ಇಲ್ಲಿನ ದೇವರಿಗೆ ನೈವೇದ್ಯಕ್ಕೆ ಸಾರಾಯಿನೇ ಬೇಕು: ಎಣ್ಣೆ ಇಲ್ದೆ ಏನೂ ಇಲ್ಲ..!

ರಾಜ್ಯ: ವಿಜಯಪುರ ತಾಲೂಕಿನ ಬಬಲಾದಿ ಗ್ರಾಮದ ಸದಾಶಿವ ಮುತ್ಯಾನ ಜಾತ್ರೆಯ ವಿಶೇಷ ಅಂದ್ರೆ ಜಾತ್ರೆಯಲ್ಲಿ ಭಕ್ತರು ಸಾರಾಯಿಯನ್ನೇ ನೈವೇದ್ಯವಾಗಿ ಅರ್ಪಿಸೋದು. ಹೌದು, ಪ್ರತಿ ವರ್ಷ ಬಬಲಾದಿ ಗ್ರಾಮದಲ್ಲಿ ಸಿದ್ದಿ ಪುರುಷ, ಕಾಲಜ್ಞಾನಿ ಸದಾಶಿವ ಅಜ್ಜನವರ ಜಾತ್ರೆಯನ್ನ ವಿಜೃಂಭನೆಯಿಂದ ಆಚರಿಸಿಕೊಂಡು ಬರಲಾಗ್ತಿದೆ. ಶಿವರಾತ್ರಿಯ ನಂತರ 5 ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಸಾರಾಯಿಯನ್ನ ಸದಾಶಿವ ಮುತ್ಯಾನಿಗೆ ಅರ್ಪಿಸೋದು ವಾಡಿಕೆ. 

ಹೀಗಾಗಿಯೇ ಜಾತ್ರೆಗೆ ಬರುವ ಸಾವಿರಾರು ಭಕ್ತರು ತೆಂಗಿನಕಾಯಿ, ಹೂವಿನ ಜೊತೆಗೆ ಕಾಸ್ಟ್ಲಿ ವಿಸ್ಕಿ, ರಮ್, ಸ್ಕಾಚ್‌ಗಳನ್ನ ತಂದಿರ್ತಾರೆ. ಸರತಿ ಸಾಲಿನಲ್ಲಿ ನಿಂತು ತಮ್ಮ ಕೈಯಲ್ಲಿನ ಸಾರಾಯಿ ಬಾಟಲಿಗಳಿಂದ ಒಂದಿಷ್ಟು ಮದ್ಯವನ್ನು ಸದಾಶಿವ ಮುತ್ಯಾ, ಹಾಗೂ ಶಕ್ತಿ ದೇವತೆ ಚಂದ್ರವ್ವ ತಾಯಿ ಗದ್ದುಗೆಯ ಎದುರಿಗಿಟ್ಟಿರುವ ಹಿತ್ತಾಳೆ ಪಾತ್ರೆಗೆ ಸುರಿಯುತ್ತಾರೆ. ಅಲ್ಲದೆ ಸಾರಾಯಿಯನ್ನೇ ಪ್ರಸಾದದ ರೂಪದಲ್ಲಿ ಹೊಟ್ಟೆಗಿಳಿಸಿಕೊಳ್ತಾರೆ. ಬಡವರು ಕಡಿಮೆ ದರದ ಸಾರಾಯಿಯನ್ನ ಅರ್ಪಿಸಿದರೆ, ಶ್ರೀಮಂತ ಭಕ್ತರು ಸಾವಿರಾರು ರು. ಮೌಲ್ಯದ ವಿಸ್ಕಿ, ಸ್ಕಾಚ್, ವೈನ್, ಬೀಯರ್ ಗಳನ್ನ ಸಮರ್ಪಿಸಿ ಮುತ್ಯಾನ ಕೃಪೆಗೆ ಪಾತ್ರರಾಗ್ತಿದ್ದಾರೆ.. ಈ ಮೂಲಕ ತಮ್ಮ ಭಕ್ತಿಯನ್ನ ಸಲ್ಲಿಸುತ್ತಾರೆ.

ಇನ್ನು ಇಲ್ಲಿ ಬರುವ ಭಕ್ತರು ಹೀಗೆ ಸಾರಾಯಿಯನ್ನ ಪವಾಡ ಪುರುಷ, ಕಾಲಜ್ಞಾನಿ ಸದಾಶಿವ ಅಜ್ಜನವರಿಗೆ ನೈವೇಧ್ಯವಾಗಿ ಅರ್ಪಿಸೋದರ ಹಿಂದೆ ವಿಶಿಷ್ಠ ಹಿನ್ನಲೆ ಅಡಗಿದೆ. ಅದೇನಂದ್ರೆ ನೂರಾರು ವರ್ಷಗಳ ಹಿಂದೆ ಆಧ್ಯಾತ್ಮ ಸಾಧಕರಾಗಿದ್ದ ಸದಾಶಿವ ಮುತ್ಯಾ ಬಬಲಾದಿ ಗ್ರಾಮಕ್ಕೆ ಕಾಲಿಟ್ಟಾಗ ಗ್ರಾಮಸ್ಥರು ಮುತ್ಯಾನ ವಾಸಕ್ಕೆ ಅಡ್ಡಿ ಪಡೆಸಿದ್ದರು. ಈ ವೇಳೆ ಸದಾಶಿವ ಮುತ್ಯನವರು ತಮ್ಮ ಬಳಿಯ ಅಗಾದ ಶಕ್ತಿಯಿಂದ ಗ್ರಾಮದ ಪಕ್ಕದಲ್ಲಿ ಹರಿಯುತ್ತಿದ್ದ ಕೃಷ್ಣಾ ನದಿಯ ನೀರನ್ನೆಲ್ಲ ಸಾರಾಯಿಯನ್ನಾಗಿ ಪರಿವರ್ತಿಸಿ ಪವಾಡ ಸೃಷ್ಠಿಸಿದ್ದಂತೆ. ಮುತ್ಯಾನ ಪವಾಡ ಕಂಡಿದ್ದ ಗ್ರಾಮಸ್ಥರು ಅಂದಿನಿಂದ ಸದಾಶಿವ ಮುತ್ಯಾನನ್ನ ಪೂಜಿಸಲು ಆರಂಭಿಸಿದ್ದರಂತೆ. ತಮ್ಮ ಆಧ್ಯಾತ್ಮಿಕ ಶಕ್ತಿಯಿಂದಲೆ ಸದಾಶಿವ ಮುತ್ಯಾ ಇದೇ ಗ್ರಾಮದಲ್ಲಿ ಸಜೀವ ಸಮಾಧಿಯಾದರು ಎನ್ನುವ ಐತಿಹ್ಯವೂ ಇದೆ. 

WhatsApp
Facebook
Telegram
error: Content is protected !!
Scroll to Top