ಯೆಮನ್‌ನಲ್ಲಿ ಕೇರಳದ ನರ್ಸ್‌ ನಿಮಿಷಪ್ರಿಯಗೆ ಗಲ್ಲು;ಮರಣದಂಡನೆ ಶಿಕ್ಷೆ ಎತ್ತಿ ಹಿಡಿದ ಯೆಮನ್‌ ಕೋರ್ಟ್..!

ಯೆಮನ್‌ ಪ್ರಜೆಯೊರ್ವನನ್ನು ಪೀಸುಗಳಾಗಿ ಕತ್ತರಿಸಿ ಕೊಲೆ ಮಾಡಿದ್ದ ಕೇರಳದ ಮಹಿಳೆಗೆ ನೀಡಿದ ಮರಣದಂಡನೆ ಶಿಕ್ಷೆಯನ್ನು ಯೆಮನ್‌ ಕೋರ್ಟ್‌  ಎತ್ತಿ ಹಿಡಿದಿದೆ. 2017ರಲ್ಲಿ ಯೆಮೆನ್ ಪ್ರಜೆಯೊಬ್ಬರ (Yemeni national) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಲು ಶಿಕ್ಷೆಯನ್ನು ತಗ್ಗಿಸುವಂತೆ ಕೇರಳ ನರ್ಸ್ (Kerala nurse) ನಿಮಿಷಾ ಪ್ರಿಯಾ (Nimisha Priya) ಸಲ್ಲಿಸಿದ್ದ ಮೇಲ್ಮನವಿಯನ್ನು ಯೆಮೆನ್ ನ್ಯಾಯಾಲಯದ ತ್ರಿಸದಸ್ಯ ಪೀಠ ತಿರಸ್ಕರಿಸಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ (Palakkad district)  ಕೊಲ್ಲಂಗೋಡ್ (Kollengode) ಮೂಲದ 33 ವರ್ಷದ ನಿಮಿಷಾ ಈಗ ಯೆಮೆನ್ ಜೈಲಿನಲ್ಲಿ ಕೊಳೆಯುತ್ತಿದ್ದಾಳೆ. ನೀರಿನ ತೊಟ್ಟಿಯಲ್ಲಿ ಯೆಮೆನ್‌ ವ್ಯಕ್ತಿಯನ್ನು  ಉಸಿರುಗಟ್ಟಿಸಿ ಕೊಂದಿದ್ದಕ್ಕಾಗಿ ಆಕೆಗೆ ಈ ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪಿನ ಮರು ಪರಿಶೀಲನೆಗೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಾಗಿದ್ದರೂ, ಸುಪ್ರೀಂಕೋರ್ಟ್ ನ್ಯಾಯಾಲಯದ ತೀರ್ಪನ್ನು ಹಿಂಪಡೆಯುವ ಸಾಧ್ಯತೆಯಿಲ್ಲ.

2017 ರಲ್ಲಿ ನಿಮಿಷ ಪ್ರಿಯಾ ಯೆಮನ್‌ ಪ್ರಜೆ ತಲಾಲ್ ಅಬ್ದೋ ಮಹದಿ (Talal Abdo Mahdi) ಯನ್ನು ಕೊಲೆ ಮಾಡಿ, ಅವನ ದೇಹವನ್ನು ತುಂಡುಗಳಾಗಿ ಕತ್ತರಿಸಿ ನೀರಿನ ತೊಟ್ಟಿಯಲ್ಲಿ ವಿಲೇವಾರಿ ಮಾಡಿದ್ದಳು. ಈ ಆರೋಪದಲ್ಲಿ ನಿಮಿಷಾ ತಪ್ಪಿತಸ್ಥಳೆಂದು ಕಂಡು ಬಂದಿದೆ. ಹೀಗಾಗಿ ಯೆಮೆನ್‌ನ ವಿಚಾರಣಾ ನ್ಯಾಯಾಲಯವು 2018ರಲ್ಲಿ ಆಕೆಗೆ ಮರಣದಂಡನೆ ಶಿಕ್ಷೆಯನ್ನು ನೀಡಿತ್ತು. ನಂತರ ನಿಮಿಶಾ ತಾನು ಸರಿಯಾದ ಕಾನೂನು ನೆರವು ಪಡೆದಿಲ್ಲ ಮತ್ತು ತಲಾಲ್‌ನಿಂದ ದೈಹಿಕವಾಗಿ ಕಿರುಕುಳಕ್ಕೊಳಗಾಗಿದೆ ಎಂದು ಪ್ರಕರಣದ ಬಗ್ಗೆ ಮೇಲ್ಮನವಿಯನ್ನು ಸಲ್ಲಿಸಿದ್ದರು.

