ಪಾಕಿಸ್ತಾನ: ಮಸೀದಿಯಲ್ಲಿ ನಮಾಜ್ ವೇಳೆ ಬಾಂಬ್ ಸ್ಫೋಟ, 30 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ..!

ವಿದೇಶ(ಪೇಶಾವರ್): ಪಾಕಿಸ್ತಾನದ ವಾಯುವ್ಯ ನಗರ ಪೇಶಾವರದಲ್ಲಿ ಶುಕ್ರವಾರದ ನಮಾಜ್ ವೇಳೆ ಕಿಕ್ಕಿರಿದ ಶಿಯಾ ಮಸೀದಿಯ ಮೇಲೆ ಬಾಂಬ್ ದಾಳಿ ನಡೆಸಿದ್ದು, ಸ್ಫೋಟದಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೇಶಾವರದ ಕ್ವಿಸ್ಸಾ ಖ್ವಾನಿ ಬಜಾರ್ ಪ್ರದೇಶದ ಜಾಮಿಯಾ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸ್ಫೋಟದ ಹೊಣೆಯನ್ನು ತಕ್ಷಣ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಲೇಡಿ ರೀಡಿಂಗ್‌ನ ಮಾಧ್ಯಮ ವ್ಯವಸ್ಥಾಪಕ ಅಸಿಮ್ ಖಾನ್ ಹಾಗೂ ಡಾನ್ ವರದಿಗಳ ಪ್ರಕಾರ ಇದುವರೆಗೆ 30 ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದೆ.

ಗಾಯಗೊಂಡಿರುವ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ದಾಳಿಕೋರರು ಮಸೀದಿ ಪ್ರವೇಶಿಸಲು ಪ್ರಯತ್ನಿಸಿದರು. ಈ ವೇಳೆ ಕಾವಲು ಕಾಯುತ್ತಿದ್ದ ಪೊಲೀಸರ ಮೇಲೆ ಗುಂಡು ಹಾರಿಸಿದರು ಎಂದು ರಾಜಧಾನಿ ನಗರ ಪೊಲೀಸ್ ಅಧಿಕಾರಿ ಪೇಶಾವರ್ ಇಜಾಜ್ ಅಹ್ಸಾನ್ ಅವರು ಹೇಳಿದ್ದಾರೆ.

ಘಟನೆಯಲ್ಲಿ ಓರ್ವ ಪೊಲೀಸ್‌ ಅಧಿಕಾರಿ ಸಾವನ್ನಪ್ಪಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಗುಂಡಿನ ದಾಳಿಯ ನಂತರ ಸ್ಫೋಟ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top