ನಾಯಕ ಅಹ್ಮದ್ ಹಸನ್ ನಿಧನ ಕೆಲವೇ ಗಂಟೆಗಳಲ್ಲಿ ಪತ್ನಿ ಕೂಡ ಸಾವು..!

ದೇಶ(ಲಕ್ನೋ): ಉತ್ತರ ಪ್ರದೇಶ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಮತ್ತು ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಹ್ಮದ್ ಹಸನ್ ಅವರು ಇಂದು ನಿಧನರಾಗಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಅವರ ಪತ್ನಿ ಹಜ್ನಾ ಬೇಗಂ(75) ಕೂಡ ಕೊನೆಯುಸಿರೆಳೆದಿದ್ದಾರೆ.

ದಂಪತಿ ಇಬ್ಬರು ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅಹ್ಮದ್ ಹಸನ್ ಅವರನ್ನು ಕೆಲವು ದಿನಗಳ ಹಿಂದೆ ಲಕ್ನೋದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ ಎಂದು ಅವರ ಅಳಿಯ ಫಿದಾ ಹುಸೇನ್ ಅನ್ಸಾರಿ ತಿಳಿದ್ದಾರೆ.

ಇಂದು ಅಂಬೇಡ್ಕರ್‍ನಗರ ಜಿಲ್ಲೆಯ ಅವರ ಪೂರ್ವಜರ ಸ್ಥಳವಾದ ಜಲಾಲ್‍ಪುರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಅಹ್ಮದ್ ಹಸನ್ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ಸಮಾಜವಾದಿ ಪಕ್ಷದ ಪೋಷಕ ಮುಲಾಯಂ ಸಿಂಗ್ ಯಾದವ್ ಅವರನ್ನು ರಾಜಕೀಯಕ್ಕೆ ಕರೆತಂದರು. ಆರು ಬಾರಿ ಎಂಎಲ್‍ಸಿಯಾಗಿದ್ದ ಅವರು ಎಸ್‍ಪಿ ಸರ್ಕಾರದಲ್ಲಿ ಮೂರು ಬಾರಿ ಸಚಿವರಾಗಿ ನೇಮಕಗೊಂಡಿದ್ದರು.

ಹಸನ್ ಅವರ ನಿಧನಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಎಸ್‍ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಹ್ಮದ್ ಹಾಸನ್ ಅವರ ನಿಧನ ನಮಗೆಲ್ಲರಿಗೂ ಅತೀವ ದುಃಖ ತಂದಿದೆ. ಹೃತ್ಪೂರ್ವಕ ಶ್ರದ್ಧಾಂಜಲಿ ಎಂದು ಟ್ವೀಟ್ ಮಾಡಿದ್ದಾರೆ.

ಡಿಸೆಂಬರ್‌ನಲ್ಲಿ ಸದನದ ಕಲಾಪದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಹಸನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ವೇಳೆ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದು ಪತ್ತೆಯಾಯಿತು. ಅಲ್ಲದೇ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಎಸ್‍ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದರು.

WhatsApp
Facebook
Telegram
error: Content is protected !!
Scroll to Top