ಮಕ್ಕಳ ರಾಜಕೀಯ ನಾಯಕರೆಂದು ಒಪ್ಪಿಕೊಳ್ಳದೆ ಜನಪರ ಕಾಳಜಿಯ, ಸ್ವಚ್ಚ ಮತ್ತು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನಾಡಪ್ರೇಮಿ ಸೈನಿಕರನ್ನು ಮತ್ತು KRS ಪಕ್ಷವನ್ನು ಬೆಂಬಲಿಸಿ” ಎಂದು KRS ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿಯವರು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ ಮತ್ತು “ನಾಡಪ್ರೇಮಿಗಳೇ, ಏಳಿ, ಎದ್ದೇಳಿ! ಭ್ರಷ್ಟ ವ್ಯವಸ್ಥೆಯನ್ನು ತೊಲಗಿಸಿ, ಭವ್ಯ ಸಮಾಜವನ್ನು ನಿರ್ಮಿಸಿ. ಹೆಮ್ಮೆ ಮತ್ತು ಘನತೆಯಿಂದ ಜೀವಿಸಿ, ಸ್ವಾಭಿಮಾನದಿಂದ ಬದುಕಿ, ಬಾಳಿ” ಎಂದು ಕರೆ ನೀಡಿದ್ದಾರೆ.

WhatsApp
Facebook
Telegram
error: Content is protected !!
Scroll to Top