ವೃಕ್ಷಾಂದೋಲನಕ್ಕೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸಿದ್ದಾಪುರದಲ್ಲಿ ಚಾಲನೆ

ಸಿದ್ದಾಪುರ: ನನ್ನ ಗಿಡ ನನ್ನ ಹೆಮ್ಮೆ, ನಮ್ಮ ಸಿದ್ದಾಪುರ ಹಸಿರು ಸಿದ್ದಾಪುರ ಎಂಬ ಧ್ಯೇಯದೊಂದಿಗೆ ಅರಣ್ಯ ಇಲಾಖೆ ಹಮ್ಮಿಕೊಂಡಿರುವ ವೃಕ್ಷಾಂದೋಲನಕ್ಕೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸಿದ್ದಾಪುರದಲ್ಲಿ ಚಾಲನೆ ನೀಡಿದರು.
ಪಟ್ಟಣದ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ವನಮಹೋತ್ಸವಕ್ಕೆ ಭೀಮಣ್ಣ ನಾಯ್ಕ ಶುಕ್ರವಾರ ಚಾಲನೆ ನೀಡಿದರು.
ಪ್ರಸಕ್ತ ಶೇಕಡಾ 21 ರಷ್ಟಿರುವ ಕರ್ನಾಟಕದ ಹಸಿರು ಹೊದಿಕೆಯನ್ನು 33% ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಮಾಡಿರುವ ಸಂಕಲ್ಪಕ್ಕೆ ಅನುಗುಣವಾಗಿ ಜುಲೈ 1 ರಿಂದ 7ರವರೆಗೆ ನಡೆಯಲಿರುವ ವನಮಹೋತ್ಸವದ ಭಾಗವಾಗಿ ಗಿಡ ನೆಡಲಾಯಿತು.
ವೃಕ್ಷಾಂದೋಲನಕ್ಕೆ ಚಾಲನೆ ನೀಡಿದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಗಿಡಗಳನ್ನು ನೆಡುವ ಪರಿಪಾಠವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಕ್ಷೇತ್ರದ ಪ್ರತಿಯೊಬ್ಬರು ತಮ್ಮ ವ್ಯಾಪ್ತಿಯಲ್ಲಿ ಒಂದೊಂದು ಗಿಡ ನೆಟ್ಟು ಪೋಷಿಸಬೇಕು. ಕಾಡಿದ್ದರೆ ನಾಡು ನಾಡು ಸುಭೀಕ್ಷವಾಗಿರಬೇಕೆಂದರೆ ಅರಣ್ಯ ಬೆಳೆಸಬೇಕು. ಪ್ರತಿಯೊಬ್ಬರು ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಹೆಮ್ಮರವಾಗಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಶಿರಸಿ ಡಿಎಫ್ಓ ಅಜ್ಜಯ್ಯ ಜೆ.ಆರ್., ಎಸಿಎಫ್ ಹರೀಶ ಸಿ.ಎನ್., ತಾಲೂಕಾ ಪಂಚಾಯ್ತಿ ಇಓ ಪ್ರಶಾಂತ ರಾವ್, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಐ.ಜಿ.ಕುನ್ನೂರ, ಸಿದ್ದಾಪುರ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ, ಕಾನಗೋಡ ಗ್ರಾಮ‌ ಪಂಚಾಯ್ತಿ ಸದಸ್ಯ ಎಚ್.ಕೆ‌.ಶಿವಾನಂದ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಮತ್ತಿತರರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top