ಪರೇಶ ಮೆಸ್ತಾ ಸಾವಿನ ಪ್ರಕರಣದಲ್ಲಿ ಬಿಜೆಪಿ ಜನತೆಯಲ್ಲಿ ಕ್ಷಮೆ ಕೋರಬೇಕು : ಕಾಂಗ್ರೇಸ್

ಭಟ್ಕಳ: ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣ ಹಿಡಿದು ಕರಾವಳಿಯುದ್ಧಕ್ಕೂ ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದ ಬಿಜೆಪಿ, ಈಗ ಸಿಬಿಐ ತನಿಖಾ ವರದಿಯನ್ನು ನೋಡಿಕೊಂಡು ನಾಡಿನ ಜನತೆಯ ಕ್ಷಮೆ ಕೋರಬೇಕು ಎಂದು ಭಟ್ಕಳದಲ್ಲಿ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಕೊಲೆಗಾರರು ಯಾರೇ ಇರಲಿ ಅವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಅಂದು ಕಾಂಗ್ರೆಸ್ ಆಗ್ರಹಿಸಿತ್ತು. ಆದರೆ ಬಿಜೆಪಿಯವರು ಕೊಲೆಯನ್ನು ಚುನಾವಣಾ ವಿಷಯವನ್ನಾಗಿ ಮಾಡಿಕೊಂಡು ಇಡೀ ಜಿಲ್ಲೆಯಲ್ಲಿ ಗಲಭೆ ಎಬ್ಬಿಸಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯನ್ನುಂಟು ಮಾಡಿದ್ದಲ್ಲದೇ, ಅನೇಕ ಅಮಾಯಕ ಮೇಲೆ ಪ್ರಕರಣ ದಾಖಲಾಗುವಂತೆ ಮಾಡಿದರು.  ಐಜಿಪಿ ಕಾರನ್ನೇ ಸುಟ್ಟು ಹಾಕಲಾಗಿತ್ತು. ಅಲ್ಪಸಂಖ್ಯಾತರ ಮೇಲೆ ಆರೋಪ ಹೊರಿಸಿ ಸುಳ್ಳು ಸುದ್ದಿಯನ್ನು ಹರಿಬಿಡುವ ಪ್ರಯತ್ನ ನಡೆಯಿತು.

ತನಿಖೆ ನಡೆಸುತ್ತಿರುವ ಪೊಲೀಸರ ಮೇಲೆ ಭರವಸೆ ಇಲ್ಲ ಎಂದರು, ಪೋಸ್ಟ ಮಾರ್ಟಮ್ ಅನ್ನು ಮಣಿಪಾಲ ವೈದ್ಯರಿಂದಲೇ ನಡೆಸಬೇಕು ಎಂದರು. ಆಗ ಅಧಿಕಾರದಲ್ಲಿದ್ದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ, ಮಣಿಪಾಲ ಆಸ್ಪತ್ರೆಯಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಕ್ರಮ ಕೈಗೊಂಡಿತ್ತು. ಮಾತ್ರವಲ್ಲದೇ ಒಟ್ಟೂ ಪ್ರಕರಣದ ತನಿಖೆಯನ್ನೇ ತಡಮಾಡದೇ ಸಿಬಿಐಗೆ ವಹಿಸಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಅಡಿಯಲ್ಲಿ ಬರುವ ಸಿಬಿಐ ಕಳೆದ ನಾಲ್ಕೂವರೆ ವರ್ಷಗಳಿಂದ ಪರೇಶ ಮೇಸ್ತ ಸಾವು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಈಗ ಬಿ ರಿಪೋರ್ಟ ಸಲ್ಲಿಸಿದೆ. ಪರೇಶ ಮೇಸ್ತನ ಸಾವಿನ ಬಗ್ಗೆ ನಮಗೂ ಬೇಸರ ಇದ್ದು, ಆತನ ಕುಟುಂಬದವರಿಗೆ ನೆರವಾಗಲಿ ಎನ್ನುವ ಕಾರಣಕ್ಕೆ ಕೆಡಿಸಿಸಿ ಬ್ಯಾಂಕಿನಲ್ಲಿ ಉದ್ಯೋಗ ಕೊಡಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡಿದ್ದರು. ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆಯವರೇ ರು.2 ಲಕ್ಷ ಧನ ಸಹಾಯ ಒದಗಿಸಿದ್ದರು. ಆದರೆ ಬಿಜೆಪಿಯವರು ಪರೇಶ ಮೇಸ್ತನ ತಂದೆಯ ಮೇಲೆ ಒತ್ತಡ ತಂದು ಉದ್ಯೋಗ, ಧನ ಸಹಾಯ ಸ್ವೀಕರಿಸದಂತೆ ನೋಡಿಕೊಂಡರು. ಆದರೆ ಪರೇಶ ಮೇಸ್ತನ ತಂದೆಯನ್ನು ಎತ್ತಿಕಟ್ಟಿ ಎಲ್ಲ ಕಡೆ ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಹೋದರು, ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಆಪಾದನೆ ಹೊರಿಸಿದರು. ಅವರ ಹೊಲಸು ರಾಜಕಾರಣ ಎಷ್ಟಿತ್ತು ಎಂದರೆ ಸಿದ್ದರಾಮಯ್ಯನವರೇ ಕೊಲೆಗೆ ಕಾರಣ ಎಂದರು. ಈಗ ಬಿಜೆಪಿಯವರಿಗೆ ಹೇಳಲು ಏನೂ ಉಳಿದಿಲ್ಲ ಎಂದು ಹೇಳಿದರು.

