Gruha lakshmi: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಎಚ್ಚರಿಕೆ | ಸಿಕ್ಕಸಿಕ್ಕ ಲಿಂಕ್ ಕ್ಲಿಕ್ ಮಾಡಿದರೆ ಖಾಲಿಯಾಗಲಿದೆ ಖಾತೆಯಲ್ಲಿದ್ದ ಹಣ

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಗೃಹ ಯೋಜನೆಗಳ ಹೆಸರಿನಲ್ಲಿ ಸೈಬರ್ ವಂಚನೆಗಳಾಗುತ್ತಿವೆ. ಸಿಕ್ಕಸಿಕ್ಕ ಲಿಂಕ್ ಮಾಡದಂತೆ ಸಿಐಡಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದ್ದು, ಸಾರ್ವಜನಿಕರಿಗೆ ಪೋರ್ಟಲ್ ಹಾಗೂ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಆದರೆ, ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಸೈಬರ್ ವಂಚಕರು ಪ್ಲೇಸ್ಟೋರ್‌ನಲ್ಲಿ ಅನಧಿಕೃತ ವೆಬ್‌ಸೈಟ್‌ಗಳ ನಕಲಿ ಲಿಂಕ್ ಮತ್ತು ಈಂಏಇ ಆ್ಯಪ್ ಸಿದ್ಧಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.

ಈಗಾಗಲೇ ಸೇವಾಸಿಂಧು ಪೋರ್ಟಲ್ ಮತ್ತು ಗೃಹಲಕ್ಷ್ಮಿ ಹೆಸರಿನಲ್ಲಿ ನಕಲಿ ಆ್ಯಪ್ ರಚಿಸಿ ಪ್ಲೇಸ್ಟೋರ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಒಂದು ವೇಳೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ಗೂಗಲ್ ಪ್ಲೇಸ್ಟೋರ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮಾಹಿತಿ ಭರ್ತಿ ಮಾಡಿದರೆ ಸೈಬರ್ ಕಳ್ಳರು ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವುದು ಗ್ಯಾರಂಟಿ.

ಬ್ಯಾ೦ಕ್ ಖಾತೆಗೆ ಕನ್ನ

ಗೃಹಜ್ಯೋತಿ ಯೋಜನೆಗೆ ವಿದ್ಯುತ್ ಬಿಲ್, ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಮಾಹಿತಿ ಅಪ್‌ಲೋಡ್ ಮಾಡಬೇಕು. ಇದಾದ ಮೇಲೆ ಮಾಸಿಕ 2,000 ರೂಪಾಯಿ ನೀಡುವ ಗೃಹಲಕ್ಷ್ಮಿ ಮತ್ತು ಯುವನಿಧಿಗೆ ಆಧಾರ್, ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಖಾತೆ ವಿವರ ಅಗತ್ಯ.

ಕೋಟ್ಯಂತರ ಜನರ ಆಧಾರ್, ಬ್ಯಾಂಕ್ ಖಾತೆ, ಯುಪಿಎ ವಿವರಗಳಿಗೆ ಕನ್ನ ಹಾಕಲು ಸೈಬರ್ ಕಳ್ಳರು ಹವಣಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗೆ ಅರ್ಜಿ ಸ್ವೀಕರಿಸುವ ನೆಪದಲ್ಲಿ ಜನರ ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್, ಕ್ರೆಡಿಟ್, ಡೆಬಿಟ್ ಕಾರ್ಡ್ ಮಾಹಿತಿ ಪಡೆದು ಜತೆಗೆ ಒನ್‌ಟೈಮ್ ಪಾಸ್‌ವರ್ಡ್ ಸ್ವೀಕರಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕಲು ಸಜ್ಜಾಗಿದ್ದಾರೆ.

ಸಿಐಡಿ ಅಧಿಕಾರಿಗಳ ಎಚ್ಚರಿಕೆ

ಪ್ಲೇಸ್ಟೋರ್‌ನಲ್ಲಿ ನಕಲಿ ಗೃಹಲಕ್ಷ್ಮಿ ಗೃಹಜ್ಯೋತಿ ಹೆಸರಿನಲ್ಲಿ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ ವೈಯಕ್ತಿಕ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಡಿ. ಯೋಜನೆ ಸಂಬ೦ಧ ಸರ್ಕಾರ ಇದುವರೆಗೂ ಯಾವುದೇ ಅಪ್ಲಿಕೇಷನ್ ಬಿಡುಗಡೆ ಮಾಡಿಲ್ಲ. ಈ ಯೋಜನೆಗಳ ನೋಂದಣಿಗಾಗಿ ಸೇವಾ ಸಿಂಧು ಪೋರ್ಟಲ್ ಬಳಸುವಂತೆ ಸಿಐಡಿ ತಿಳಿಸಿದೆ.

ಹೀಗಾಗಿ, ನಿಮ್ಮ ಮೊಬೈಲ್‌ಗೆ ಬರುವ ಅನಾಮಧೇಯ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವ ಮೊದಲು ಎಚ್ಚರಿಕೆ ವಹಿಸಬೇಕು. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ಅಗತ್ಯ ಇರುವ ಮಾಹಿತಿ ಅಪ್‌ಲೋಡ್ ಮಾಡಬೇಕು. ಜಾಲತಾಣದಲ್ಲಿ ಹರಿದಾಡುತ್ತಿರುವ ನಕಲಿ ವೆಬ್‌ಸೈಟ್ ಮತ್ತು ಲಿಂಕ್‌ಗಳ ಬಗ್ಗೆ ಜಾಗರೂಕರಾಗಿರುವಂತೆ ಸಿಐಡಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.

1930ಗೆ ಕರೆ ಮಾಡಿ ದೂರು ಸಲ್ಲಿಸಿ

ನಕಲಿ ಆ್ಯಪ್ ಮತ್ತು ವೆಬ್ಸೈಟ್ ಲಿಂಕ್ಗಳಿ೦ದ ವಂಚನೆಗೆ ಒಳಗಾದರೆ ಕೂಡಲೇ 1930ಗೆ ಕರೆ ಮಾಡಿ ದೂರು ಸಲ್ಲಿಸುವಂತೆ ಸಿಐಡಿ ಸೈಬರ್ ವಿಭಾಗದ ಅಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

WhatsApp
Facebook
Telegram
error: Content is protected !!
Scroll to Top