ಭಟ್ಕಳ; ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಆರೋಪಿ ಪೊಲೀಸ್ ವಶಕ್ಕೆ.!

ಭಟ್ಕಳ : ಜಾಲಿ ಪಟ್ಟಣ ಪಂಚಾಯತ್‌ನಲ್ಲಿ ಜಾಲಿ ಜಂಗನಗದ್ದೆಯ ನಕಲಿ ವಿಳಾಸವನ್ನು ನೀಡಿ ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆದಿದ್ದ ಪ್ರಕರಣದಲ್ಲಿ ಎರಡನೇ ಆರೋಪಿ ಹಾಸನದ ಎಚ್.ವಿ. ಹರ್ಷವರ್ಧನ್ ಅವರನ್ನು ಇಲ್ಲಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಆತನನ್ನು 7 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ .

ಜಾಲಿ ಪಟ್ಟಣ ಪಂಚಾಯತ್‌ನಲ್ಲಿ ಮೀನಾಕ್ಷಿ ಬಿ.ಎಚ್ . ಎನ್ನುವವರು ತಾನು ಎಚ್.ವಿ. ಹರ್ಷವರ್ಧನ ಈತನ ತಾಯಿಯಾಗಿದ್ದು ಆತನು ಜಾಲಿಯ ಜಂಗನಗದ್ದೆಯಲ್ಲಿ ವಾಸವಾಗಿರುವ ಬಾಡಿಗೆ ಮನೆಯಲ್ಲಿ ಮೃತ ಪಟ್ಟಿರುವುದಾಗಿ ಅರ್ಜಿ ಸಲ್ಲಿಸಿದ್ದು ನಂತರ ಅರ್ಜಿಯ ವಿಚಾರಣೆಯಾಗಿ , ಸ್ಥಳ ಪಂಚನಾಮೆಯಿಂದ ಆತ ಮೃತಪಟ್ಟಿರುವುದನ್ನು ದೃಢಪಡಿಸಿ ಆತನ ಮರಣ ಪ್ರಮಾಣ ಪತ್ರವನ್ನು ನೀಡಲಾಗಿತ್ತು . ನಂತರ ವಿಮಾ ಕಂಪೆನಿಗೆ ಅವರು ಅರ್ಜಿ ಸಲ್ಲಿಸಿ ವಿಮೆಯ ಹಣವನ್ನು ಪಡೆಯಲು ಪ್ರಯತ್ನಿಸಿದಾಗ ಮರಣ ಪ್ರಮಾಣ ಪತ್ರ ನಕಲಿ ಎನ್ನುವುದನ್ನು ಮನಗಂಡ ವಿಮಾ ಕಂಪೆನಿಯವರು ಮರಣ ಪ್ರಮಾಣ ಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಜಾಲಿ ಪಟ್ಟಣ ಪಂಚಾಯತಕ್ಕೆ ಪತ್ರ ಬರೆದಿದ್ದು ನಂತರ ಕೂಲಂಕಷವಾಗಿ ಪರಿಶೀಲಿಸುವಾಗ ಮರಣ ಪ್ರಮಾಣ ಪತ್ರವೇ ನಕಲಿ ಎನ್ನುವುದು ಬೆಳಕಿಗೆ ಬಂದಿತ್ತು .

ಜಾಲಿ ಆರೋಗ್ಯ ನಿರೀಕ್ಷಕ ವಿನಾಯಕ ನಾಯ್ಕ ಅವರು ನಗರ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದರು .ಪೊಲೀಸರು , ಆರೋಪಿಗಳಾದ ಮೀನಾಕ್ಷಿ ಬಿ.ಎಚ್ , ಹಾಗೂ ಎಚ್.ವಿ. ಹರ್ಷವರ್ಧನ ಇವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ .

ಆರೋಪಿಯು ಈಗಾಗಲೇ ಪ್ರಕರಣವೊಂದರಲ್ಲಿ ಮೈಸೂರು ಸೆಂಟ್ರಲ್ ಜೈಲ್‌ನಲ್ಲಿದ್ದು ಬಾಡಿ ವಾರಂಟ್ ಹೊರಡಿಸಿ ಆತನನ್ನು ಹಾಜರು ಪಡಿಸಲಾಗಿದ್ದು ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಫವಾಜ್ ಪಿ.ಎ. ಅವರು ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಮಾಡಿದ್ದಾರೆ .

WhatsApp
Facebook
Telegram
error: Content is protected !!
Scroll to Top