ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ಟೋಲ್ ಬಂದ್ ಮಂಕಾಳು ವೈದ್ಯ

ಕಾರವಾರ: ಜಿಲ್ಲೆಯಲ್ಲಿ ಮುಖ್ಯ ತೊಂದರೆಗಳಾದ ಐಆರ್‌ಬಿ ಮತ್ತು ಎನ್‌ಹೆಚ್‌ಎಐ ಇವರುಗಳು ನಿರ್ಮಾಣ ಮಾಡಿದ ರಸ್ತೆಗಳಿಂದ ಇವತ್ತು ಜಿಲ್ಲೆಗೆ ಸಾಕಷ್ಟು ತೊಂದರೆಗಳಾಗಿವೆ. ಸಂಬಂಧಪಟ್ಟವರು ಜವಾಬ್ದಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ ರವರು ಅಧಿಕಾರಿಗಳಿಗೆ ಎಚ್ಚರಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ರಸ್ತೆ ಕಾಮಗಾರಿ ಕೈಕೊಳ್ಳಲಾಗಿದೆ. ಈವರೆಗೆ ಅದು ಪೂರ್ಣಗೊಂಡಿರುವುದಿಲ್ಲ. ಇದು ಹೀಗೆ ಮುಂದುವರೆದರೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು. ಸದ್ಯದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ಸಾರ್ವಜನಿಕರಿಗೆ ಹೇರಲಾಗಿರುವ ಟೋಲ್ ಬಂದು ಮಾಡಿ ಸರ್ಕಾರದ ಅನುದಾನದಲ್ಲಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದರು.

ಬಳಿಕ ಐಆರ್‌ಬಿ ಅಧಿಕಾರಿಗಳಿಂದ ಜಿಲ್ಲೆಯಲ್ಲಿ ಈವರೆಗೂ ರಸ್ತೆ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಮಾಹಿತಿ ನೀಡಿ ಐಆರ್‌ಬಿ ಅಧಿಕಾರಿ ಉತ್ತರಕನ್ನಡ ಜಿಲ್ಲೆಗೆ 146.30 KM ರಸ್ತೆ ನಿರ್ಮಾಣ ಮಾಡಲು ನಮಗೆ ಟೆಂಡರ್ ನೀಡಿದ್ದು ಅದರಲ್ಲಿ ನಾವುಗಳು 138.41 KM ವರೆಗೆ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇವೆ. ಉಳಿದ 8.25 KM ರಸ್ತೆ ಕಾಮಗಾರಿ ವಿವಿಧ ಕಾರಣಗಳಿಂದ ಬಾಕಿ ಉಳಿದಿರುತ್ತದೆ. ಮಳೆಗಾಲ ಮುಗಿದ ಮೇಲೆ ರಸ್ತೆ ಪೂರ್ಣಗೊಳಿಸಲು ಕ್ರಮ ಕಳುಹಿಸಲಾಗುವುದು ಎಂದರು.

ಬಳಿಕ ಸಚಿವರು ಮಾತನಾಡಿ, 2014 ರಲ್ಲಿ ರಸ್ತೆ ನಿರ್ಮಾಣ ಮಾಡಲು ಸರ್ಕಾರವು 30 ತಿಂಗಳ ಅವಧಿಯೊಳಗೆ ರಸ್ತೆ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಆದರೆ ನಿಗದಿತ ಅವಧಿಯೊಳಗೆ ರಸ್ತೆ ನಿರ್ಮಾಣ ಪೂರ್ಣಗೊಂಡಿರುವುದಿಲ್ಲ. ಮತ್ತೆ 2020ಕ್ಕೆ ಮತ್ತೊಂದು ಒಪ್ಪಂದ ಮಾಡಿಕೊಂಡು ಪ್ರತಿಶತ 80 ರಷ್ಟು ಕಾಮಗಾರಿ ಮುಗಿಸಿದ್ದು ಎಂದು ತಿಳಿಸಿ ಟೋಲ್ ವಸೂಲಿ ಮಾಡಲು ಪ್ರಾರಂಭ ಮಾಡಿದ್ದೀರಿ. ಆದರೆ ಈವರೆಗೂ ತಾವುಗಳು 75 ರಷ್ಟು ರಸ್ತೆ ಕಾಮಗಾರಿ ಪೂರ್ಣಗೊಳಿಸಿರುವುದು ಕಂಡು ಬಂದಿರುವುದಿಲ್ಲ. ಅದಾಗಿಯೂ ಟೋಲ್ ವಸೂಲಿ ಮಾಡುತ್ತಿದ್ದೀರಿ. ಮಾಡಲು ಟೋಲ್ ವಸೂಲಿ ಮಾಡಲು ತಮಗೆ ಯಾರು ಅನುಮತಿ ನೀಡಿದರು. ಒಂದು ವೇಳೆ ಸರ್ಕಾರ ತಮಗೆ ಟೋಲ್ ವಸೂಲಿ ಮಾಡಲು ಅನುಮತಿ ನೀಡಿದ್ದರೆ ಅದನ್ನು ಈ ಕೂಡಲೇ ತಮ್ಮ ಗಮನಕ್ಕೆ ತರಲು ಐಆರ್‌ಬಿ ಅಧಿಕಾರಿಗಳಿಗೆ ಸೂಚಿಸಿದರು.

ಕೇವಲ ರಸ್ತೆ ಮಾತ್ರ ನಿರ್ಮಾಣ ಮಾಡುವುದಲ್ಲದೆ ರಸ್ತೆ ಪಕ್ಕಾ ಮೊದಲು ಬಸ್ ನಿಲ್ದಾಣಗಳು ಇದ್ದವು. ಈಗ ಯಾವುದೇ ಬಸ್ ನಿಲ್ದಾಣಗಳು ನಿರ್ಮಾಣವಾಗಿಲ್ಲ. ಶೀಘ್ರದಲ್ಲಿ ಹಳೆ ಬಸ್ ನಿಲ್ದಾಣಗಳು ಇರುವ ಸ್ಥಳಗಳಲ್ಲಿ ಹೊಸ ಬಸ್ ನಿಲ್ದಾಣಗಳು ತುರ್ತಾಗಿ ನಿರ್ಮಾಣವಾಗಬೇಕು ಎಂದು ಅಧಿಕಾರಿಗಳಿಗೆ ಹೇಳಿದರು. ಸಮರ್ಪಕ ಕಾರ್ಯನಿರ್ವಹಣೆ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಕೂಡಲೇಸ್ಥಗಿತಗೊಳಿಸುವಂತೆ ನೇರವಾಗಿ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಪ್ರೊಬೆಷನರ್ ಐಎಎಸ್ ಅಧಿಕಾರಿ ಜುಬಿನ್ ಮಹೋಪಾತ್ರ ಹಾಗೂ ಜಿಲ್ಲಾ ಮಟ್ಟದ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top