ಶಿವರಾತ್ರಿ ಪಾದಯಾತ್ರೆ ತಂದ ಆಪತ್ತು; ಪ್ಲಾಸ್ಟಿಕ್ ತಿಂದು 30ಕ್ಕೂ ಹೆಚ್ಚು ಜಾನುವಾರುಗಳು ಬಲಿ…!

ರಾಜ್ಯ(ಚಿಕ್ಕಮಗಳೂರು): ಶಿವರಾತ್ರಿ (Shivaratri) ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಧರ್ಮಸ್ಥಳಕ್ಕೆ ವಿವಿಧ ಜಿಲ್ಲೆಗಳಿಂದ ಭಕ್ತರು (Devotees) ಪಾದಯಾತ್ರೆ ನಡೆಸಿದ್ರು. ನಿನ್ನೆ (ಮಾರ್ಚ್ 01) ಧರ್ಮಸ್ಥಳದಲ್ಲಿ ಅದ್ದೂರಿ ಶಿವರಾತ್ರಿಯನ್ನ ಆಚರಿಸಿದ್ದರು. ಆದರೆ ಮಾರ್ಗ ಮಧ್ಯೆ ಕೆಲ ಪಾದಯಾತ್ರಿಗಳು ಮಾಡಿದ ತಪ್ಪಿಗೆ ಮೂಕ ಪ್ರಾಣಿಗಳು ಬಲಿಯಾಗಿವೆ. ಪಾದಯಾತ್ರಿಗಳು ಬಿಸಾಡಿದ ಪ್ಲಾಸ್ಟಿಕ್ ತಿಂದು 30ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ಸುತ್ತಮುತ್ತ ನಡೆದಿದೆ.

ಪ್ರತಿವರ್ಷ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸುವುದು ಸಂಪ್ರದಾಯ. ಬೆಂಗಳೂರು, ಮೈಸೂರು, ರಾಮನಗರ, ಕೋಲಾರ, ತುಮಕೂರು, ಮಂಡ್ಯ, ಹಾಸನ ಸೇರಿದಂತೆ ಅನೇಕ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಪುಣ್ಯಸ್ಥಳ ಧರ್ಮಸ್ಥಳಕ್ಕೆ ಹೋಗುತ್ತಾರೆ. ಹೀಗೆ ಪಾದಯಾತ್ರೆ ನಡೆಸುವ ಭಕ್ತರು ಒಟ್ಟಾಗಿ ಸಂಗಮವಾಗುವುದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ. ಆ ಬಳಿಕ ಚಾರ್ಮಾಡಿ ಘಾಟ್ ಆರಂಭವಾಗುವುದರಿಂದ ಕೊಟ್ಟಿಗೆಹಾರ ಸುತ್ತಮುತ್ತ ವಿಶ್ರಾಂತಿ ಪಡೆದುಕೊಂಡು ಮುಂದೆ ಹೆಜ್ಜೆ ಹಾಕುತ್ತಾರೆ. ಈ ವೇಳೆ ಅಲ್ಲಲ್ಲಿ ಟೆಂಟ್ಗಳನ್ನ ಹಾಕಿ ಊಟ-ಉಪಚಾರ ಮುಗಿಸುತ್ತಾರ. ಕೆಲವರು ತಾವು ತಂದ ವಾಹನಗಳಿಂದಲೇ ಅಕ್ಕಿ-ಪದಾರ್ಥಗಳನ್ನ ಬಳಸಿಕೊಂಡು ತಿಂಡಿ-ಊಟ ಮುಗಿಸಿದ್ರೆ, ಉಳಿದವರಿಗೆ ಕೆಲ ಸಂಘ ಸಂಸ್ಥೆಗಳು ಉಟೋಪಚಾರದ ವ್ಯವಸ್ಥೆಯನ್ನ ಮಾಡುತ್ತದೆ. ಒಂದು ವಾರದಲ್ಲಿ ಬರೋಬ್ಬರಿ ಲಕ್ಷಕ್ಕೂ ಅಧಿಕ ಜನರು ಕೊಟ್ಟಿಗೆಹಾರವನ್ನ ದಾಟಿ ಮುಂದೆ ಹೋಗುತ್ತಾರೆ. ಹೀಗೆ ಊಟ-ತಿಂಡಿ ಮಾಡುವಾಗ ಉಳಿದ ಆಹಾರವನ್ನ ಅಲ್ಲಲ್ಲಿ ಎಸೆದು ಹೋಗುತ್ತಾರೆ.

