ಆನ್ಲೈನ್ ಸಾಲ ಪಡೆದಿದ್ದವನಿಗೆ ಕಂಪನಿ ಕಿರುಕುಳ ಆರೋಪ..!

ಹಾಸನ: ಆನ್ ಲೈನ್ ಮೂಲಕ ಸಾಲ ಪಡೆದಿದ್ದವನಿಗೆ ಕಂಪನಿ ಟಾರ್ಚರ್ ನೀಡಿದ ಆರೋಪ ಕೇಳಿ ಬಂದಿದ್ದು ಮರ್ಯಾದೆಗಂಜಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಇಂದು ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿದ್ದಾರೆ. ಹಾಸನ ನಗರದ ಅಂಬರೀಶ್(40), ಮೃತ ವ್ಯಕ್ತಿ.

ಆತ ಸೆಕ್ಯುರಿಟಿ ಏಜೆನ್ಸಿಯೊಂದನ್ನ ನಡೆಸೋ ಉದ್ದೇಶದಿಂದ ಆನ್ಲೈನ್ ಸಂಸ್ಥೆಯೊಂದರಿಂದ ಸಾಲ ಪಡೆದಿದ್ದನಂತೆ, ಸಾಲ ಪಡೆದು ಬೆಂಗಳೂರಿನಲ್ಲಿ ಜೀನಿಯಸ್ ಎನ್ನೋ ಹೆಸರಿನ ಕಂಪನಿ ಶುರುಮಾಡಿದ್ದ ಆದ್ರೆ ತಕ್ಷಣಕ್ಕೆ ವಕ್ಕರಿಸಿಕೊಂಡಿದ್ದ ಕೊರೊನಾ ಕಚೇರಿ ಬಾಗಿಲು ಮುಚ್ಚುವಂತೆ ಮಾಡಿತ್ತು. ಮತ್ತೆ ಕೊರೊನಾ ದೂರವಾಗಿ ಎಲ್ಲವೂ ಸರಿ ಹೋಗೋ ಸಮಯ ಬರೋವೇಳೆಗೆ, ಪಡೆದಿದ್ದ ಮೂರ್ನಾಲ್ಕು ಲಕ್ಷ ರೂಪಾಯಿ ಬಡ್ಡಿ ಸೇರಿ ಹತ್ತು ಲಕ್ಷಕ್ಕೆ ಮುಟ್ಟಿತ್ತು. ನೂರಾರು ಕನಸು ಹೊತ್ತು ಸಾಲಮಾಡಿ ಕಂಪನಿ ಶುರುಮಾಡಿದ ವ್ಯಕ್ತಿ ಈಗ ಸಾಲಕೊಟ್ಟವರು ಕಿರುಕುಳ ನೀಡಿದ್ರು ಎಂದು ಆತ್ಮಹತ್ಯೆ ಗೆ ಶರಣಾಗಿದ್ದಾರೆ.