2014ರಲ್ಲಿ ನಿಮಿಷಪ್ರಿಯ ಯೆಮೆನ್‌ನಲ್ಲಿ ಕ್ಲಿನಿಕ್ ಸ್ಥಾಪಿಸಲು ತಲಾಲ್ ಅವರ ಸಹಾಯವನ್ನು ಕೋರಿದ್ದರು. ಯೆಮನ್‌ನಲ್ಲಿ ವ್ಯಾಪಾರವನ್ನು ಪ್ರಾರಂಭಿಸಲು  ಪರವಾನಗಿ ಪ್ರಕ್ರಿಯೆಗಾಗಿ ಯೆಮೆನ್ ಪ್ರಜೆಯೊಬ್ಬರ ಸಹಾಯ ಅಗತ್ಯವಿರುತ್ತದೆ. ಆದರೆ ನಂತರ ಆಕೆ ಮತ್ತೊಬ್ಬ ಯೆಮೆನ್ ಪ್ರಜೆಯ ಸಹಾಯದಿಂದ ವ್ಯಾಪಾರ ಆರಂಭಿಸಿದಳು.

ಹೀಗೆ ಆಕೆ ಕ್ಲಿನಿಕ್‌ನಿಂದ ಆದಾಯವನ್ನು ಗಳಿಸಲು ಪ್ರಾರಂಭಿಸಿದ ನಂತರ ಈ ವಿಚಾರದಲ್ಲಿ ತಲಾಲ್ ಮಧ್ಯಪ್ರವೇಶಿಸಲು ಪ್ರಾರಂಭಿಸಿದ ಮತ್ತು ಆದಾಯದಲ್ಲಿ ಪಾಲು ಕೇಳಲು ಶುರು ಮಾಡಿದ. ನಕಲಿ ಮದುವೆ ದಾಖಲೆಗಳನ್ನು ಸೃಷ್ಟಿಸಿದ ತಲಾಲ್ , ನಿಮಿಷಾ ತನ್ನ ಪತ್ನಿ ಎಂದು ಎಲ್ಲರಿಗೂ ಹೇಳಿದ. ಅಲ್ಲದೇ ಆಕೆಗೆ ಬೆದರಿಕೆ ಹಾಕಲು ಆರಂಭಿಸಿದ್ದಲ್ಲದೇ ದೈಹಿಕವಾಗಿ ಹಿಂಸೆ ನೀಡುತ್ತಿದ್ದ. ಅಲ್ಲದೇ ಆತ ಮಾದಕ ವ್ಯಸನಿಯಾಗಿದ್ದ ಎಂದು ನಿಮಿಷಾ ಆರೋಪಿಸಿದ್ದಾರೆ.ಇದಾದ ಬಳಿಕ ಆಕೆ ಪೊಲೀಸರಿಗೆ ದೂರು ನೀಡಿದ್ದಳು ಮತ್ತು ಅವನನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಆದರೆ 2016 ರಲ್ಲಿ ಪರಿಸ್ಥಿತಿ ಮತ್ತೆ ಹದಗೆಟ್ಟಿತು ಮತ್ತು ತಲಾಲ್ ನಿಮಿಷಪ್ರಿಯಳ ಪಾಸ್‌ಪೋರ್ಟ್ (passport) ಅನ್ನು ತನ್ನೊಂದಿಗಿಟ್ಟುಕೊಂಡಿದ್ದ. ಪರಿಣಾಮ ಹೆಚ್ಚಿದ ಚಿತ್ರಹಿಂಸೆಯಿಂದ ನಿಮಿಷಾ ಆತನನ್ನು ಕೊಲ್ಲಲು ಸಂಚು ಹೂಡಿದಳು. ಇದಕ್ಕಾಗಿ ಆಕೆ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ನರ್ಸ್ ಹನಾನ್ (Hanan) ಎಂಬವರ ಸಹಾಯವನ್ನು ಕೋರಿದಳು. ಇಬ್ಬರು ಸೇರಿ ತಲಾಲ್‌ಗೆ ಮಿತಿಮೀರಿದ ಅರಿವಳಿಕೆ ಚುಚ್ಚುಮದ್ದು ನೀಡಿದರು. ಬಳಿಕ ಆತನ ದೇಹವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ದೇಹವನ್ನು ಪಾಲಿಥಿನ್ ಚೀಲದಲ್ಲಿ ಪ್ಯಾಕ್ ಮಾಡಿ ಮತ್ತು ಆಕೆಯ ಅಪಾರ್ಟ್‌ಮೆಂಟ್‌ನ ನೀರಿನ ಟ್ಯಾಂಕ್‌ನಲ್ಲಿ ವಿಲೇವಾರಿ ಮಾಡಿದರು.

ಬಳಿಕ ನಿಮಿಷಾ ಸ್ಥಳದಿಂದ ಓಡಿಹೋಗಿ ಸುಮಾರು 200 ಕಿಮೀ ದೂರದ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸಕ್ಕೆ ಸೇರಿದಳು. ನಂತರ ಶೀಘ್ರದಲ್ಲೇ ಆಕೆಯನ್ನು ಬಂಧಿಸಲಾಯಿತು. ಅಲ್ಲದೇ ಈ ಕೊಲೆಯಲ್ಲಿ ಭಾಗಿಯಾಗಿರುವ ಹನಾನ್ ಈಗ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾಳೆ.

WhatsApp
Facebook
Telegram
error: Content is protected !!
Scroll to Top