ನವೀನ್‌ ಮೃತದೇಹ ತಾಯ್ನಾಡಿಗೆ ಬರೋದು ಡೌಟ್‌?

ರಾಜ್ಯ:ಯುದ್ಧಪೀಡಿತ ಉಕ್ರೇನ್‌ನಲ್ಲಿ ಶೆಲ್‌ ದಾಳಿಗೆ ಸಾವನ್ನಪ್ಪಿರುವ ವಿದ್ಯಾರ್ಥಿ ನವೀನ್‌ ಗ್ಯಾನಗೌಡರ್‌ ಮೃತದೇಹ ತಾಯ್ನಾಡಿಗೆ ತರುವ ಸಾಧ್ಯತೆ ಕ್ಷಣದಿಂದ ಕ್ಷಣಕ್ಕೆ ಕ್ಷೀಣಿಸುತ್ತಿದೆ. ನವೀನ್‌ ಮೃತದೇಹವನ್ನು ಸ್ವದೇಶಕ್ಕೆ ತರಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಉಕ್ರೇನ್‌ನ ರಾಯಭಾರ ಕಚೇರಿಯ ಅಧಿಕಾರಿ ನವೀನ್‌ ಸಹೋದರನಿಗೆ ಕರೆ ಮಾಡಿ ಹೇಳಿರುವುದು, ನವೀನ್‌ ಮೃತದೇಹವನ್ನು ಸ್ವದೇಶಕ್ಕೆ ತರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಕೈಚೆಲ್ಲಿದಂತೆ ಕಾಣುತ್ತಿದೆ.

ನವೀನ್‌ ಸಹೋದರನಿಗೆ ಫೋನ್ ಮಾಡಿದ್ದ ರಾಯಭಾರ ಕಚೇರಿಯ ಜಂಟಿ ಆಯುಕ್ತ ನಿಮೇಶ್‌ ಭಾರೋಟ್‌, ಉಕ್ರೇನ್‌ನಲ್ಲಿನ ಸದ್ಯದ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನವೀನ್ ಮೃತದೇಹವನ್ನು ಸ್ವದೇಶಕ್ಕೆ ತರಲು ನಾವು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದೇವೆ. ಆದರೆ, ನಮಗೆ ಅದು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆಯನ್ನು ಭಾರೋಟ್‌ ವ್ಯಕ್ತಪಡಿಸಿದ್ದಾರೆ.

ಅಲ್ಲಿನ ಪರಿಸ್ಥಿತಿ ಮಂಗಳವಾರಕ್ಕಿಂತಲೂ ಬುಧವಾರ ಇನ್ನು ಭೀಕರವಾಗಿದೆ. ನವೀನ್‌ ಮೃತದೇಹವನ್ನು ಈಗ ಆಸ್ಪತ್ರೆಗೆ ತೆಗೆದುಕೊಂಡು ಹೋಲಾಗಿದೆ. ಅಲ್ಲಿ ಬಹಳ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಮಗೆ ಏನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ ಎಂದು ರಾಯಭಾರಿ ಅಧಿಕಾರಿ ಹೇಳಿರುವುದು, ನವೀನ್‌ ಕುಟುಂಬಸ್ಥರಲ್ಲಿನ ದುಃಖದ ಮಡುವನ್ನು ಮತ್ತಷ್ಟು ಹೆಚ್ಚಿಸಿದೆ.

ಡಿಸಿ ಸಂಜಯ್‌ ಶೆಟ್ಟನವರ ಭೇಟಿ
ಇನ್ನು, ಚಳಗೇರಿ ಗ್ರಾಮಕ್ಕೆ ಹಾವೇರಿ ಡಿಸಿ ಸಂಜಯ್ ಶೆಟ್ಟಣ್ಣವರ ಭೇಟಿ ನೀಡಿ ನವೀನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಮಾಜಿ ಸಚಿವ ಬಸವರಾಜ ಶಿವಣ್ಣನವರ, ಜಿಪಂ ಸಿಇಒ ಮೊಹಮ್ಮದ್‌ ರೋಷನ್‌ ಕೂಡ ಇದ್ದರು, ನವೀನ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ವೇಳೆ ತಮ್ಮ ಪುತ್ರನ ಮೃತದೇಹ ತರುವುದಕ್ಕೆ ವ್ಯವಸ್ಥೆ ಮಾಡುವಂತೆ ತಂದೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ, ನವೀನ ಒಬ್ಬ ಬ್ರೇವ್ ಬಾಯ್‌. ಹೊರಗಡೆ ಆಹಾರ ತರೋಕೆ ಹೋಗಿದ್ದಾಗ ಶೆಲ್‌ ದಾಳಿಯಲ್ಲಿ ಮೃತಪಟ್ಟಿದ್ದಾನೆ. ನವೀನ್‌ ಮೃತದೇಹವನ್ನು ತರುವ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರದೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ನವೀನ ಕುಟುಂಬದವರು ಏಕಾಂತದಲ್ಲಿರಲು ಬಯಸುತ್ತಿದ್ದಾರೆ. ಅವರಿಗೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ‌. ಅಲ್ಲಿ ಯುದ್ಧದ ಪರಿಸ್ಥಿತಿ ಇದೆ. ತಕ್ಷಣಕ್ಕೆ ಅಲ್ಲಿನವರು ರೆಸ್ಪಾಂಡ್ ಮಾಡಲು ತಯಾರಿಲ್ಲ. ಯುದ್ಧ ನಿಂತರೆ ತಕ್ಷಣಕ್ಕೆ ಎಲ್ಲರೂ ಹೊರಗೆ ಬರ್ತಾರೆ. ನಮ್ಮ ಜಿಲ್ಲೆಯ ಉಳಿದ ಎಲ್ಲ ವಿದ್ಯಾರ್ಥಿಗಳು ಸೇಫ್ ಆಗಿದ್ದಾರೆ. ಅವರು ಹೊರಗೆ ಬರಲು ನಾವು ಅವರಿಗೆ ಮಾಡಬೇಕಾದ ಎಲ್ಲ ಕೆಲಸವನ್ನ ಮಾಡ್ತಿದ್ದೇವೆ ಎಂದರು.

ಮೃತದೇಹ ತರಲು ಎಲ್ಲ ಪ್ರಯತ್ನ ಎಂದ ಬೊಮ್ಮಾಯಿ
ಉಕ್ರೇನ್‌ನಲ್ಲಿ ರಷ್ಯಾದ ಶೆಲ್‌ ದಾಳಿಗೆ ಮೃತರಾಗಿರುವ ಹಾವೇರಿಯ ನವೀನ್‌ ಅವರ ಮೃತದೇಹ ತರಲು ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನವೀನ್‌ ಮೃತ ದೇಹ ತರಲು ಎಲ್ಲಾ ಪ್ರಯತ್ನ ಮಾಡಲಾಗುತ್ತದೆ. ವಿದೇಶಾಂಗ ಸಚಿವ ಜೈ ಶಂಕರ್‌ ಹಾಗೂ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

WhatsApp
Facebook
Telegram
error: Content is protected !!
Scroll to Top