ಮೂಲತಃ ಹಾಸನ ನಗರದ ಅಂಬರೀಶ್ ಬೆಂಗಳೂರಿನ ಕೆಂಗೇರಿಯಲ್ಲಿ ನೆಲೆಸಿದ್ರು. ಸ್ವಂತ ಕಂಪನಿ ಮಾಡಿ ಬದುಕು ಕಟ್ಟಿಕೊಳ್ಳೋಕೆ ಅಂತಾ ಆನ್ಕೈನ್ ನಲ್ಲಿ ಸಾಲ ಪಡೆದು ಕಂಪನಿಯೊಂದು ನೀಡಿದ್ದ ಆಫರ್ ಗೆ ಮರುಳಾಗಿ ಸಾಲ ಪಡೆದುಕೊಂಡಿದ್ದಾರೆ, ಆದ್ರೆ ಕೊರೊನಾದಿಂದ ನಷ್ಟವಾಗಿ ಸಾಲ ತೀರಿಸಲು ಆಗದಿದ್ದಾಗ ಸಾಲಕೊಟ್ಟವರು ಲೀಗಲ್ ನೊಟೀಸ್ ಕೊಟ್ಟಿದ್ರು, ದೆಹಲಿ ಕೋರ್ಟ್ ನಲ್ಲಿ ಕೇಸ್ ಹಾಕಿ ಮನೆಗೆ ಬೌನ್ಸರ್ಸ್ ಬರ್ತಾರೆ, ನಿನ್ನನ್ನ ಎಳೆದೊಯ್ತಾರೆ ಎಂದು ಬೆದರಿಸೋಕೆ ಶುರುಮಾಡಿದ್ರು, ಇದಕ್ಕೂ ಮುಂದೆ ಹೋಗಿ ಅಂಬರೀಶ್ ನಂಬರ್ ಹ್ಯಾಕ್ ಮಾಡಿ ಅವರ ಎಲ್ಲಾ ವಾಟ್ಸಾಪ್ ಕಾಂಟ್ಯಾಕ್ಟ್ ಗಳಿಗೆ ಅಂಬರೀಶ್ ಹೆಸರಿನಲ್ಲಿ ವಿಡಿಯೋ ಮಾಡಿ ಈತ ಮೋಸಗಾರ, ಅಂತೆಲ್ಲಾ ಅಶ್ಲೀಲ ಪದಗಳ ಮೂಲಕ ನಿಂದಿಸಿ ಪೋಸ್ಟ್ ಮಾಡಿದ್ರು, ಇದ್ರಿಂದ ಮನನೊಂದಿದ್ದ ಅಂಬರೀಶ್ ವಾರದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ರು, ಏಳು ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಇಂದು ಅಂಬರೀಶ್ ಕೊನೆಯುಸಿರೆಳೆದಿದ್ದಾರೆ.

ಕೊಟ್ಟ ಸಾಲ ವಾಪಸ್ ಕೊಡೋಕೆ ಆಗದೆ ಆಘಾತದಲ್ಲಿದ್ದ ವ್ಯಕ್ತಿಗೆ ಮಾನಸಿಕ ಕಿರುಕುಳ ನೀಡಿ ಸಾವಿಗೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ ,ಹಾಸನದ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ದೂರು ದಾಖಲಾಗಿದೆ. ಸ್ವಾವಲಂಬಿ ಬದುಕು ನಡೆಸೋಕೆ ಅಂತಾ ಆನ್ಲೈನ್ ಸಾಲ ಪಡೆದಿದ್ದ ವ್ಯಕ್ತಿ ಈಗ ಇದೇ ಕಾರಣಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಮದುವೆಯಾಗಿ ಪುಟ್ಟ ಮಕ್ಕಳಿರೋ ಸಂಸಾರದಲ್ಲಿ ನಡೆದಿರೋ ಆಘಾತದಿಂದ ಕುಟುಂಬ ಸದಸ್ಯರು ಕಣ್ಣೀರಿಡುತ್ತಿದ್ದಾರೆ.

ಸ್ವಂತ ಕಂಪನಿ ಮಾಡಿಕೊಂಡು ಚನ್ನಾಗಿದ್ದವರಿಗೆ ಸಾಲದ ಹೆಸರಿನಲ್ಲಿ ಹಣ ನೀಡಿದ್ರು, ಬಡ್ಡಿಗೆ ಬಡ್ಡಿ ಸೇರಿಸಿ ಲಕ್ಷ ಲಕ್ಷ ಹಣ ಕಟ್ಟುವಂತೆ ಪೀಡಿಸಿ ಮಾನಸಿಕವಾಗಿ ಹಿಂಸೆ ನೀಡಿದ್ರು. ಇದರಿಂದ ಅಂಬರೀಶ್ ಸಾವಿಗೀಡಾಗಿದ್ದಾರೆ, ಆನ್ಲೈನ್ ಸಾಲ ಬ್ಯಾನ್ ಆಗಬೇಕು, ಅಮಾಯಕರ ಪ್ರಾಣ ಉಳಿಯಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top