ಮಾಜಿ ಶಾಸಕ ಜೆ.ಡಿ. ನಾಯ್ಕ ಮಾತನಾಡಿ, ಅಂದು ರಾಜ್ಯದಲ್ಲಿದ್ದ ಕಾಂಗ್ರೆಸ್ ಸರಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ನಿಷ್ಪಕ್ಷಪಾತ ತನಿಖೆಯಾಗಬೇಕು ಎನ್ನುವುದು ಉದ್ದೇಶವಾಗಿತ್ತು. ಆದರೆ ಪರೇಶ ಮೇಸ್ತನ ತಂದೆಯವರ ಒಳ್ಳೆಯತನವನ್ನು ಬಿಜೆಪಿ ದುರುಪಯೋಗ ಪಡಿಸಿಕೊಂಡು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿತು. ಅಂದು ಶವ ಪರೀಕ್ಷೆಯನ್ನು ಮಣಿಪಾಲದಲ್ಲಿಯೇ ಮಾಡಬೇಕು ಎಂದು ಆಗ್ರಹಿಸಿದ ಬಿಜೆಪಿ ಇಂದು ಮರೆತಂತಿದೆ. ಬಿ.ಜೆ.ಪಿ. ವಕ್ತಾರ ನಾಗರಾಜ ನಾಯ್ಕ ಸ್ವತ ವಕೀಲರಾಗಿದ್ದುಕೊಂಡು ಶವ ಪರೀಕ್ಷೆಯನ್ನು ಮಣಿಪಾಲದಲ್ಲಿ ಮಾಡಿಸುವ ಅಗತ್ಯತೆ ಇತ್ತೇ ಎಂದು ಪ್ರಶ್ನಿಸುತ್ತಾರೆ. ಇವರ ನಡೆಯೇ ಏನೆಂದು ತಿಳಿಯುತ್ತಿಲ್ಲ. ಸಿ.ಬಿ.ಐ. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾಗಿದ್ದು ಅವರು ಅಂತಿಮ ಬಿ ವರದಿಯನ್ನು ಸಲ್ಲಿಸಿದ ನಂತರ ಅದನ್ನು ಪ್ರಶ್ನೆ ಮಾಡುತ್ತೇವೆ ಎನ್ನುವುದು ಹಾಸ್ಯಾಸ್ಪದ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಮಾ ಮೊಗೇರ ಅಳ್ವೇಕೋಡಿ ಮಾತನಾಡಿ, ಸಹಜ ಸಾವನ್ನು ಕೊಲೆ ಎಂದು ಬಿಂಬಿಸಿ, ಜಿಲ್ಲೆಯಲ್ಲಿ ಗಲಭೆ ಎಬ್ಬಿಸಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತೆ ಮಾಡಿದ ಬಿಜೆಪಿ ಕೃತ್ಯ ಖಂಡನೀಯ. ಕೊಲೆಯ ಸುಳ್ಳು ಪ್ರಚಾರದಿಂದ ರಾಜ್ಯದಲ್ಲಿ 50-60 ಬಿ.ಜೆ.ಪಿ. ಶಾಸಕರು ಆಯ್ಕೆಯಾಗಿದ್ದು, ಅವರೆಲ್ಲರೂ ರಾಜೀನಾಮೆ ಕೊಟ್ಟು ಪುನಃ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.ಅಲ್ಲದೇ, ಪರೇಶ ಮೇಸ್ತ ಅವರ ಕುಟುಂಬಕ್ಕೆ ದೇಶಪಾಂಡೆಯವರು ಕೊಟ್ಟ 2 ಲಕ್ಷ ರೂಪಾಯಿಯನ್ನು ಕುಟುಂಬದವರು ನಿರಾಕರಿಸಿದ್ದಾರೆ. ಆ ಹಣ ವಾಪಾಸು ದೇಶಪಾಂಡೆಯವರಿಗೆ ತಲುಪಿಲ್ಲ. ಹಾಗಾದರೆ ಅದು ಎಲ್ಲಿ ಹೋಯಿತು ಎಂದು ಜನತೆಗೆ ತಿಳಿಸಬೇಕಾಗಿದೆ ಎಂದು ಹೇಳಿದರು.

