ಹೃದಯಾಘಾತದಿಂದ ನಿಧನರಾದ ಶೇನ್​ ವಾರ್ನ್​ ಆತ್ಮಕ್ಕೆ ಶಾಂತಿ ಕೋರಿದ ಬಾಲಿವುಡ್​ ಸೆಲೆಬ್ರಿಟಿಗಳು

ಕ್ರಿಕೆಟ್​ ದಿಗ್ಗಜ ಶೇನ್​ ವಾರ್ನ್ (Shane Warne)​ ಇನ್ನಿಲ್ಲ ಎಂಬುದನ್ನು ನಂಬಲು ಅವರ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. 52ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಅವರು ಮೃತಪಟ್ಟರು (Shane Warne Death) ಎಂಬ ಸುದ್ದಿ ಬರಸಿಡಿಲಿನಂತೆ ಬಂದು ಎರಗಿದೆ. ಜನಸಾಮಾನ್ಯರು ಮಾತ್ರವಲ್ಲದೇ ಮನರಂಜನಾ ಲೋಕದ ಘಟಾನುಘಟಿಗಳು ಕೂಡ ಶೇನ್​ ವಾರ್ನ್​ ಅವರಿಗೆ ಅಭಿಮಾನಿಗಳಾಗಿದ್ದರು. ಅವರ ಸ್ಪಿನ್​ ಜಾದೂ ಕಂಡು ಮನಸೋಲದವರೇ ಇಲ್ಲ. ಬಾಲಿವುಡ್​ ಲೋಕದ ಅನೇಕ ತಾರೆಯರಿಗೆ ಶೇನ್​ ವಾರ್ನ್​ ಎಂದರೆ ಅಚ್ಚುಮೆಚ್ಚು. ಹಾಗಾಗಿ ಅವರ ನಿಧನದಿಂದ ಹಿಂದಿ ಚಿತ್ರರಂಗದ ಅನೇಕರಿಗೆ ನೋವಾಗಿದೆ. ಅಕ್ಷಯ್​ ಕುಮಾರ್, ಶಿಲ್ಪಾ​ ಶೆಟ್ಟಿ, ವರುಣ್​ ಧವನ್​, ರಣವೀರ್​ ಸಿಂಗ್​, ಶಿಬಾನಿ ದಂಡೇಕರ್​, ಹುಮಾ ಖುರೇಶಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಶ್ರೇಷ್ಠ ಸ್ಪಿನ್ನರ್​ ನಿಧನಕ್ಕೆ ಕಂಬನಿ ಮಿಡಿದ್ದಾರೆ. ಶೇನ್​ ವಾರ್ನ್​ ಅವರ ಆಟದ ವೈಭವವನ್ನು ಬಾಲಿವುಡ್​ ತಾರೆಯರು ಸ್ಮರಿಸಿದ್ದಾರೆ.​ ಅವರನ್ನು ಭೇಟಿಯಾದ ಕ್ಷಣವನ್ನು ಮೆಲುಕು ಹಾಕಿದ್ದಾರೆ. ‘ಶೇನ್​ ವಾರ್ನ್​ ಅವರ ಅಕಾಲಿಕ ಮರಣದ ಸುದ್ದಿ ತಿಳಿದು ಮಾತು ಬಾರದಂತೆ ಆಗಿದೆ. ಓಂ ಶಾಂತಿ’ ಎಂದು ಅಕ್ಷಯ್​ ಕುಮಾರ್ (Akshay Kumar)​ ಟ್ವೀಟ್​ ಮಾಡಿದ್ದಾರೆ. ‘ಲೆಜೆಂಡ್​ಗಳು ಸದಾ ಜೀವಂತವಾಗಿರುತ್ತಾರೆ’ ಎಂದು ಹೇಳಿರುವ ಶಿಲ್ಪಾ ಶೆಟ್ಟಿ ಅವರು ಶೇನ್​ ವಾರ್ನ್​ ಜೊತೆಗಿನ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ.

