ಗಡುವು ಮುಗಿದರೂ ಅರ್ಜಿ ಸಲ್ಲಿಸಲು ವಿಶೇಷ ಚೇತನರಿಗೆ ಅವಕಾಶ ಕಲ್ಪಿಸಿದ ಸುಪ್ರೀಂಕೋರ್ಟ್

ನವದೆಹಲಿ: ಭಾರತೀಯ ಪೊಲೀಸ್ ಸೇವೆ (IPS), ಭಾರತೀಯ ರೈಲ್ವೆ ರಕ್ಷಣಾ ಪಡೆ ಸೇವೆ (IRPFS) ಹಾಗೂ ದೆಹಲಿ, ದಮನ್ – ದಿಯು, ದಾದ್ರಾ – ನಗರ್ ಹವೇಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪ ಪೊಲೀಸ್ ಸೇವೆಗಳ (DANIPS), ಯುಪಿಎಸ್‌ಸಿ ಪರೀಕ್ಷೆಗಳಿಗೆ ಗಡುವು ಮೀರಿದ್ದರೂ ಅರ್ಜಿ ಸಲ್ಲಿಸಲು ವಿಶೇಷ ಚೇತನ ಅಭ್ಯರ್ಥಿಗಳಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

ಈ ಮೇಲಿನ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಅವಧಿ ಗುರುವಾರವೇ ಕೊನೆಗೊಂಡಿದೆ. ಆದರೂ ತಾತ್ಕಾಲಿಕವಾಗಿ ಅರ್ಜಿಗಳನ್ನು ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಅಭಯ್ ಎಸ್. ಓಕಾ ಅವರಿದ್ದ ಪೀಠ ನಿರ್ದೇಶಿಸಿದೆ. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಭಾರತದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ಸಲಹೆಯಂತೆ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ಆದೇಶ ಹೊರಡಿಸಲಾಗಿದೆ.

ಕಾಳಗದ ಹುದ್ದೆಗಳನ್ನು ಮಾತ್ರವಲ್ಲದೆ ಆಡಳಿತಾತ್ಮಕ ಹುದ್ದೆಗಳಿಂದಲೂ ವಿಶೇಷ ಚೇತನರನ್ನು ದೂರ ಇಡಲಾಗಿದೆ ಎಂದು ನ್ಯಾಷನಲ್ ಪ್ಲಾಟ್‌ಫಾರ್ಮ್ ಫಾರ್ ದಿ ರೈಟ್ಸ್ ಆಫ್ ದಿ ಡಿಸೇಬಲ್ಡ್ ಸಂಘಟನೆ ಸಲ್ಲಿಸಿರುವ ಅರ್ಜಿಯಲ್ಲಿ ದೂರಲಾಗಿತ್ತು. ವಿಕಲ ಚೇತನರನ್ನು ಐಪಿಎಸ್ ಮತ್ತಿತರ ಹುದ್ದೆಗಳಿಂದ ದೂರ ಇಡುವಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಕಾನೂನು ಬಾಹಿರ ಮತ್ತು ಮನಸೋ ಇಚ್ಛೆಯಿಂದ ಕೂಡಿರುವಂತಹದ್ದು ಎಂದು ಆರೋಪಿಸಿತ್ತು

ಅರ್ಜಿದಾರರ ಪರ ವಾದಮಂಡಿಸಿದ ಹಿರಿಯ ವಕೀಲ ಅರವಿಂದ್ ದಾತಾರ್ ಗುರುವಾರವೇ ಅರ್ಜಿ ಸಲ್ಲಿಸಲು ಕೊನೆಯ ಇದ್ದುದರಿಂದ ಮಧ್ಯಂತರ ಪರಿಹಾರ ನೀಡುವಂತೆ ನ್ಯಾಯಾಲಯವನ್ನು ಕೋರಿದರು. ಹಾಗಾಗಿ, ನ್ಯಾಯಮೂರ್ತಿಗಳ ಪೀಠವು ಕೇಂದ್ರ ಲೋಕಸೇವಾ ಅಯೋಗದ ಪ್ರಧಾನ ಕಾರ್ಯದರ್ಶಿಯವರಿಗೆ ಅರ್ಜಿದಾರರು ಹಾಗೂ ಅಂತಹದ್ದೇ ಸ್ಥಿತಿಯಲ್ಲಿರುವವರು ಏಪ್ರಿಲ್ 1, 2022ರ ಸಂಜೆ 4 ಗಂಟೆವರೆಗೆ ಅರ್ಜಿ ಸ್ವೀಕರಿಸುವಂತೆ ಸೂಚಿಸಿತು.

ಬಳಿಕ ನ್ಯಾಯಾಲಯವು ಈಗ ನಡೆಯುತ್ತಿರುವ ಪ್ರಕರಣವು ಹಾಲಿ ಪ್ರಕ್ರಿಯೆಗೆ ಯಾವುದೇ ರೀತಿಯಲ್ಲಿ ಅಡ್ಡಿ ಉಂಟುಮಾಡುವುದಿಲ್ಲ. ಏಪ್ರಿಲ್ ೧೮ಕ್ಕೆ ಮುಂದಿನ ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದೆ.

WhatsApp
Facebook
Telegram
error: Content is protected !!
Scroll to Top