ಸೀಮಂತ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ, ಯಾದಗಿರಿಯಲ್ಲಿ ಸಿಲಿಂಡರ್ ಸ್ಪೋಟ, 3 ಬಲಿ..!

 ರಾಜ್ಯ(ಯಾದಗಿರಿ): ಕುಟುಂಬಕ್ಕೆ ಹೊಸ ಅತಿಥಿಗಳು ಬರುತ್ತಿರುವುದಕ್ಕೆ ಸಂಭ್ರಮದೊಂದಿಗೆ ಸೀಮಂತ ಕಾರ್ಯಕ್ರಮ ನಡೆದಿತ್ತು. ದೂರದ ನೆಂಟರಿಷ್ಟರು ಬಂದು ಸೇರಿದ್ದರು. ಮಾಡಿದ್ದ ಬಗೆಬಗೆಯ ಹೋಳಿಗೆ ಊಟ ಮಾಡಬೇಕು ಎಂಬುವಷ್ಟರಲ್ಲಿ ವಿಧಿಯ ಕ್ರೂರ ನರ್ತನದಿಂದ ಕ್ಷಣಾರ್ಧದಲ್ಲಿ ನಗುವಿನ ವಾತಾವರಣವಿದ್ದ ಮನೆಯಲ್ಲಿ ಆಕ್ರಂದನ,ನರಳಾಟ ಕೇಳ ತೊಡಗಿದವು. ಸೀಮಂತ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿಯೇ ಬಿಟ್ಟಿತು.

ಇಡೀ ಗ್ರಾಮದಲ್ಲಿ ನಿಲ್ಲದ ಸಾವಿನ ಓಟಕ್ಕೆ ಭಯ ಮತ್ತು ದುಃಖದ ವಾತಾವರಣ ಮಡುಗಟ್ಟಿದೆ. ಹೌದು ಇಂತಹದೊಂದು ಘಟನೆ ತಾಲೂಕಿನ ದೋರನಹಳ್ಳಿ ಗ್ರಾಮದ ಹೊರವಲಯದ ಕ್ಯಾಂಪ್‌ನಲ್ಲಿರುವ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ. ನಿವೃತ್ತ ನೌಕರ ಸಾಹೇಬಣ್ಣ ಹಗರಟಗಿ ಎಂಬುವರಿಗೆ ಮೂವರು ಗಂಡು, ಒಬ್ಬ ಹೆಣ್ಣು ಮಕ್ಕಳಿದ್ದಾರೆ. ಅದರಲ್ಲಿ ಹೆಣ್ಣು ಮಗಳ ಮತ್ತು ಇಬ್ಬರ ಗಂಡು ಮಕ್ಕಳ ಮದುವೆ ಮಾಡಿಕೊಟ್ಟಿದ್ದರು.

ಕಳೆದ ವರ್ಷ ಮದುವೆಯಾಗಿದ್ದ ಇಬ್ಬರು ಸಹೋದರರಾದ ರುದ್ರಗೌಡ ಮತ್ತು ಬಸನಗೌಡ ಸಹೋದರರ ಪತ್ನಿಯರಾದ ಮೇಘಶ್ರೀ ಹಾಗೂ ವಾಣಿಶ್ರೀ ಅವರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕುಟುಂಬಕ್ಕೆ ಹೊಸ ಅತಿಥಿಗಳು ಬರುತ್ತಿರುವ ಸಂಭ್ರಮಕ್ಕೆ ನೆಂಟರಿಷ್ಟರು ನಗು ನಗುತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹೋಳಿಗೆ ಸೇರಿ ವಿವಿಧ ತಿನಿಸುಗಳಿಗಾಗಿ ಸಿದ್ದತೆ ಮಾಡಿಕೊಳ್ಳುತ್ತಿದ್ದರು.