ಪಾದಯಾತ್ರಿಗಳು ಈ ರೀತಿ ಎಸೆದ ಹಳಸಿದ ಅನ್ನ, ಪ್ಲಾಸ್ಟಿಕ್ ತ್ಯಾಜ್ಯ ತಿಂದು ಮೂಡಿಗೆರೆ ಸುತ್ತಮುತ್ತ 30ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಅದರಲ್ಲೂ ಹೆಚ್ಚಾಗಿ ಹಾಲು ಕೊಡುವ ಹಸುಗಳೇ ಬಲಿಯಾಗಿರುವುದು ಮಾಲೀಕರನ್ನ ಕಂಗಲಾಗಿಸಿದೆ. ದೇವರ ನೆನೆದು ವಾರವಿಡೀ ಪಾದಯಾತ್ರೆ ನಡೆಸಿ ಜನರು ಈ ರೀತಿ ಮಾಡಿದರೆ ನಾವು ಯಾರನ್ನ ದೂಷಿಸಬೇಕು ಅಂತಾ ಜಾನುವಾರುಗಳನ್ನ ಕಳೆದುಕೊಂಡವರು ಬೇಸರ ವ್ಯಕ್ತಪಡಿಸಿದ್ದಾರೆ.

ನಾವು ಪ್ರತಿವರ್ಷ ಪಾದಯಾತ್ರೆ ಹೋಗುತ್ತೇವೆ. ನಮಗೂ ದೇವರ ಮೇಲೆ ಭಕ್ತಿ ಇದೆ. ಹಾಗೆಯೇ ನಮ್ಮ ಜವಾಬ್ದಾರಿ ಏನೂ ಅಂತಾನೂ ಗೊತ್ತಿರಬೇಕು ಅಂತಾ ಹಸುವನ್ನ ಕಳೆದುಕೊಂಡಿರುವ ಗೋಣಿಬೀಡಿನ ಆದರ್ಶ್ ಭಟ್ ಹಾಗೂ ಸಂದೀಪ್ ಪಾಟೀಲ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತದ ನಿರ್ಲಕ್ಷ್ಯ?:
ರಾಜ್ಯದ ವಿವಿಧ ಭಾಗಗಳಿಂದ ಬರುವ ಜನರು ಚಿಕ್ಕಮಗಳೂರು ಜಿಲ್ಲೆಯನ್ನ ಪ್ರವೇಶಿಸಿದಾಗ ಲಕ್ಷಕ್ಕೂ ಅಧಿಕ ಪಾದಯಾತ್ರಿಗಳ ಸಂಗಮ ಒಮ್ಮೆಲ್ಲೇ ಕೊಟ್ಟಿಗೆಹಾರದ ಸುತ್ತಮುತ್ತ ಆಗುತ್ತದೆ. ಒಮ್ಮೆ ಇಷ್ಟೊಂದು ಜನಸಂಖ್ಯೆ ಬಂದಾಗ ಸೂಕ್ತ ಮೂಲಭೂತ ವ್ಯವಸ್ಥೆ ಕೊಟ್ಟಿಗೆಹಾರದಲ್ಲಾಗಲಿ, ಸುತ್ತಮುತ್ತ ಪ್ರದೇಶಗಳಲ್ಲಿಲಾಗಲಿ ಸಿಗದೇ ಪಾದಯಾತ್ರಿಗಳು ಪರದಾಟ ನಡೆಸುವಂತಾಗಿದೆ. ಅದರಲ್ಲೂ ಯುವತಿಯರು, ಮಹಿಳೆಯರು ಸೇರಿದಂತೆ ಪಾದಯಾತ್ರಿಗಳು ಶೌಚಕ್ಕೆ ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ.

ಹಸಿವಾದರೂ ತಡೆದುಕೊಳ್ಳಬಹುದು, ಆದರೆ ಸರಿಯಾದ ಮೂಲಭೂತ ವ್ಯವಸ್ಥೆ ಇಲ್ಲದಿದ್ದರೆ ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ಈ ವಿಚಾರ ಪ್ರತಿವರ್ಷ ಚಿಕ್ಕಮಗಳೂರು ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಒಂದು ವೇಳೆ ಸಂಬಂಧಪಟ್ಟ ಜಿಲ್ಲಾಡಳಿತ ನಿಗದಿತ ಸ್ಥಳಗಳಲ್ಲಿ ಟೆಂಟ್ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಪ್ಲಾಸ್ಟಿಕ್-ಅನ್ನ ಸೇರಿದಂತೆ ತ್ಯಾಜ್ಯಗಳನ್ನ ನಿರ್ವಹಣೆಗೆ ಸೂಕ್ತ ಕ್ರಮ ತೆಗೆದುಕೊಂಡರೆ ಮೂಕ ಪ್ರಾಣಿಗಳ ಜೀವವೂ ಹೋಗಲ್ಲ.

WhatsApp
Facebook
Telegram
error: Content is protected !!
Scroll to Top