ಪ್ರಧಾನಿ ನರೇಂದ್ರ ಮೋದಿಗೆ ಶಕ್ತಿ ಯೋಜನೆ ಮಾದರಿಯಾಗಲಿ-ಸಚಿವ ಮಂಕಾಳು ವೈದ್ಯ

ಕಾರವಾರ: ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಒದಗಿಸುವ ಶಕ್ತಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾದರಿಯಾಗಿ ಪರಿಗಣಿಸಿ, ದೇಶವ್ಯಾಪಿ ಜಾರಿಗೆ ತರಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಇಲ್ಲಿನ ಬಸ್ ನಿಲ್ದಾಣದಲ್ಲಿ ಭಾನುವಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಮಾಡಿಕೊಡುವ ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರ ಜತೆ ಅವರು ಮಾತನಾಡಿದರು.

ಕದ್ರಾ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಹನುಮವ್ವ, ಸದಸ್ಯೆ ಅಶ್ವಿನಿ ಪೆಡ್ನೇಕರ್ ಅವರಿಗೆ ಮೊದಲ ಟಿಕೆಟ್ ನೀಡಿ ಯೋಜನೆಗೆ ಚಾಲನೆ ನೀಡಲಾಯಿತು‌.

‘ಮಹಿಳೆಯರು ಸರ್ಕಾರ ನೀಡಿದ ಉಚಿತ ಪ್ರಯಾಣದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.

‘ಕಾಂಗ್ರೆಸ್ ಸರ್ಕಾರ ಬಡವರ ಪರ ಇದೆ. ಚುನಾವಣೆ ವೇಳೆ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳ ಭರವಸೆಯ ಮೊದಲ ಗ್ಯಾರಂಟಿ ಈಗ ಜಾರಿಗೆ ತಂದಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ’ ಎಂದರು.

‘ಬಸ್ ಕೊರತೆ ಸಮಸ್ಯೆ ಹಂತ ಹಂತವಾಗಿ ನಿವಾರಿಸಲಾಗುವುದು. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಅವ್ಯವಸ್ಥೆಗೆ ಕಾರಣ ಏನು ಎಂಬುದು ಜನರಿಗೆ ತಿಳಿದಿದೆ. ಹಿಂದಿನ ದಿನಗಳನ್ನು ನೆನಪಿಸಲು ಹೋಗುವುದಿಲ್ಲ’ ಎಂದು ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿದರು.

ಶಕ್ತಿ ಯೋಜನೆ ಕಾಂಗ್ರೆಸ್ ಕರ್ತವ್ಯ ಪಾಲನೆಯ ಬದ್ಧತೆ ತೋರಿಸಿದೆ- ಶಾಸಕ ಸತೀಶ ಸೈಲ್

ಸಾರಿಗೆ ಸಂಸ್ಥೆಯ ಸಿಬ್ಬಂದಿ ಕಷ್ಟದಲ್ಲಿಯೂ ಜನರನ್ನು ಸುರಕ್ಷಿತವಾಗಿ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಉಚಿತ ಪ್ರಯಾಣ ಎಂಬ ಕಾರಣಕ್ಕೆ ಮಹಿಳೆಯರನ್ನು ಬಸ್ ಹತ್ತಿಸದೆ ಸಾಗುವ ಕೆಲಸ ಆಗಬಾರದು’ ಎಂದರು.

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್.ಶ್ರೀನಿವಾಸ, ಶಿರಸಿ ವಿಭಾಗದಲ್ಲಿ ನಿತ್ಯ 510 ಬಸ್ ಗಳಿಂದ 477 ಮಾರ್ಗಗಳಿಗೆ ಬಸ್ ಸಂಚರಿಸುತ್ತಿದೆ. 1.75 ಲಕ್ಷ ಪ್ರಯಾಣಿಕರು ಬಸ್ ಮೂಲಕ ಸಂಚರಿಸುತ್ತಿದ್ದು ಅದರಲ್ಲಿ 80 ಸಾವಿರದಷ್ಟು ಮಹಿಳೆಯರು ಇದ್ದಾರೆ ಎಂದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯ್ತಿ ಸಿಇಒ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ್, ಕಾಂಗ್ರೆಸ್ ಮುಖಂಡರಾದ ರಾಜು ತಾಂಡೇಲ, ಪ್ರಮುಖರಾದ ಪ್ರಭಾಕರ ಮಾಳ್ಸೇಕರ್, ಸಮೀರ ನಾಯ್ಕ ಇದ್ದರು.

WhatsApp
Facebook
Telegram
error: Content is protected !!
Scroll to Top