ಹನಿಹನಿ ರಕ್ತಕ್ಕೂ ನ್ಯಾಯ ಕೊಡುವ ಅನಂತಕುಮಾರ ಎಲ್ಲಿ, ಬಾಯಿಗೆ ಬಂದ ಹಾಗೆ ಮಾತನಾಡುವ ಶೋಭಕ್ಕ ಎಲ್ಲಿ, ಹರಕು ಬಾಯಿಯ ಈಶ್ವರ ಎಲ್ಲಿ, ಸ್ವತಃ ಅಮಿತ್ ಶಾರೇ ರಾಜಕಾರಣ ಮಾಡಲು ಪರೇಶ ಮೇಸ್ತನ ಮನೆಗೆ ಹೋಗಿ ಬಂದರು. ಈಗ ಏನಾಯಿತು, ಹಿಂದೆಲ್ಲ ಜಗನ್ನಾಥ ಶೆಟ್ಟಿ ಆಯೋಗ, ರಾಮಚಂದ್ರ ಆಯೋಗ ಅಂತೆಲ್ಲ ರಸ್ತೆಗೆ ಇಳಿಯುತ್ತಿದ್ದರು. ಬಿಜೆಪಿ ಇಷ್ಟು ವರ್ಷಗಳ ಕಾಲ ಆಡಳಿತದಲ್ಲಿಯೇ ಇದ್ದರೂ ಆ ವರದಿಗಳೆಲ್ಲ ಎಲ್ಲಿ, ಮುಖ್ಯಮಂತ್ರಿಯಾದರೂ ಯಡಿಯೂರಪ್ಪ ಮಾತನಾಡಲಿಲ್ಲ, ಸಿಬಿಐ ಅತ್ಯುನ್ನತ ತನಿಖೆ ಸಂಸ್ಥೆ ಎನ್ನುವವರು ಈಗ ಅದರ ಬಗ್ಗೆ ಗೌರವ ನೀಡದೇ ಹೇಳಿಕೆ ಕೊಡುತ್ತಿದ್ದಾರೆ. ಶೋಭಾ ಕರಂದ್ಲಾಜೆ ಹೆಸರಿನ ಬಿಜೆಪಿ ನಾಯಕಿ, ಆಝಾದ್ ಅಣ್ಣಿಗೇರಿ ಎಂಬ ಅಲ್ಪಸಂಖ್ಯಾತ ವ್ಯಕ್ತಿಗೆ ಅಂತರಾಷ್ಟ್ರೀಯ ಮಟ್ಟದ ಭಯೋತ್ಪಾದಕನೊಂದಿಗೆ ಸಂಪರ್ಕ ಇದೆ ಎಂದಿದ್ದರು. ಆತನ್ನು ಪರೇಶ ಮೇಸ್ತನ ಕೊಲೆಗಾರ ಎಂದು ಹೇಳಿಕೊಂಡು ಓಡಾಡಿದವರು, ನಂತರ ಅದೇ ವ್ಯಕ್ತಿಯನ್ನು ವಕ್ಫ್ ಮಂಡಳಿಗೆ ಕರೆದುಕೊಂಡು ಬಂದರು. ಈ ಬಿಜೆಪಿಯವರಿಗೆ ಏನಾಗಿದೆ? ಮೊದಲು ಪರೇಶ ಮೇಸ್ತನ ಹೆಸರು ಹೇಳಿಕೊಂಡು ಚುನಾವಣೆ ಗೆದ್ದ ಎಲ್ಲ ಶಾಸಕರು ರಾಜಿನಾಮೆ ಕೊಟ್ಟು ಮತ್ತೆ ಚುನಾವಣೆಗೆ ಸ್ಪರ್ಧಿಸಲಿ ಎಂದೂ ಅವರು ಆಗ್ರಹಿಸಿದರು.

ಪ್ರಮುಖರಾದ ಟಿ.ಡಿ.ನಾಯ್ಕ, ವೆಂಕಟೇಶ ನಾಯ್ಕ ಚಿತ್ರಾಪುರ, ಕೆ.ಜಿ.ನಾಯ್ಕ, ಮಹಾಬಲೇಶ್ವರ ನಾಯ್ಕ, ಮಹೇಶ ನಾಯ್ಕ, ನಾಗೇಶ ದೇವಡಿಗ, ವಿಶ್ವನಾಥ ಶೆಟ್ಟಿ, ಸಚಿನ್ ನಾಯ್ಕ, ಮಂಜುನಾಥ ನಾಯ್ಕ ಉಪಸ್ಥಿತರಿದ್ದರು. 

WhatsApp
Facebook
Telegram
error: Content is protected !!
Scroll to Top