ಕರಾವಳಿಯಲ್ಲಿ ಸುಡು ಬಿಸಿಲು;ಮಾರ್ಚ್ ಆರಂಭದಲ್ಲೇ ಭಾರೀ ತಾಪಮಾನ..!

ಮಾರ್ಚ್ ತಿಂಗಳ ಆರಂಭದಲ್ಲೇ ಕರಾವಳಿ ಪ್ರದೇಶದಲ್ಲಿ ಬಿಸಿಲ ಬೇಗೆ ಹೆಚ್ಚುತ್ತಿದ್ದು, ಮಧ್ಯಾಹ್ನದ ಬಿಸಿಲು ನೆತ್ತಿಯನ್ನು ಸುಡುತ್ತಿದೆ. ಸಾಮಾನ್ಯವಾಗಿ ಫೆಬ್ರವರಿಯಿಂದ ಬೇಸಿಗೆ ಆರಂಭಗೊಂಡು, ಮಾರ್ಚ್ ನಲ್ಲಿ ಸಾಮಾನ್ಯ ಬೇಸಿಗೆ ಇರುತ್ತದೆ. ಏಪ್ರಿಲ್‌, ಮೇ ತಿಂಗಳಲ್ಲಿ ಬಿಸಿಲ ಬೇಗೆ ಹೆಚ್ಚುತ್ತಾ ಹೋಗುತ್ತದೆ. ಆದರೆ ಈಗಲೇ ಎಲ್ಲೆಡೆ ಬಿಸಿಲ ಬೇಗೆ ತೀವ್ರವಾಗಿದ್ದು, ನಾಗರಿಕರು ಗೊಣಗಾಡುವುದು ಕಂಡು ಬರುತ್ತಿದೆ.

ಈ ವರ್ಷದ ಬೇಸಿಗೆ ವಾಡಿಕೆಗಿಂತ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಬಿಸಿ ಗಾಳಿ ಬೀಸುವ ಅಪಾಯವಿಲ್ಲ. ಜನರು ಬೇಸಿಗೆ ಬಗ್ಗೆ ತಿಳಿದು ಜಾಗ್ರತೆ ವಹಿಸಬೇಕು. ಸಾಮಾನ್ಯ ಬೇಸಿಗೆ ಇರಲಿದೆ ಎಂದು ಬೆಂಗಳೂರು ಹವಮಾನ ಇಲಾಖೆ ಅಧಿಕಾರಿ ಡಾ. ಎಸ್‌.ಎಂ. ಗವಾಸ್ಕರ್‌ ಹೇಳಿದ್ದಾರೆ.

ಕರಾವಳಿಯಲ್ಲಿ ಕಳೆದ ಕೆಲವು ದಿನಗಳಲ್ಲಿ ಬೆಳಗ್ಗೆ ಮಂಜು ಕವಿದಿರುತ್ತದೆ. ಬುಧವಾರ ಬೆಳಗ್ಗೆ ಮಳೆಯೂ ಸುರಿದಿದೆ. ಆದರೆ ಸೂರ್ಯ ನೆತ್ತಿಗೇರುತ್ತಿದ್ದಂತೆ, ಸುಡು ಬಿಸಿಲು ಆವರಿಸಿ, ಹೊರಾಂಗಣದಲ್ಲಿ ಕೆಲಸ ಮಾಡುವವರನ್ನು ಬೆವರಿಳಿಸಿ ಬಿಡುತ್ತದೆ. ಮಂಗಳೂರಿನಲ್ಲಿ ಸದ್ಯದ ತಾಪಮಾನ ಗರಿಷ್ಠ 33 ಮತ್ತು ಕನಿಷ್ಠ 25 ಇದೆ.

ಮಾ.15ರ ವೇಳೆಗೆ ತಾಪಮಾನ ಇನ್ನಷ್ಟು ಹೆಚ್ಚಲಿದೆ. ಗರಿಷ್ಠ 34 ಮತ್ತು ಕನಿಷ್ಠ 26ಕ್ಕೇರಲಿದೆ. ಕರಾವಳಿಯ ಇತರ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದ್ದರೂ, ತೇವಾಂಶ ಹೆಚ್ಚಿದೆ. ಸೆಕೆ ಕಾಡುತ್ತಿದೆ. ಕೋವಿಡ್‌ನಿಂದ ಒಂದೂವರೆ ವರ್ಷ ಶಾಲೆಗಳು ಮುಚ್ಚಿದ್ದವು. ಈ ವರ್ಷದ ಪರೀಕ್ಷೆಗೆ ಸಿದ್ಧತೆ ನಡೆಯುತ್ತಿದೆ. ಬಿಸಿಲ ಬೇಗೆಗೆ ವಿದ್ಯಾರ್ಥಿಗಳು ಹೈರಾಣಾಗುತ್ತಿದ್ದಾರೆ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಪರೀಕ್ಷೆ, ಫಲಿತಾಂಶ ಮುಗಿಸಿ, ಮುಂದಿನ ಶೈಕ್ಷಣಿಕ ವರ್ಷವನ್ನು ಆರಂಭಿಸಿದ್ದು, ಬಿಸಿಲ ಬೇಗೆಯಲ್ಲಿ ಮಕ್ಕಳು ಶಾಲೆಗೆ ಹೋಗುವ ಪರಿಸ್ಥಿತಿ ಇದೆ.