ಅಡುಗೆಗಾಗಿ ಮನೆಯ ಎದುರೇ ಒಂದು ಚಿಕ್ಕ ಶಾಮಿಯಾನ ನಿರ್ಮಿಸಿ ಮನೆಯಲ್ಲಿದ್ದ ಒಂದೆರಡು ಸಿಲಿಂಡರ್‌ಗಳ ಸಹಾಯದಿಂದ ಅಡುಗೆ ಸಿದ್ದತೆ ನಡೆಸಿದ್ದರು. ಅದೇಕೋ ಒಂದು ಸಿಲಿಂಡರ್‌ ಒಲೆ ಹತ್ತಲು ತುಂಬಾ ಸತಾಯಿಸುತ್ತಿದೆ ಎಂದು ಅದನ್ನು ಪಕ್ಕಕ್ಕಿಟ್ಟು ಬೇರೊಂದು ಸಿಲೆಂಡರ್‌ ಹಾಗು ಒಲೆ ಹೊತ್ತಿಸಿ ಅಡುಗೆ ತಯಾರಿಸಿದ್ದಾರೆ. ಹೋಳಿಗೆ ಊಟಕ್ಕೆಂದು ಚಿಕ್ಕ ಮಕ್ಕಳು ಅಡುಗೆ ಹತ್ತಿರವೇ ಸುತ್ತಾಡುತ್ತಿವೆ. ಬೀಗರಿಗಾಗಿ ಶಾಮಿಯಾನದ ಕೆಳಗೆ ನೂರಾರು ಕುರ್ಚಿಗಳನ್ನು ಹಾಕಿದ್ದರು. ಇದೆಲ್ಲವನ್ನು ದೂರದಲ್ಲಿರಿಸಿದ್ದ ಪಾಪಿ ಸಿಲಿಂಡರ್‌ ತನ್ನ ಕ್ರೂರ ದೃಷ್ಠಿ ಬೀರಿದೆ.

ಅದೇಕೋ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿದೆ. ಸಂಭ್ರಮದಲ್ಲಿದ್ದ ಕುಟುಂಬಸ್ಥರು ಅನಿಲ ಸೋರಿಕೆಯತ್ತ ಗಮನ ಹರಿಸಿದ್ದಂತಿಲ್ಲ. ಪಕ್ಕದಲ್ಲಿಯೇ ಇದ್ದ ಬೆಂಕಿಯತ್ತ ಅಡುಗೆ ಅನಿಲ ಹೋಗುತ್ತಿದ್ದಂತೆ ಧಗ್ಗನೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿಯೇ ಬೆಂಕಿಯೊಂದಿಗೆ ಸಿಲಿಂಡರ್‌ ಅತ್ತಿಂದತ್ತ ಹೊರಳಾಡಿ ಶಾಮಿಯಾನಕ್ಕೆ ಹೊತ್ತಿಕೊಂಡಿದೆ. ಬೆಂಕಿಸಮೇತ ಶಾಮಿಯಾನ ಕೆಳಗೆ ಕುಳಿತವರ ಮೇಲೆ ಬಿದ್ದು ಸಂಪೂರ್ಣ ಸುಟ್ಟು ಹೋಗಿದೆ. ಒಳಗಡೆ ಸಿಲುಕಿ ಇದ್ದಬಿದ್ದವರು ಪಾರು ಮಾಡುವಷ್ಟರಲ್ಲಿ ಮಹಿಳೆ,ಪುರುಷರು ಮಕ್ಕಳು ಸೇರಿ 20ಕ್ಕೂ ಅಧಿಕ ಜನ ಗಾಯಗೊಂಡ ಘಟನೆ ನಡದೆ ಹೋಯಿತು.

ಸಿಲಿಂಡರ್‌ ಸ್ಪೋಟದಿಂದ ಮೃತ ಪಟ್ಟ 3 ವರ್ಷದ ಮಗು ಆಧ್ಯ ನಮ್ಮ ಶ್ರೀಮಠದಲ್ಲಿಯೇ ದಿನಂಪ್ರತಿ ಆಟವಾಡಿಕೊಂಡಿರುತ್ತಿದ್ದದ್ದು ನನ್ನ ಕಣ್ಣಿಗೆ ಕಟ್ಟಿದಂತಿದೆ. ಕ್ರೂರ ವಿಧಿಯಾಟಕ್ಕೆ ಬಲಿಯಾಗಿದ್ದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಕುಟುಂಬಕ್ಕೆ ಕ್ಷೇತ್ರಾಪತಿ ಮಹಾಂತೇಶ್ವರರು ಧೈರ್ಯ ನೀಡಲಿ.

ಕ್ಷಣಾರ್ಧದಲ್ಲಿ ನಡೆದ ಘಟನೆ ಮತ್ತು ದಿನ ಬೆಳಗಾದರೆ ಸಾಯುತ್ತಿರುವವರ ಸಂಖ್ಯೆ ನನ್ನನ್ನು ಕಲ್ಲುಬಂಡೆಯಂತಾಗಿಸಿದ್ದು ಮಾತು ಬರುತ್ತಿಲ್ಲ. ಏ ವಿಧಿ ನನ್ನನ್ನು ತೆಗೆದುಕೊಳ್ಳಬಾರದಿತ್ತೇ. ನೋವು ನೋಡಲು ಕೇಳಲು ಆಗುತ್ತಿಲ್ಲ.

WhatsApp
Facebook
Telegram
error: Content is protected !!
Scroll to Top