ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ಗೆ ಕೊರೊನಾ ಸೋಂಕು ದೃಢ;ಚೇತರಿಕೆಗೆ ಹಾರೈಸಿ ಪ್ರಧಾನಿ ಮೋದಿ ಟ್ವೀಟ್..!

ಲಂಡನ್‌: ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ (95) ಅವರಿಗೆ ಕೋವಿಡ್-‌19 ದೃಢಪಟ್ಟಿದೆ. ಅವರಲ್ಲಿ ಕೊರೊನಾ ಸೋಂಕಿನ ಸೌಮ್ಯ ಲಕ್ಷಣಗಳು ಕಂಡುಬಂದಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಾಣಿಯ ಉತ್ತರಾಧಿಕಾರಿ ಪ್ರಿನ್ಸ್‌ ಚಾರ್ಲ್ಸ್‌ (73) ಅವರು ಫೆ.10 ರಂದು ಲಂಡನ್‌ನ ಪಶ್ಚಿಮದ ವಿಂಡ್ಸರ್‌ ಕ್ಯಾಸಲ್‌ನಲ್ಲಿ ತನ್ನ ತಾಯಿಯನ್ನು ಭೇಟಿಯಾದ ಎರಡು ದಿನಗಳ ನಂತರ ಎರಡನೇ ಬಾರಿಗೆ ಕೊರೊನಾ ಪಾಸಿಟಿವ್‌ ಬಂದಿದೆ. 

ರಾಣಿ ಎರಡನೇ ಎಲಿಜಬೆತ್‌ ಅವರು ಕೋವಿಡ್‌ ಲಸಿಕೆಯ ಎರಡು ಡೋಸ್‌ ಹಾಗೂ ಬೂಸ್ಟರ್‌ ಡೋಸ್‌ ಕೂಡ ಪಡೆದುಕೊಂಡಿದ್ದಾರೆ. ರಾಣಿ ಅವರಿಗೆ ಸೌಮ್ಯವಾದ ಶೀತ ರೋಗಲಕ್ಷಣ ಕಂಡುಬಂದಿತ್ತು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಬಂಕಿಂಗ್‌ಹ್ಯಾಮ್‌ ಅರಮನೆಯು ತಿಳಿಸಿದೆ.ಅವರಿಗೆ ವೈದ್ಯಕೀಯ ಚಿಕಿತ್ಸೆ ಮುಂದುವರಿದಿದೆ. ಕೋವಿಡ್‌ಗೆ ಸಂಬಂಧಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದೆ.

ರಾಣಿ ಎಲಿಜಬೆತ್‌ ಅವರು ಶೀಘ್ರವೇ ಗುಣಮುಖರಾಗಿ ಆರೋಗ್ಯವಾಗಿ ಮರಳಲಿ ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ಶೇರ್‌ ಮಾಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ರಾಣಿ ಎಲಿಜಬೆತ್‌ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಇಂಗ್ಲೆಂಡ್‌ನಲ್ಲಿ ಉಳಿದಿರುವ ಕೋವಿಡ್‌ ನಿರ್ಬಂಧಗಳನ್ನು ರದ್ದುಗೊಳಿಸುವುದಾಗಿ ಘೋಷಿಸಲಾಗಿದೆ. ಇಂತಹ ಸಂದರ್ಭದಲ್ಲೇ ದೇಶದಲ್ಲಿ ಮತ್ತೆ ಕೋವಿಡ್‌ ಸೋಂಕು ಪ್ರಮಾಣ ನಿಧಾನಗತಿಯಲ್ಲಿ ಹೆಚ್ಚಳವಾಗುತ್ತಿದೆ.‌

WhatsApp
Facebook
Telegram
error: Content is protected !!
Scroll to Top