ಹಿಜಬ್-ಕೇಸರಿ ವಿವಾದದ ಪ್ರಚೋದನಕಾರಿ ವೀಡಿಯೋ ಹರಿಬಿಟ್ಟ ಕಿಡಿಗೇಡಿಗಳು: ಪ್ರಕರಣ ದಾಖಲು

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ನಡೆದಿದ್ದ ಘಟನೆಯ ಹಳೆ ವೀಡಿಯೋಗೆ ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಸಂಬಂಧ ಕಲ್ಪಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕಿಡಿಗೇಡಿಗಳು ಭಾರೀ ಸಂಚಲನ ಸೃಷ್ಟಿಸಿದ್ದಾರೆ.

ಜನವರಿ 31 ರಂದು ಲಿಂಗಸುಗೂರು ಚರ್ಚ್‍ನ ಫಾದರ್ ಮಲ್ಲೇಶಪ್ಪ ಪಾಲ್ ಜಾನ್ ಮುದಗಲ್‍ನ ಮುಸ್ಲಿಂರ ಬಡಾವಣೆಯಲ್ಲಿ ಕುರಾನ್ ಬಗ್ಗೆ ಮಾತನಾಡಿದ್ದಕ್ಕೆ ಅಲ್ಲಿನ ಜನ ಆಕ್ರೋಶಗೊಂಡು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಸ್ಥಳೀಯ ಎಸ್‍ಡಿಪಿಐ ಕಾರ್ಯಕರ್ತ ಹಿಮದ್ ರಜಾಕ್ ಹಾಗೂ ಪಾಷಾ, ಮಲ್ಲೇಶಪ್ಪ ಪಾಲ್ ಜಾನ್‍ಗೆ ಖಡಕ್ ಎಚ್ಚರಿಕೆ ನೀಡಿದ್ದರು. ಪ್ರಚೋದನಕಾರಿಯಾಗಿ ಮಾತನಾಡಿದ್ದ ಹಿಮದ್ ರಜಾಕ್ ಹಾಗೂ ಪಾಷಾ ವಿರುದ್ಧ ಈಗಾಗಲೇ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವೀಡಿಯೋವನ್ನು ತಿರುಚಿರುವ ಕಿಡಿಗೇಡಿಗಳು ಹಿಜಬ್ ವಿಚಾರಕ್ಕೆ ಕಾಲೇಜು ಪ್ರಿನ್ಸಿಪಾಲ್‍ಗೆ ಎಸ್‍ಡಿಪಿಐ ಕಾರ್ಯಕರ್ತರು ಧಮ್ಕಿ ಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಅಂತ ಬಿಂಬಿಸಿ ವೀಡಿಯೋ ವೈರಲ್ ಮಾಡಿದ್ದಾರೆ. ಇದು ಜಿಲ್ಲೆಯಲ್ಲಿ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡಿರುವ ಜಿಲ್ಲಾ ಪೊಲೀಸ್ ಅಧಿಕಾರಿಗಳು, ಕಿಡಿಗೇಡಿಗಳು ಹರಿಬಿಟ್ಟ ಪ್ರಚೋದನಾಕಾರಿ ವೀಡಿಯೋ ಬಗ್ಗೆ ಯಾರು ತಲೆಕೆಡಿಸಿಕೊಳ್ಳಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

WhatsApp
Facebook
Telegram
error: Content is protected !!
Scroll to Top