ಉಕ್ರೇನ್ ಮೇಲಿನ ರಷ್ಯಾ ದಾಳಿ ;ಭಾರತದ ಜನಸಾಮಾನ್ಯರ ಆರ್ಥಿಕತೆಗೆ ಪೆಟ್ಟು?

ದೇಶ: ಉಕ್ರೇನ್ ಮೇಲಿನ ರಷ್ಯಾ ದಾಳಿ ಜಾಗತಿಕ ತೈಲ ಮಾರುಕಟ್ಟೆಯನ್ನು ಕಂಗಾಲು ಮಾಡಿದೆ. ಬ್ರೆಂಟ್ ಸುಮಾರು ಎಂಟು ವರ್ಷಗಳ ಬಳಿಕ 100 ಡಾಲರ್ ಗಡಿ ದಾಟಿದೆ. ವ್ಲಾಡಿಮಿರ್ ಪುಟಿನ್ ಅವರ ನಡೆಯ ಪರಿಣಾಮ ಸ್ಥಳೀಯ ಮಟ್ಟದಲ್ಲಿ ತೈಲ ಬೆಲೆ ಮತ್ತೆ ಗಗನಕ್ಕೆ ಏರಲಿದೆ. ಇದರಿಂದ ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದು ಖಾತರಿಯಾಗಿದೆ.

ಜಾಗತಿಕ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗುತ್ತಿದ್ದರೂ, ಕಳೆದ ಒಂದೆರಡು ತಿಂಗಳಿನಿಂದ ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅಲ್ಲಾಡದೆ ನಿಂತಿದೆ. ಇದಕ್ಕೆ ಕಾರಣ ಐದು ರಾಜ್ಯಗಳ ವಿಧಾನಸಭೆ ಚುನಾವಣೆ. ಮಾರ್ಚ್ 7ರಂದು ಕೊನೆಯ ಹಂತದ ಮತದಾನ ಮುಗಿಯುತ್ತಿದ್ದಂತೆಯೇ ತೈಲ ಬೆಲೆ ಪುಟಿದೇಳಲಿದೆ.

ಕಳೆದ ವರ್ಷ ಕೇಂದ್ರ ಸರ್ಕಾರವು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 10 ರೂ ಕಡಿತ ಮಾಡಿದ್ದು, ಹಾಗೂ ಪೆಟ್ರೋಲ್ ಮೇಲಿನ ಸುಂಕವನ್ನು 5 ರೂ ಕಡಿತಗೊಳಿಸಿದ ಬಳಿಕ ನವೆಂಬರ್ 4ರಿಂದ ತೈಲ ಮಾರುಕಟ್ಟೆ ಕಂಪೆನಿಗಳು (ಒಎಂಸಿ) ತೈಲ ಬೆಲೆ ಏರಿಕೆ ಮಾಡಿಲ್ಲ.

ಪುಟಿನ್ ಅವರನ್ನು ಮುಂದುವರಿಯದಂತೆ ತಡೆಯುವ ರಾಜತಾಂತ್ರಿಕ ಪ್ರಯತ್ನಗಳು ವಿಫಲವಾಗುತ್ತಿವೆ. ಇದರಿಂದ ಕಚ್ಚಾ ತೈಲ ಮಾರುಕಟ್ಟೆ ಹಾಗೂ ಅನಿಲ ದರ ಇನ್ನೂ ಗಗನಮುಖಿಯಾಗುವ ಸಾಧ್ಯತೆ ಇದೆ. ಇದು ಭಾರತದಂತಹ ಪ್ರಮುಖ ತೈಲ ಆಮದುರಾರರ ಮೇಲೆ ಭಾರಿ ಒತ್ತಡ ಸೃಷ್ಟಿಸಲಿದೆ.

ಏಕಾಏಕಿ ಏರುತ್ತಿರುವ ಜಾಗತಿಕ ಕಚ್ಚಾ ತೈಲದ ದರವು ಭಾರತದ ಆರ್ಥಿಕ ಸ್ಥಿರತೆಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಎಫ್‌ಎಸ್‌ಡಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪ್ರಸ್ತುತದ ಸನ್ನಿವೇಶದ ಬಗ್ಗೆ ಸರ್ಕಾರ ಗಮನ ಇರಿಸಿದೆ ಎಂದು ತಿಳಿಸಿದ್ದಾರೆ.

ಉಕ್ರೇನ್ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ಪುಟಿನ್ ಘೋಷಣೆ ಮಾಡಿರುವುದು, ಹಣದುಬ್ಬರ ಆತಂಕಗಳ ಮಧ್ಯೆ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಹಣಕಾಸು ನೀತಿ ಆದ್ಯತೆಗಳ ಮೇಲೆ ಪರಿಣಾಮ ಉಂಟುಮಾಡಲಿದೆ. ಜನಸಾಮಾನ್ಯರ ದೈನಂದಿನ ಜೀವನ ಸರಿದೂಗಿಸುವ ಬಜೆಟ್ ಲೆಕ್ಕಾಚಾರಗಳು ತಲೆಕೆಳಗಾಗಲಿವೆ.

ಬದಲಾದ ಸನ್ನಿವೇಶದ ಮಧ್ಯೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ತಮ್ಮ ಆಯ್ಕೆಗಳನ್ನು ಮರುಪರಿಶೀಲಿಸಬೇಕಾಗಿದೆ ಹಾಗೂ ದರ ಏರಿಕೆಯನ್ನು ನಿಯಂತ್ರಿಸಲು ಕೆಲವು ನೀತಿಗಳನ್ನು ಬದಲಿಸಬೇಕಾಗಿದೆ.

ಕಳೆದ ವರ್ಷ ಮಾಡಿದಂತೆ ಕೆಲವು ತೆರಿಗೆಗಳ ಕಡಿತ ಮಾಡುವುದು ಗ್ರಾಹಕರ ಮೇಲಿನ ಹೊರೆಯನ್ನು ಕೊಂಚ ತಗ್ಗಿಸಬಹುದು. ಮಧ್ಯಪ್ರವೇಶ ಮಾಡುವ ಅಗತ್ಯ ಬಿದ್ದ ಸಂದರ್ಭದಲ್ಲಿ ಸರ್ಕಾರವು ಸಾರ್ವಜನಿಕವಾಗಿ ತನ್ನ ನೀತಿ ಪ್ರಕಟಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಎಫ್‌ಎಸ್‌ಡಿಸಿ ಸಭೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ದೊಡ್ಡ ಪ್ರಮಾಣದಲ್ಲಿ ವೆಚ್ಚದ ಯೋಜನೆಗಳನ್ನು ರೂಪಿಸಿದೆ. ಈಗ ಹೆಚ್ಚುತ್ತಿರುವ ಬೆಲೆಯ ಸನ್ನಿವೇಶವು ಆರ್ಥಿಕ ಹೊರೆಯನ್ನು ಹೆಚ್ಚಿಸಬಹುದು. ಈ ಎಲ್ಲ ಸವಾಲುಗಳನ್ನು ನಿಭಾಯಿಸಲು ಸರ್ಕಾರ ಯಾವ ರೀತಿಯ ಹೆಜ್ಜೆ ಇರಿಸಲಿದೆ ಎನ್ನುವುದು ಕುತೂಹಲ ಮೂಡಿಸಿರುವ ಸಂಗತಿ.

WhatsApp
Facebook
Telegram
error: Content is protected !!
Scroll to Top