‘ಇದು ತುಂಬ ದುಃಖ ಮತ್ತು ಆಘಾತಕಾರಿಯಾಗಿದೆ’ ಎಂದು ಮಲೈಕಾ ಅರೋರಾ ಹೇಳಿದ್ದಾರೆ. ದೇಶ, ಭಾಷೆಗಳ ಗಡಿಯನ್ನು ಮೀರಿ ಶೇನ್​ ವಾರ್ನ್​ ಅವರು ಅಭಿಮಾನಿಗಳನ್ನು ಸಂಪಾದಿಸಿದ್ದರು. ಹಾಗಾಗಿ ವಿಶ್ವಾದ್ಯಂತ ಇರುವ ಅವರ ಅಭಿಮಾನಿಗಳು ಇಂದು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಐಪಿಎಲ್​ ಮೂಲಕ ಭಾರತದ ಕ್ರಿಕೆಟ್​ ಪ್ರಿಯರಿಗೆ ಶೇನ್​ ವಾರ್ನ್​ ಇನ್ನಷ್ಟು ಹತ್ತಿರ ಆಗಿದ್ದರು.

ಭಾರತದಲ್ಲೇ ಸಿದ್ಧವಾಗಬೇಕಿತ್ತು ಶೇನ್​ ವಾರ್ನ್​ ಬಯೋಪಿಕ್​:

ಅದು 2015ರ ಸಮಯ. ಶೇನ್​ ವಾರ್ನ್​ ಅವರು ಬಾಲಿವುಡ್​ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಗುಸುಗುಸು ಹರಿದಾಡಿತ್ತು. ನಂತರ ಆ ಸುದ್ದಿಯನ್ನು ಅವರು ಖಚಿತಪಡಿಸಿದ್ದರು. ‘ಒಂದು ಆಫರ್​ ಬಂದಿದೆ. ಯಾರೋ ನನಗಾಗಿ ಏನೋ ಪ್ಲ್ಯಾನ್​ ಮಾಡಿಕೊಂಡಿದ್ದಾರೆ’ ಎಂದು ಶೇನ್​ ವಾರ್ನ್​ ಹೇಳಿದ್ದರು. ಆದರೆ ಆ ಸಿನಿಮಾದ ಪ್ಲ್ಯಾನ್​ ಮುಂದೇನಾಯಿತು ಎಂದು ತಿಳಿಯಲಿಲ್ಲ. ಅವರು ಸಿನಿಮಾದಲ್ಲಿ ನಟಿಸಿದ ಬಗ್ಗೆ ಯಾವುದೇ ಮಾಹಿತಿ ಕೂಡ ಹೊರಬೀಳಲಿಲ್ಲ.

ಕೆಲವು ಸಮಯದ ಬಳಿಕ ಶೇನ್​ ವಾರ್ನ್​ ಅವರ ಬಯೋಪಿಕ್​ ಬಗ್ಗೆ ಪ್ರಸ್ತಾಪ ಆಯಿತು. ಅವರು ಆಸ್ಟ್ರೇಲಿಯಾದ ಕ್ರಿಕೆಟರ್​ ಆಗಿದ್ದರೂ ಕೂಡ ಭಾರತದಲ್ಲಿ ಅವರ ಬಯೋಪಿಕ್​ ಮಾಡಲು ತಯಾರಿ ನಡೆದಿತ್ತು! ಆದರೆ ಕೊವಿಡ್​ ಕಾರಣದಿಂದ ಆ ಸಿನಿಮಾದ ಕೆಲಸಗಳಿಗೆ ಬ್ರೇಕ್​ ಬಿತ್ತು. ನಂತರ ಮಾತನಾಡಿದ್ದ ಶೇನ್​ ವಾರ್ನ್ ಅವರು, ‘ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ಆರಂಭದಲ್ಲಿ ನಾವು ಆ ಪ್ರಾಜೆಕ್ಟ್​ ಮತ್ತೆ ಕೈಗೆತ್ತಿಕೊಳ್ಳುತ್ತೇವೆ. ಏನಾಗುತ್ತಿದೆ ಅಂತ ನೋಡೋಣ’ ಎಂದು ​ಹೇಳಿದ್ದರು. ತಮ್ಮ ಪಾತ್ರದಲ್ಲಿ ಹಾಲಿವುಡ್​ ಹೀರೋಗಳಾದ ಬ್ರಾಡ್​ ಪಿಟ್​ ಅಥವಾ ಲಿಯೊನಾರ್ಡೊ ಡಿಕಾಪ್ರಿಯೊ ನಟಿಸಬೇಕು ಎಂದು ಅವರು ಹಂಬಲ ವ್ಯಕ್ತಪಡಿಸಿದ್ದರು.

WhatsApp
Facebook
Telegram
error: Content is protected !!
Scroll to Top