ಶಾಲೆಗೆ 18.ಕಿ.ಮೀ ನಡೆದು ಕೊಂಡು ಹೋಗುವ ಮಕ್ಕಳಿಗೆ ಕಡೆಗೂ ಬಂತೂ ಬಸ್‌ ಭಾಗ್ಯ; ಶಿರ್ವೆ ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಬರಲಿದೆ ಬಸ್..!

ಉತ್ತರಕನ್ನಡ(ಕಾರವಾರ) :ಶಾಲಾ- ಕಾಲೇಜುಗಳಿಗೆ ತೆರಳಲು ಬಸ್ ಇಲ್ಲದೇ ಸಮಸ್ಯೆ ಅನುಭವಿಸುತ್ತಿದ್ದ ಕಾರವಾರ ತಾಲೂಕಿನ ಶಿರ್ವೆ ಗ್ರಾಮದ ವಿದ್ಯಾರ್ಥಿಗಳ ಕುರಿತು ಪತ್ರಿಕಾ ವರದಿ ಪ್ರಕಟಿಸಿದ ಮರುದಿನವೇ, ವಾಯವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿಎಸ್ ಪಾಟೀಲ್ ಕಾರವಾರಕ್ಕೆ ಭೇಟಿ ನೀಡಿ, ಸಾರಿಗೆ ಘಟಕ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿದ್ದಾರೆ. ಇತ್ತ ಕಾರವಾರ ಶಾಸಕಿ ರೂಪಾಲಿ ನಾಯ್ಕ ಕೂಡ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಶನಿವಾರದಿಂದಲೇ ಬಸ್ ಬಿಡಲು ಸೂಚಿಸಿದ್ದಾರೆ.

ಕಾರವಾರ ತಾಲೂಕಿನ ಕುಗ್ರಾಮವಾದ ಶಿರ್ವೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ನೂತನವಾಗಿ ರಸ್ತೆ ನಿರ್ಮಿಸಿದ್ದರೂ ಸಾರಿಗೆ ಬಸ್ ಬಿಡುತ್ತಿರಲಿಲ್ಲ. ಇದರಿಂದಾಗಿ ಶಿರ್ವೆ ಗ್ರಾಮದ ಹತ್ತಾರು ಮಕ್ಕಳು ಹತ್ತಾರು ಕಿಲೋ ಮೀಟರ್ ನಡೆದೇ ಶಾಲಾ- ಕಾಲೇಜುಗಳನ್ನು ತಲುಪಬೇಕಿತ್ತು. ಈ ಬಗ್ಗೆ ಪತ್ರಿಕಾ ವರದಿ ಫೆ.17ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ಈ ಬಗ್ಗೆ ತಿಳಿದ ವಿಎಸ್ ಪಾಟೀಲ್, ಕಾರವಾರಕ್ಕೆ ಆಗಮಿಸಿ, ಸಾರಿಗೆ ಘಟಕದ ಅಧಿಕಾರಿಗಳ ಸಭೆ ನಡೆಸಿದರು.ಸಭೆಯಲ್ಲಿ ಬಸ್ ಬಿಡದಿರಲು ಕಾರಣವೇನೆಂಬುದನ್ನು ಘಟಕ ವ್ಯವಸ್ಥಾಪಕಿ ಸೌಮ್ಯ ಅವರಿಂದ ಕೇಳಿವಿಎಸ್ ಪಾಟೀಲ್ ಮಾಹಿತಿ ಪಡೆದರು.

ತಕ್ಷಣ ಸಮಸ್ಯೆ ಬಗೆಹರಿಸುವಂತೆಯೂ ಸೂಚಿಸಿದ ಅವರು, ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ಭಾಗದಲ್ಲಿ ಸಾರಿಗೆ ಬಸ್‌ಗಳ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು.ಇನ್ನು ಇದೇ ವೇಳೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಗೆ ಬರುವ ಜಿಲ್ಲೆಗಳಲ್ಲಿ ನಗರದಲ್ಲಿ ಓಡಿಸಲು ಇಲೆಕ್ಟ್ರಿಕಲ್ ಬಸ್‌ಗಳನ್ನು ಖರೀದಿಸಲು ಮುಂದಾಗಿದ್ದೇವೆ ಎಂದು ವಿಎಸ್ ಪಾಟೀಲ್ ಸ್ಪಷ್ಟಪಡಿಸಿದರು.

50 ಇಲೆಕ್ಟ್ರಿಕಲ್ ಹಾಗೂ 1,500 ಸಾಮಾನ್ಯ ಸಾರಿಗೆ ಬಸ್‌ಗಳಿಗಾಗಿ ಬೇಡಿಕೆ ಇಟ್ಟಿದ್ದು, ಈ ಬಾರಿಯ ಬಜೆಟ್‌ನಲ್ಲಿ ಮಂಜೂರಾಗುವ ಸಾಧ್ಯತೆ ಇದೆ ಎಂದು ವಿಎಸ್ ಪಾಟೀಲ್ ಭರವಸೆ ವ್ಯಕ್ತಪಡಿಸಿದರು.

WhatsApp
Facebook
Telegram
error: Content is protected !!
Scroll to Top