ಖುರಾನ್‌ನ್ನು ಹೈಕೋರ್ಟ್‌ ತಪ್ಪಾಗಿ ವ್ಯಾಖ್ಯಾನಿಸಿದೆ’; ಸುಪ್ರೀಂ ಮೆಟ್ಟಿಲೇರಿದ ಮುಸ್ಲಿಂ ವಿದ್ವಾಂಸರ ಒಕ್ಕೂಟ

ಪ್ರಪಂಚದಾದ್ಯಂತ ಮುಸ್ಲಿಂ ಮಹಿಳೆಯರು ಮುಹಮ್ಮದ್ ಪೈಗಂಬರ್ ಅವರ ಅವಧಿಯಿಂದಲೂ ಖುರಾನ್‌ನ ಆದೇಶ ಮತ್ತು ಬೋಧನೆಗಳನ್ನು ವಿಧೇಯರಾಗಿ ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಮುಸ್ಲಿಂ ಮಹಿಳೆಯರು ತಮ್ಮ ದೇಹವನ್ನು ಮುಚ್ಚಲು ಇತರೆ ಬಟ್ಟೆಗಳನ್ನು ಹೊರತುಪಡಿಸಿ ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ವಿವಿಧ ರೀತಿಯ ಮುಸುಕುಗಳನ್ನು ಬಳಸುತ್ತಾರೆ. ಹಿಜಾಬ್‌ ಆಧುನಿಕ ಕಾಲದಲ್ಲಿ ರೂಪಿಸಲಾದ ಅಂತಹ ಒಂದು ಮುಸುಕು. ಮಹಿಳೆಯರಿಗೆ ಕಂಫರ್ಟ್‌ ಅನಿಸುವ ಕಾರಣಕ್ಕೆ ಹಿಜಾಬ್‌ ವ್ಯಾಪಕವಾದ ಪ್ರಸಿದ್ಧಿಯನ್ನು ಪಡೆದಿದೆ ಎಂದು ಮುಸ್ಲಿಂ ವಿಧ್ವಾಂಸರ ಒಕ್ಕೂಟ ಅಭಿಪ್ರಾಯಪಟ್ಟಿದೆ.

ಬೆಂಗಳೂರು: ರಾಜ್ಯದಲ್ಲಿ ಭುಗಿಲೆದ್ದಿದ್ದ ಹಿಜಾಬ್‌ ವಿವಾದದ ಬಗ್ಗೆ ಕರ್ನಾಟಕ ಹೈಕೋರ್ಟ್‌ ಕೊಟ್ಟ ತೀರ್ಪು ಮುಸ್ಲಿಂ ಸಮುದಾಯದ ಬಹುತೇಕ ಜನರಿಗೆ ಅಸಮಾಧಾನ ತಂದಿತ್ತು. ಹೈಕೋರ್ಟ್‌ ತೀರ್ಪು ವಿರುದ್ಧ ಮುಸ್ಲಿಂ ಸಮುದಾಯ ಒಂದು ದಿನ ಶಾಂತಿಯುತ ಬಂದ್‌ ಮಾಡಿ ಪ್ರತಿರೋಧವನ್ನೂ ಒಡ್ಡಿತ್ತು. ಇದೀಗ ಮುಸ್ಲಿಂ ವಿಧ್ವಾಂಸರ ಒಕ್ಕೂಟವೊಂದು ಹಿಜಾಬ್ ಕುರಿತ ಕರ್ನಾಟಕ ಹೈಕೊರ್ಟ  ತೀರ್ಪು ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

‘ಮುಸ್ಲಿಂ ಮಹಿಳೆಯರು ಹಿಜಾಬ್‌ ಧರಿಸುವುದು ಇಸ್ಲಾಂನ ಭಾಗವಲ್ಲ’ ಎಂದಿರುವ ಕರ್ನಾಟಕ ಹೈಕೋರ್ಟ್‌ ತೀರ್ಪು ವಿರುದ್ಧ ‘ಸಮಸ್ತ ಕೇರಳ ಜಂ-ಇಯ್ಯತುಲ್‌-ಉಲಮಾ’ ಮುಸ್ಲಿಂ ವಿಧ್ವಾಂಸರ ಒಕ್ಕೂಟ, ಸುಪ್ರೀಂ ಕೋರ್ಟ್‌ನ ರಜಾ ಕಾಲದ ಪೀಠದಲ್ಲಿ ಅರ್ಜಿ ಸಲ್ಲಿಸಿದೆ. ‘ಹೈಕೋರ್ಟ್‌ನ ತೀರ್ಪು ಪವಿತ್ರ ಖುರಾನ್‌ ಮತ್ತು ಹದೀಸ್‌ಗಳನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಲ್ಲದೇ, ಇಸ್ಲಾಮಿಕ್‌ ಕಾನೂನಿನ ತಪ್ಪು ತಿಳುವಳಿಕೆಯಿಂದ ಕೂಡಿದೆ’ ಎಂದು ಪ್ರತಿಪಾದಿಸಿರುವ ವಿಧ್ವಾಂಸರ ಒಕ್ಕೂಟ, ‘ಸೂರಾ 24 (ಅಧ್ಯಾಯದ) ಆಯತ್‌ 31(ಶ್ಲೋಕ) ಮತ್ತು ಸೂರಾ 33ರ ಆಯತ್‌ 59ನ್ನು ಅರ್ಜಿಯಲ್ಲಿ ಉಲ್ಲೇಖಿಸಿದೆ. ಪವಿತ್ರ ಖುರಾನ್‌ನ ಈ ಅಧ್ಯಾಯವು ಮಹಿಳೆಯರು ತಮ್ಮ ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವುದು ಕಡ್ಡಾಯ ಎಂಬುದರ ಬಗ್ಗೆ ಹೇಳುತ್ತದೆ. ಹೆಣ್ಣು ತನ್ನ ಕುಟುಂಬವಲ್ಲದ ಪರ ಪುರುಷನ ಮುಂದೆ ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವುದು ಖುರಾನ್ ನಿಯಮದ ಸ್ಪಷ್ಟ ಆದೇಶವಾಗಿದೆ. ಇದು ದೇವರ ಸಂದೇಶವಾಹಕ ಮತ್ತು ಮುಸ್ಲಿಂ ಸಮುದಾಯದ ಸರ್ವೋಚ್ಛ ನಾಯಕ ಮುಹಮ್ಮದ್ ಅವರ ಬೋಧನೆಗಳನ್ನು ಒಳಗೊಂಡಿದೆ ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ.

