ಭಟ್ಕಳ: ಪ್ರತಿ ವರ್ಷದಂತೆ ಈ ಬಾರಿಯೂ ಕೂಡಾ ಮಹಾ ಶಿವರಾತ್ರಿಯ ಅಂಗವಾಗಿ ಫೆ. 26 ರಂದು ಮುರುಡೇಶ್ವರಕ್ಕೆ 15ನೇ ವರ್ಷದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ರಂಜನ್ ಇಂಡೇನ್ ಏಜೆನ್ಸಿಯ ಮಾಲಕಿ ಶಿವಾನಿ ಶಾಂತಾರಾಮ ಕೋರಿದ್ದಾರೆ.
ಈಕುರಿತುತಮ್ಮ ಕಚೇರಿಯಲ್ಲಿ ಕರೆದಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 14 ವರ್ಷಗಳಿಂದ ಮಹಾಶಿವರಾತ್ರಿ ದಿನದಂದು ಪಾದಯಾತ್ರೆಯನ್ನು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಯ ಅಡಿಯಲ್ಲಿ ಮಾಡಿಕೊಂಡು ಬರಲಾಗಿದೆ. ನಗರದ ಚೋಳೇಶ್ವರ ದೇವಸ್ಥಾನದಿಂದ ಮುರುಡೇಶ್ವರ ದೇವಸ್ಥಾನದ ತನಕ ಪಾದಯಾತ್ರೆ ಹಮ್ಮಿಕೊಂಡು ದೇವರ ದರ್ಶನ ಮಾಡುತ್ತಿದ್ದೇವೆ. ಫೆ.26 ರಂದು ಬುಧವಾರ ಬೆಳಗಿನ ಜಾವ 4 ಗಂಟೆಗೆ ಚೋಳೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಹೊರಡಲಿದೆ. ಪಾದಯಾತ್ರೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಾವಿರಾರು ಭಕ್ತರು ಪಾಲ್ಗೊಳ್ಳುವ ನೀರಿಕ್ಷೆ ಇದ್ದು ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ, ಕ್ರಿಯಾಶೀಲ ಗೆಳೆಯರ ಬಳಗದ ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪಾದಯಾತ್ರೆ ನಡೆಸುವ ನಮಗೆ ಸಹಕಾರ ನೀಡಲಿದ್ದಾರೆ. ಪಾದಯಾತ್ರೆ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿಭಕ್ತರು ಪಾಲ್ಗೊಳ್ಳಲಿದ್ದು, ಈ ಬಾರಿ ದೇವರ ದರ್ಶನ ಮುಗಿಸಿಕೊಂಡು ವಾಪಾಸ್ ಬರಲು ಅನುಕೂಲವಾಗಲು ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು, ಮಹಿಳೆಯರು ಆಧಾರ ಕಾರ್ಡ್ ತರಬೇಕಿದೆ ಎಂದರು. ಪಾದಯಾತ್ರೆಯಲ್ಲಿ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಜಾಗೃತೆ ವಹಿಸಲಾಗುತ್ತದೆ ಎಂದ ಅವರು ಎಲ್ಲ ಭಕ್ತರಿಗೂ ಮುರ್ಡೇಶ್ವರದಲ್ಲಿ ಶಿವನ ದರ್ಶನದೊಂದಿಗೆ ದೇವಸ್ಥಾನದ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆ ಹೋಗುವ ಭಕ್ತರಿಗೆ ಮುರುಡೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ತ್ವರಿತ ವ್ಯವಸ್ಥೆ ಕಲ್ಪಿಸುವಂತೆ ಈಗಾಗಲೇ ದೇವಸ್ಥಾನದ ಆಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಂತಾರಾಮ ಭಟ್ಕಳ, ಗುರುಕೃಪಾ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಕುಮಾರ ನಾಯ್ಕ, ಕಿರಣ ಚಂದಾವರಕರ, ದೀಪಕ ನಾಯ್ಕ ಮುಂತಾದವರಿದ್ದರು.