ಪಠ್ಯಕ್ರಮದ ಜೊತೆ ವೃತ್ತಿ ಶಿಕ್ಷಣಕ್ಕೂ ಮಹತ್ವ ನೀಡುತ್ತಿರುವ ಸಿದ್ದಾಪುರ ಹುಲ್ಕುತ್ರಿ ಶಾಲೆ

ಉತ್ತರ ಕನ್ನಡ ಜಿಲ್ಲೆಗೆ ಮಾದರಿಯಾದ ಸಿದ್ದಾಪುರ ಹುಲ್ಕುತ್ರಿ ಶಾಲೆ

ಸಿದ್ದಾಪುರ:- ಪಠ್ಯಕ್ರಮದಲ್ಲಿ ಬಂದ ಕೃಷಿ ಪಾಠ ಹಾಗೂ ಸೀನ ಸೆಟ್ಟರು ನಮ್ಮ ಟೀಚರು ಈ ಪಾಠಗಳ ನೈಜ ಅನುಭವಕ್ಕಾಗಿ ಪ್ರಾರಂಭಿಸಿದ ಹುಲ್ಕುತ್ರಿ ಶಾಲೆಯ ಗದ್ದೆನಾಟಿ ಕಾರ್ಯಕ್ರಮ ಕೃಷಿ ಅಧ್ಯಯನವಾಗಿ ಮಾರ್ಪಟ್ಟಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರೀಯ ಪಠ್ಯಕ್ರಮದ ಭಾಗವಾಗಿ ವೃತ್ತಿ ಶಿಕ್ಷಣವನ್ನೂ ಅಳವಡಿಸಿಕೊಂಡಂತಾಗಿದೆ.

ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹೆಮಜೆನಿ ಮಜರೆಯ ಲೋಕೇಶ ಪದ್ಮನಾಭ ಗೌಡ ಇವರ ಗದ್ದೆಯಲ್ಲಿ ನಾಟಿಕಾರ್ಯ ಮಾಡಿದ್ದಾರೆ. ಶಾಲೆಯ 5 ರಿಂದ 7ನೇ ತರಗತಿಯ ಆಸಕ್ತ 20 ವಿದ್ಯಾರ್ಥಿಗಳು ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಅಂದಾಜು 4 ಗುಂಟೆ ಭತ್ತದ ಕ್ಷೇತ್ರವನ್ನು ಒಂದುವರೆ ತಾಸಿನಲ್ಲಿ ನಾಟಿಕಾರ್ಯ ಪೂರೈಸಿ ತಮ್ಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದರು. ರೈತರಾದ ಗೋವಿಂದ ಗಿರಿಯಾ ಗೌಡ ಇವರು ನಾಟಿ ಮಾಡುವ ವಿಧಾನವನ್ನು ಮಕ್ಕಳಿಗೆ ತಿಳಿಸಿಕೊಟ್ಟರು.

ಪ್ರತಿ ವರ್ಷ ನಡೆಯುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಾಟಿಕಾರ್ಯದ ನಂತರ ಪ್ರತಿ 20 ದಿನಗಳಿಗೊಮ್ಮೆ ಸಸಿಯ ಬೆಳವಣಿಗೆಯನ್ನು ವೀಕ್ಷಿಸುತ್ತಾರೆ. ಕೊನೆಯಲ್ಲಿ ಬೆಳೆದ ಪೈರನ್ನು ಕೊಯ್ಲು ಮಾಡುವುದರ ಜೊತೆ ಭತ್ತ ಸೆಳೆಯುವ ಕಾರ್ಯವನ್ನೂ ಈ ವಿದ್ಯಾರ್ಥಿಗಳು ಮಾಡುತ್ತಿರುವುದು ವಿಶೇಷ. ಗ್ರಾಮೀಣ ಭಾಗದಲ್ಲಿ ಭತ್ತದ ಕೃಷಿ ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಶಾಲಾ ಮಕ್ಕಳಿಗೆ ಭತ್ತದ ಕೃಷಿಯ ಕುರಿತು ಸಂಪೂರ್ಣ ಜ್ಞಾನ ಸಿಗುವಂತೆ ಮಾಡಿರುವುದು ಹೆಮ್ಮೆಯ ಸಂಗತಿ.

ಸೋವಿನಕೊಪ್ಪ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ರಾಧಾ ವೆಂಕಟ್ರಮಣ ಗೌಡ ನಾಟಿ ಕಾರ್ಯವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಸುರೇಶ ಬಂಗಾರ್ಯ ಗೌಡ, ಶಾಲಾ ಮುಖ್ಯ ಶಿಕ್ಷಕರಾದ ದರ್ಶನ ಹರಿಕಾಂತ, ಜಗದೀಶ ಪದ್ಮನಾಭ ಗೌಡ, ರವಿ ಜುಟ್ಟು ಗೌಡ ಉಪಸ್ಥಿತರಿದ್ದರು.

[{ಪಾಠದಲ್ಲಿರುವ ವಿಷಯವನ್ನು ಪ್ರಾಯೋಗಿಕವಾಗಿ ಕಲಿತುಕೊಳ್ಳುವ ಅವಕಾಶ ನಮಗೆ ಲಭಿಸಿದೆ. ಭತ್ತದ ಕೃಷಿ ಕಾರ್ಯದ ನೈಜ ಅನುಭವ ಪಡೆದಿದ್ದೇನೆ.:- ಚಿನ್ಮಯ ವೆಂಕಟ್ರಮಣ ಗೌಡ, 6ನೇ ತರಗತಿ ವಿದ್ಯಾರ್ಥಿ}]

WhatsApp
Facebook
Telegram
error: Content is protected !!
Scroll to Top