ಭಟ್ಕಳ: ಚಿಕ್ಕಮಗಳೂರಿನ ಯುವ ವಕೀಲ ಪ್ರೀತಮ್ ಎಂ.ಟಿ. ಅವರ ಮೇಲೆ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ, ವಕೀಲರ ರಕ್ಷಣಾ ಕಾಯ್ದೆಯನ್ನು ಜ್ಯಾರಿಗೊಳಿಸುವಂತೆ ಆಗ್ರಹಿಸಿ ಭಟ್ಕಳ ವಕೀಲ ಬಳಗದಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಚಿಕ್ಕಮಗಳೂರಿನ ಪೊಲೀಸರು ಪ್ರೀತಮ್ ಎಂ.ಟಿ. ಅವರನ್ನು ಪೊಲೀಸ್ ಠಾಣೆಗೆ ಎಳೆದೊಯ್ದು, ಅವರ ಮೇಲೆ ಅಮಾನುಷವಾಗಿ ಹಲ್ಲೆ ಎಸಗಿರುವುದು ಅಕ್ಷಮ್ಯ ಅಪರಾಧವಾಗಿದ್ದು ಈಗಾಗಲೇ ಇಲಾಖೆ ಅಂತಹ ಪೊಲೀಸರನ್ನು ಅಮಾನತುಗೊಳಿಸಿದೆ. ಆದರೆ ಕಾನೂನು ಎಲ್ಲರಿಗೂ ಒಂದೇ ಆಗಿದ್ದು ಅವರ ಮೇಲೆ ದಾಖಲಾಗಿರುವ ಕೇಸಿಗೆ ಸಂಬಂಧ ಪಟ್ಟಂತೆ ಅವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಸೇವೆಯಿಂದಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ವಕೀಲರು ಭಯದಿಂದ ಬದುಕುವ ವಾತಾವರಣ ಸೃಷ್ಟಿಯಾಗಿದ್ದು, ವಕೀಲರಿಗೆ ಸೂಕ್ತ ರಕ್ಷಣೆ ಕೊಡುವ ಕುರಿತು ಮುಖ್ಯ ಮಂತ್ರಿಗಳು ವಕೀಲರ ರಕ್ಷಣಾ ಕಾಯ್ದೆಯನ್ನು ಜ್ಯಾರಿಗೊಳಿಸುವರೇ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಲಾಗಿದೆ.
ವಕೀಲರ ಸಂಘದ ಅಧ್ಯಕ್ಷ ಗಣೇಶ ಎಂ. ದೇವಾಡಿಗ ಕಾರ್ಯದರ್ಶಿ ನಾಗರಾಜ ಎಸ್. ನಾಯ್ಕ ಅವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿ ಮನವಿಯನ್ನು ಸಹಾಯಕ ಆಯುಕ್ತೆ ಡಾ. ನಯನಾ ಎನ್. ಅವರಿಗೆ ಹಸ್ತಾಂತರಿಸಲಾಯಿತು. ಹಿರಿಯ ನ್ಯಾಯವಾದಿ ಆರ್. ಆರ್. ಶ್ರೇಷ್ಟಿ ಮನವಿಯನ್ನು ಓದಿದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ವಿ.ಎಫ್.ಗೋಮ್ಸ, ಜೆ.ಡಿ. ಭಟ್ಟ, ಎಸ್.ಬಿ.ಬೊಮ್ಮಾಯಿ, ವಿ.ಆರ್.ಸರಾಫ್, ಎಸ್.ಎಂ.ಖಾನ್, ಕೆ.ಎಚ್.ನಾಯ್ಕ, ಸಿ.ಎಂ.ಭಟ್ಟ, ನಾಗರಾಜ ಈ.ಎಚ್., ಎಸ್.ಕೆ.ನಾಯ್ಕ, ಸಂತೋಷ ಎಂ.ನಾಯ್ಕ, ನಾಗರಾಜ ಹೆಗಡೆ, ರಾಜೇಶ ನಾಯ್ಕ, ವಿ.ಜೆ. ನಾಯ್ಕ, ಎಸ್.ಜೆ. ನಾಯ್ಕ, ಎಂ.ಜೆ. ನಾಯ್ಕ, ಮನೋಜ ನಾಯ್ಕ, ದಾಮೋದರ ನಾಯ್ಕ, ಮಹೇಶ ಆರ್. ನಾಯ್ಕ, ನಾರಾಯಣ ನಾಯ್ಕ, ಎಂ.ಟಿ.ನಾಯ್ಕ, ಈಶ್ವರ ನಾಯ್ಕ, ಇಮ್ರಾನ್ ಲಂಕಾ ಸೇರಿದಂತೆ ವಕೀಲರುಗಳು ಉಪಸ್ಥಿತರಿದ್ದರು.
ಮನವಿಯನ್ನು ಸ್ವೀಕರಿಸಿದ ಸಹಾಯಕ ಆಯುಕ್ತೆ ಡಾ. ನಯನಾ ಎನ್. ಅವರು ಮನವಿಯನ್ನು ಮುಖ್ಯ ಮಂತ್ರಿಗಳಿಗೆ ಕಳುಹಿಸುವುದಾಗಿ ಭರವಸೆ ನೀಡಿದರು.