ಧರ್ಮ ಹೇಳಿದಂತೆ ಮೈತುಂಬ ಬಟ್ಟೆ ಹಾಕುವುದು ತಪ್ಪಾ: ರಾಯರೆಡ್ಡಿ ಪ್ರಶ್ನೆ

ಕಲಬುರಗಿ: ತಮ್ಮ ಧರ್ಮ ಹೇಳುವಂತೆ ಮೈತುಂಬ ಬಟ್ಟೆ ಧರಿಸೋದು ತಪ್ಪಾ?, ಬಿಜೆಪಿಯವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಈ ವಿಷಯ ಇಟ್ಟುಕೊಂಡು ಕೋಮು ಸಂಘರ್ಷ ತಂದಿಟ್ಟಿದ್ದಾರೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ವಾಗ್ದಾಳಿ ನಡೆಸಿದರು.

ಕಲಬುರಗಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಬ್ ಧರಿಸುವದನ್ನು ಸಮರ್ಥಿಸಿಕೊಂಡರು. ಹಿಜಬ್ ಹೆಸರಲ್ಲಿ ಹಿಂಸೆ, ಕೋಮುವಾದ ಹೀಗೆ ಮುಂದುವರಿದರೆ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಅನಾವಶ್ಯಕವಾಗಿ ಹಿಜಬ್ ವಿವಾದ ನಡೆದಿದೆ. ಹಿಜಾಬ್‍ಗೆ ಪರ್ಯಾಯವಾಗಿ ಕೇಸರಿ ಶಾಲು ಹಾಕಿ ವಿದ್ಯಾರ್ಥಿಗಳನ್ನು ಕಾಲೇಜ್‍ಗೆ ಕಳುಹಿಸುವ ಕೆಲಸ ಆಗುತ್ತಿದೆ. ಹಿಜಾಬ್ ಹೊಸದಲ್ಲ. ಆದರೆ ಕೇಸರಿ ಹೊಸದು, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಶಿಸ್ತಿನ ಪಾರ್ಟಿ ಅಂತ ಹೇಳಿಕೊಳ್ಳುವ ಬಿಜೆಪಿಯಲ್ಲಿ ಒಬ್ಬೊಬ್ಬರು ಒಂದೊಂದು ತರಹ ಮಾತನಾಡುತ್ತಿದ್ದಾರೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೋಮು ಸಂಘರ್ಷ ತಂದಿಟ್ಟಿದ್ದಾರೆ ಎಂದು ದೂರಿದರು. 

ಜನರ ತಲೆಯಲ್ಲಿ ಜಾತಿ, ಧರ್ಮದ ನಶೆಯನ್ನು ಬಿಟ್ಟಿದ್ದಾರೆ. ಶಿವಮೊಗ್ಗದಲ್ಲಿ ರಾಷ್ಟ್ರಧ್ವಜದ ಸ್ಥಂಭಕ್ಕೆ ಭಾಗವತ್ ಧ್ವಜ ಹಾರಿಸುತ್ತಿದ್ದಾರೆ. ಹಲವು ಸಚಿವರು ಇದನ್ನು ಬೆಂಬಲ ಮಾಡುತ್ತಿದ್ದಾರೆ. ಆರ್‌ಎಸ್‍ಎಸ್ ಕಪಿಮುಷ್ಟಿಯಲ್ಲಿ ಸಿಲುಕಿದ ಮುಖ್ಯಮಂತ್ರಿ ಏನನ್ನು ಮಾತಾಡುವ ಸ್ಥಿತಿಯಲ್ಲಿಲ್ಲ ಎಂದು ಟೀಕಿಸಿದರು.

ಪಾಕಿಸ್ತಾನಕ್ಕೆ ಹೋಗಿ ಎಂಬ ಪ್ರತಾಪ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಾಯರೆಡ್ಡಿ, ಪ್ರತಾಪ್ ಸಿಂಹನಿಗೆ ಕಾಮನ್ ಸೆನ್ಸ್ ಇಲ್ಲ. ನಮ್ಮ ದೇಶದಲ್ಲಿ ಬಾಳಿ ಬದುಕಿದವರು. ಅದ್ಹೇಗೆ ಪಾಕಿಸ್ತಾನಕ್ಕೆ ಹೋಗಲು ಆಗುತ್ತದೆ, ಕೇವಲ ಟಿವಿ ಪೇಪರ್‌ನಲ್ಲಿ ಹೆಸರು ಬರುವ ಸಲುವಾಗಿ ಇಲ್ಲಸಲ್ಲದನ್ನು ಮಾತನಾಡುತ್ತಿದ್ದಾರೆ. ಮಾಧ್ಯಮದವರು ಎರಡು ತಿಂಗಳು ಅವರ ಹೆಸರು ಹಾಕಬೇಡಿ. ಆಗ ನೋಡಿ ಅವರು ತುಟಿ ಬಿಚ್ಚುವುದಿಲ್ಲ ಎಂದರು.

ಹಿಂದೂ ವಿದ್ಯಾರ್ಥಿನಿಯರು ಬುರ್ಕಾ ಧರಿಸೋಕೆ ಆಗುತ್ತಾ?: ಮಕ್ಕಳ ಮನಸಲ್ಲಿ ಈಗಿನಿಂದಲೇ ಕೋಮುವಾದ ಸೃಷ್ಟಿಸಲು ಕೆಲವರು ಮುಂದಾಗಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಯ ಡ್ರೆಸ್‍ಕೋಡ್‍ನ್ನು ತಾವೇ ನಿರ್ಧಾರ ಮಾಡುವಂತೆ ಸರ್ಕಾರ ಹೇಳಿದೆ. ಹಾಗಾದರೆ ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಬುರ್ಖಾ ಕಡ್ಡಾಯ ಮಾಡುತ್ತಾರೆ. ಮುಸ್ಲಿಂ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡೋ ಹಿಂದೂ ವಿದ್ಯಾರ್ಥಿನಿಯವರು ಬುರ್ಖಾ ಧರಿಸಿಕೊಂಡು ಹೋಗಬೇಕಾ? ಎಂದು ಪ್ರಶ್ನಿಸಿದರು. 

ಸಿಖ್ ಹುಡುಗರು ಟರ್ಬನ್ ತೆಗೆಯಬೇಕು ಅಂತಾ ಹೇಳುವ ಧೈರ್ಯ ಮುಖ್ಯಮಂತ್ರಿಗೆ ಇದೇಯಾ? ಲಿಂಗಾಯತರು ವಿಭೂತಿ ಪಟ್ಟ ಧರಿಸಬೇಡಿ ಎಂದು ಹೇಳುವ ಸಾಹಸಕ್ಕೆ ಸಿಎಂ ಮುಂದಾಗುತ್ತಾರಾ ಎಂದು ಕಿಡಿಕಾರಿದರು.

WhatsApp
Facebook
Telegram
error: Content is protected !!
Scroll to Top