25ವರ್ಷವಾದರೂ ಡಾಂಬರ್ ಮುಖ ನೋಡದ ಬಡಪಾಯಿ ರಸ್ತೆ.!

ರಾಜ್ಯ(ಮಂಗಳೂರು): ರಾಜ್ಯ ಬಿಜೆಪಿ ಮುಖಂಡರಲ್ಲಿ ಸತತವಾಗಿ ವಿಧಾನಸಭೆಗೆ ಆಯ್ಕೆಯಾಗುತ್ತಿರುವ ಶಾಸಕರಲ್ಲಿ ಸುಳ್ಯ ಕ್ಷೇತ್ರದ ಎಸ್.ಅಂಗಾರ ಕೂಡಾ ಒಬ್ಬರು. ಜನಾನುರಾಗಿ ಶಾಸಕರೆಂದೇ ಹೆಸರಾಗಿರುವ ಅಂಗಾರ ಅವರ ಕ್ಷೇತ್ರದ ವ್ಯಾಪ್ತಿಗೆ ಬರುವ ಒಂದು ರಸ್ತೆ ಕೆಟ್ಟು, ಕಿತ್ತು ಹೋಗಿ ಎರಡೂವರೆ ದಶಕಗಳೇ ಕಳೆದು ಹೋಗಿದೆ.

ಯಾವ ಕಾರಣಕ್ಕಾಗಿ ಈ ರಸ್ತೆ ರಿಪೇರಿ ಭಾಗ್ಯ ಕಂಡಿಲ್ಲ ಎನ್ನುವುದಕ್ಕೆ ಸ್ಥಳೀಯರಲ್ಲಿ ಯಾವುದೇ ಬಲವಾದ ಕಾರಣಗಳಿಲ್ಲ. ಒಂದೋ ಸ್ಥಳೀಯರು ಮನವಿ ಮಾಡಿ ಮಾಡಿ ಹೈರಾಣವಾಗಿರಬಹುದು ಅಥವಾ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ಅಸಡ್ದೆಯ ಪರಮಾವಧಿ ತೋರಿರಬಹುದು.

ಸುಳ್ಯ ವಿಧಾನಸಭಾ ಕ್ಷೇತ್ರದ ಗುತ್ತಿಗಾರು – ಬಳಪ ರಸ್ತೆಯಲ್ಲಿ ದಿನವೊಂದಕ್ಕೆ ಸುಮಾರು ಇನ್ನೂರಕ್ಕೂ ಹೆಚ್ಚು ವಾಹನಗಳು ಓಡಾಡುತ್ತವೆ. ಸುಮಾರು ಐದು ಕಿಲೋಮೀಟರ್ ವಿಸ್ತಾರದ ಈ ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿದೆ ಎಂದು ಹೇಳಲಾಗುವುದಿಲ್ಲ.

ಯಾಕೆಂದರೆ, ಗುತ್ತಿಗಾರು ನಿಂದ ಎರಡು ಕಿ.ಮೀ ರಸ್ತೆ ಸಂಪೂರ್ಣ ಹದೆಗೆಟ್ಟಿದೆ. ಮತ್ತೆ, ಅಲ್ಲಿಂದ ಸುಮಾರು ಒಂದೂವರೆ ಕಿಲೋಮೀಟರ್ ರಸ್ತೆಗೆ ಡಾಂಬರ್ ಹಾಕಲಾಗಿದೆ. ಅದಾದ ನಂತರ ಮತ್ತದೇ ಸಮಸ್ಯೆ. ಮಳೆಗಾಲದಲ್ಲಂತೂ ಕೆಟ್ಟು ಹೋಗಿರುವ ರಸ್ತೆಯಲ್ಲಿ ಓಡಾಡುವುದೂ ಒಂದೇ, ಕಂಡದಲ್ಲಿ (ಗದ್ದೆ) ಓಡಾಡುವುದೂ ಒಂದೇ. ಐದು ಕಿಲೋಮೀಟರ್ ವ್ಯಾಪ್ತಿಯ ಗುತ್ತಿಗಾರು – ಬಳಪ ರಸ್ತೆಯ ಆರಂಭದಿಂದ ಕೊನೆಯವರೆಗೆ ಅದು ಬೇರೆ ಬೇರೆ ಪಂಚಾಯತಿ ವ್ಯಾಪ್ತಿಗೆ ಬರಬಹುದು. ಹಾಗಾಗಿ, ಒಬ್ಬರು ಜನಪ್ರತಿನಿಧಿಯಾಗಿ ತಮ್ಮ ಕೆಲಸವನ್ನು ನಿರ್ವಹಿಸಿರಬಹುದು, ಇನ್ನೊಬ್ಬರು ದಿವ್ಯ ನಿರ್ಲ್ಯಕ್ಷ ತಾಳಿರಬಹುದು.

ಸ್ಥಳೀಯ ಯುವಕರ ಪ್ರಕಾರ, “ನಾವು ತಿಳಿದಹಾಗೇ ಈ ರಸ್ತೆ ರಿಪೇರಿ ಆದ ನೆನಪೇ ನಮಗಿಲ್ಲ. ರಿಪೇರಿ ಆಗುತ್ತೆ ಎನ್ನುವ ಭರವಸೆಯನ್ನೂ ನಾವು ಕಳೆದುಕೊಂಡಿದ್ದೇವೆ ಮತ್ತು ಯಾವ ಕಾರಣಕ್ಕಾಗಿ ಈ ರಸ್ತೆಯ ಒಂದು ಭಾಗಕ್ಕೆ ಮಾತ್ರ ಡಾಂಬರ್ ಹಾಕಲಾಗಿಲ್ಲ ಎನ್ನುವ ಕಾರಣವೂ ನಮಗೆ ತಿಳಿದಿಲ್ಲ” ಎನ್ನುತ್ತಾರೆ. ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದಾಗ, ಸ್ವಲ್ವದರಲ್ಲೇ ಸಚಿವ ಸ್ಥಾನದಿಂದ ವಂಚಿತರಾದವರು ಶಾಸಕ ಅಂಗಾರ. ಮಾನ್ಯ ಶಾಸಕರು, ತಮ್ಮ ಅಸೆಂಬ್ಲಿ ವ್ಯಾಪ್ತಿಯ ಗ್ರಾಮ ಪಂಚಾಯತಿ ಸದಸ್ಯರಿಗೆ ಸೂಕ್ತ ನಿರ್ದೇಶನ ಕೊಟ್ಟು, ಗುತ್ತಿಗಾರು – ಬಳಪ ರಸ್ತೆಗೆ ಡಾಂಬರು ಭಾಗ್ಯ ಕರುಣಿಸಿ, ಯಾರೂ ಮಾಡದ ಕೆಲಸವನ್ನು ಮಾಡಿದ ಹಿರಿಮೆಗೆ ಪಾತ್ರರಾಗಲಿ ಎನ್ನುವುದು ಸ್ಥಳೀಯರ ಮನಸ್ಸಿನ ಮಾತು.

WhatsApp
Facebook
Telegram
error: Content is protected !!
Scroll to Top