ನೌಕಾಪಡೆಯ ಮೇಲೆ ಕಡಲ ಮಕ್ಕಳ ಆಕ್ರೋಶ;ಮೀನುಗಾರರಿಗೆ ಬಸ್ಕಿ ಹೊಡೆಸಿ, ಹಲ್ಲೆ..!

ಉತ್ತರಕನ್ನಡ(ಕಾರವಾರ) : ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಭಾರತೀಯ ನೌಕಾಪಡೆಯ ಭದ್ರತಾ ಸಿಬ್ಬಂದಿ ಮೀನುಗಾರಿಕೆ ತೆರಳಿದ್ದ ಮೀನುಗಾರರೊಂದಿಗೆ ಅಮಾನುಷವಾಗಿ ವರ್ತಿಸುತ್ತಿದ್ದು, ದೇಶದ ರಕ್ಷಣೆಗಿರುವ ನೌಕಾಪಡೆಯ ಮೇಲೆ ಕಡಲ ಮಕ್ಕಳು ಇದೀಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರವಾರದಲ್ಲಿರುವ ಏಷ್ಯಾದ ಅತಿದೊಡ್ಡ ನೌಕಾನೆಲೆ ಸೀಬರ್ಡ್ ಗೆ ಹತ್ತಾರು ಕಡಲತೀರಗಳು ಬಲಿಯಾಗಿವೆ. ನೌಕಾನೆಲೆ ವಶದಲ್ಲಿರುವ ಕಡಲಿನಲ್ಲಿ ಮೀನುಗಾರರಿಗೆ ಮೀನುಗಾರಿಕೆಗೆ ನಿರ್ಬಂಧವಿದೆ. ಅಲ್ಲದೇ ಈ ಪ್ರದೇಶಗಳಲ್ಲಿ ಕಣ್ಗಾವಲಿಗಾಗಿ ನೌಕಾಪಡೆಯ ಭದ್ರತಾ ಸಿಬ್ಬಂದಿ ಕೂಡ ಆಗಾಗ ಕಡಲಿನಲ್ಲಿ ಪೆಟ್ರೋಲಿಂಗ್ ನಡೆಸುತ್ತಿರುತ್ತಾರೆ.

ಹೀಗೆ ಪೆಟ್ರೋಲಿಂಗ್ ಸಮಯದಲ್ಲಿ ಸೀಬರ್ಡ್ ವ್ಯಾಪ್ತಿಯ ಕಡಲಿನಿಂದ ಮೈಲಿ ದೂರದಲ್ಲಿ ಮೀನುಗಾರಿಕೆ ನಡೆಸಿದರೂ ಕೂಡ ನೌಕಾಪಡೆ ಆಗಾಗ ಮೀನುಗಾರರೊಂದಿಗೆ ಜಗಳಕ್ಕಿಳಿಯುತ್ತಿದ್ದರು. ಆದರೆ ಇದೀಗ ಮೀನುಗಾರರಿಗೆ ಬಸ್ಕಿ ಹೊಡೆಸಿ, ಹಲ್ಲೆ ನಡೆಸಿ ನೌಕಾಪಡೆಯ ಭದ್ರತಾ ಸಿಬ್ಬಂದಿ ಮೀನುಗಾರರೊಂದಿಗೆ ಅಮಾನುಷವಾಗಿ ನಡೆದುಕೊಂಡಿರುವುದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ವಾರದ ಹಿಂದೆ ನೌಕಾಪಡೆಯ ವಶದಲ್ಲಿರುವ ಅಂಜುದೀವ್ ದ್ವೀಪದ ಸಮೀಪ ಧನಲಕ್ಷಿ ಎನ್ನುವ ಹೆಸರಿನ ಮೀನುಗಾರಿಕೆ ಬೋಟ್ ಮೀನುಗಾರಿಕೆಗೆ ತೆರಳಿದ್ದ ವೇಳೆ ಅಲ್ಲಿಗೆ ಬಂದಿದ್ದ ಇಂಡಿಯನ್ ನೇವಲ್ ಪೈಲೆಟ್‌ಗಳು, ಮೀನುಗಾರಿಕೆ ಬೋಟ್ ಅನ್ನು ತಡೆದಿದ್ದರು. ಈ ಪ್ರದೇಶದಲ್ಲಿ ಮೀನುಗಾರಿಕೆ ನಡೆಸಬಾರದು ಎಂದು ಹೇಳಿದಾಗ ಬೋಟಿನಲ್ಲಿದ್ದ ಕಾರ್ಮಿಕರು ಇದಕ್ಕೆ ಒಪ್ಪಿ ವಾಪಸ್ ತೆರಳುವುದಕ್ಕೆ ಮುಂದಾದಾಗ ಅವರನ್ನು ಬಿಡದೆ, ಮೀನುಗಾರರಿಂದ 250 ಬಸ್ಕಿ ಹೊಡೆಸಿದ್ದರು.

ಇದಾದ ನಂತರ ಭಾನುವಾರ ಕೋಡಾರ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ವೈಶಾಲಿ ಎಂಬ ಬೋಟಿನಲ್ಲಿದ್ದ ಮೀನುಗಾರರ ಮೇಲೆ ನೌಕಾಪಡೆ ಭದ್ರತಾ ಸಿಬ್ಬಂದಿ ಲಾಠಿಯಿಂದ ಹಲ್ಲೆ ನಡೆಸಿ, ಕೆನ್ನೆ ಮೇಲೆ ಹೊಡೆದು ಮೀನುಗಾರರು ಆಸ್ಪತ್ರೆ ಸೇರುವಂತೆ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಮೀನುಗಾರರನ್ನು ಹಿಡಿದು ಬಸ್ಕಿ ಹೊಡೆಸಿ ಕಳುಹಿಸಿದ್ದ ನೌಕಾಪಡೆ ಭದ್ರತಾ ಸಿಬ್ಬಂದಿ, ಇದೀಗ ಮೀನುಗಾರರ ಮೇಲೆ ಹಲ್ಲೆ ನಡೆಸಿರುವುದಕ್ಕೆ ಮೀನುಗಾರ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ದೂರು ನೀಡಲಾಗಿದ್ದು, ಪೊಲೀಸ್ ದೂರು ಕೂಡ ದಾಖಲಿಸಲಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ನೌಕಾಪಡೆಯ ಅಧಿಕಾರಿಗಳೊಂದಿಗೆ ಸಭೆ ಕರೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಮೀನುಗಾರ ಮುಖಂಡರುಗಳು ಆಗ್ರಹಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top