ಪ್ರಪಂಚದಾದ್ಯಂತ ಮುಸ್ಲಿಂ ಮಹಿಳೆಯರು ಮುಹಮ್ಮದ್ ಪೈಗಂಬರ್ ಅವರ ಅವಧಿಯಿಂದಲೂ ಖುರಾನ್‌ನ ಆದೇಶ ಮತ್ತು ಬೋಧನೆಗಳನ್ನು ವಿಧೇಯರಾಗಿ ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ ಎಂದಿರುವ ಮುಸ್ಲಿಂ ವಿಧ್ವಾಂಸರ ಒಕ್ಕೂಟ, ‘ಪ್ರಪಂಚದ ವಿವಿಧ ಭಾಗಗಳಲ್ಲಿ ಮುಸ್ಲಿಂ ಮಹಿಳೆಯರು ತಮ್ಮ ದೇಹವನ್ನು ಮುಚ್ಚಲು ಇತರೆ ಬಟ್ಟೆಗಳನ್ನು ಹೊರತುಪಡಿಸಿ ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ವಿವಿಧ ರೀತಿಯ ಮುಸುಕುಗಳನ್ನು ಬಳಸುತ್ತಾರೆ. ಹಿಜಾಬ್‌ ಆಧುನಿಕ ಕಾಲದಲ್ಲಿ ರೂಪಿಸಲಾದ ಅಂತಹ ಒಂದು ಮುಸುಕು. ಮಹಿಳೆಯರಿಗೆ ಕಂಫರ್ಟ್‌ ಅನಿಸುವ ಕಾರಣಕ್ಕೆ ಹಿಜಾಬ್‌ ವ್ಯಾಪಕವಾದ ಪ್ರಸಿದ್ಧಿಯನ್ನು ಪಡೆದಿದೆ. ಹಿಜಾಬ್‌ ಧರಿಸುವ ಹಿಂದಿರುವ ಉದ್ದೇಶ ತಲೆ ಮತ್ತು ಕುತ್ತಿಗೆಯನ್ನು ಸರಿಯಾಗಿ ಮುಚ್ಚುವುದು. ಇದು ಹಳೆಯ ಇಸ್ಲಾಮಿಕ್ ತತ್ವಗಳ ಅತ್ಯಗತ್ಯ ಭಾಗವಾಗಿದೆ’ ಎಂದು ವಕೀಲ ಜುಲ್ಫಿಕರ್‌ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಹೇಳಲಾಗಿದೆ.

ಸುನ್ನಿ ವಿದ್ವಾಂಸರನ್ನೂ ಒಳಗೊಂಡಿರುವ ಅರ್ಜಿದಾರರ ಸಂಘಟನೆಯು ‘ಹೈಕೋರ್ಟ್‌ ತೀರ್ಪಿನ ಅನ್ವಯವು ಕರ್ನಾಟಕಕ್ಕೆ ಸೀಮಿತವಾಗಿದ್ದರೂ, ಅಲ್ಲಿ ಹೇಳಲಾದ ಕಾನೂನು ಪ್ರತಿಪಾದನೆಯು ದೇಶಾದ್ಯಂತ ದೊಡ್ಡ ಪರಿಣಾಮವನ್ನು ಬೀರುತ್ತದೆ’ ಎಂದು ಅಭಿಪ್ರಾಯಪಟ್ಟಿದೆ. ದಕ್ಷಿಣ ಭಾರತದ ಅತಿದೊಡ್ಡ ಮುಸ್ಲಿಂ ಸಂಘಟನೆಯಾಗಿರುವ ಸಮಸ್ತ ಕೇರಳ ಜಂ-ಇಯ್ಯತುಲ್‌-ಉಲಮಾ, ಮುಸ್ಲಿಂ ಸಮುದಾಯದ ಹಿತಾಸಕ್ತಿಗಾಗಿ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ರಜಾ ಅರ್ಜಿಯನ್ನು ಸಲ್ಲಿಸಿದೆ’ ಎಂದು ಅರ್ಜಿದಾರರು ಹೇಳಿದ್ದಾರೆ.

WhatsApp
Facebook
Telegram
error: Content is protected !!
Scroll to Top