ಕಟ್ಟಡ, ಕೂಲಿ ಕಾರ್ಮಿಕರು, ಸೆಂಟ್ರಿಂಗ್‌ ಕೆಲಸ ಮಾಡುವವರು ಸೇರಿದಂತೆ ಹೊರಾಂಗಣದಲ್ಲಿ ಕೆಲಸ ಮಾಡುವವರು ಬಿಸಿಲ ಬೇಗೆಗೆ ತತ್ತರಿಸುತ್ತಿದ್ದಾರೆ. ಜಾನುವಾರು, ಪ್ರಾಣಿ ಪಕ್ಷಿಗಳೂ ನೆರಳು, ನೀರಿನ ಆಸರೆಯನ್ನು ಬಯಸುತ್ತಿವೆ. ನೀರಿನ ಮೂಲಗಳು ಬತ್ತುತ್ತಿವೆ. ಹೀಗೆಯೇ ಆದರೆ, ಮುಂದಿನ ತಿಂಗಳಲ್ಲಿ ಬಹಳಷ್ಟು ಕಡೆಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಬರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಚಾರ್ಮಾಡಿಯಲ್ಲಿ ಕಾಡ್ಗಿಚ್ಚು!
ಸಾಮಾನ್ಯವಾಗಿ ಮೇ ತಿಂಗಳಲ್ಲಿ ಕೆಲವೆಡೆ ಕಾಡ್ಗಿಚ್ಚು ಕಾಣಿಸುತ್ತದೆ. ಈ ಬಾರಿ ಜನವರಿ, ಫೆಬ್ರವರಿಯಲ್ಲೇ ಅತಿಯಾದ ಬಿಸಿಲಿನಿಂದ ಚಾರ್ಮಾಡಿಯಲ್ಲಿ ಕಾಡ್ಗಿಚ್ಚು ಕಾಣಿಸಿದೆ. ಎರಡು ವರ್ಷ ಹಿಂದಿನ ಭೂ ಕುಸಿತದ ಪರಿಣಾಮ ಕಾಡಿನ ಹಸಿರ ಹೊದಿಕೆ ಕಡಿಮೆಯಾಗಿ, ನೀರಿನ ಒರತೆ ಇಲ್ಲದೆ, ಕಲ್ಲುಗಳು ಕಾಣಿಸಿಕೊಂಡು ಬಿಸಿ ತಾಪ ಹೆಚ್ಚುತ್ತಿದೆ. ಇದರಿಂದ ಕಾಡ್ಗಿಚ್ಚು ಹಬ್ಬುತ್ತಿದೆ ಎನ್ನುತ್ತಾರೆ ಪರಿಸರ ಹೋರಾಟಗಾರ ದಿನೇಶ್‌ ಹೊಳ್ಳ.

ನಗರದಲ್ಲೂ ಬಿಸಿಲ ತಾಪ
ಮಂಗಳೂರು ನಗರದಲ್ಲಿ ಸ್ಮಾರ್ಟ್‌ ಸಿಟಿ ಮತ್ತಿತರ ಯೋಜನೆಗಳಿಂದ ಮರಗಳನ್ನು ಕಡಿಯಲಾಗಿದ್ದು, ಕಾಂಕ್ರೀಟ್‌ ರಸ್ತೆ, ಕಟ್ಟಡಗಳ ನಿರ್ಮಾಣದಿಂದ ಬಿಸಿಲು ಹೆಚ್ಚುತ್ತಿದೆ. ಮರಗಳ ನೆರಳು ಇಲ್ಲದಂತಾಗಿದೆ. ಟ್ರೀ ಕಮಿಟಿ ಪ್ರಯತ್ನದಿಂದ ಅನಿವಾರ್ಯವಲ್ಲದ ಕೆಲವು ಮರಗಳನ್ನು ಉಳಿಸಲಾಗಿದೆ. ಮರ ಕಡಿತಕ್ಕೆ ಪರ್ಯಾಯ ವ್ಯವಸ್ಥೆ ಮಾಡುತ್ತಿಲ್ಲ. ನೀರು ಹಿಡಿದಿಡುವ ಗಿಡಗಳನ್ನು ನೆಡುವ ಬದಲು, ಹೂವಿನ ಗಿಡಗಳನ್ನು ನೆಡಲಾಗುತ್ತಿದೆ.

WhatsApp
Facebook
Telegram
error: Content is protected !!
Scroll to Top