ಹಿಂದೂಪರ ಸಂಘಟನೆ ಕಾರ್ಯಕರ್ತರ ಹತ್ಯೆಗೈದವರನ್ನು ಎನ್​ಕೌಂಟರ್ ಮಾಡಿ: ಪ್ರತಾಪ್ ಸಿಂಹ..!

ರಾಜ್ಯ(ಬೆಂಗಳೂರು): ನಮ್ಮದೇ ಸರ್ಕಾರ ಇದ್ದರೂ, ನಮ್ಮ ಕಾರ್ಯಕರ್ತರ ಕೊಲೆ ನಡೆಯುತ್ತದೆ ಎಂದರೆ ನಮಗೆ ನಾಚಿಕೆಯಾಗುತ್ತಿದೆ. ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾದಾಗ ಕ್ರಮದ ಭರವಸೆ ನೀಡುತ್ತಾ ಕುಳಿತರೆ ಯಾವುದೇ ಪ್ರಯೋಜನವಿಲ್ಲ. ಹೈದರಾಬಾದ್ ಅತ್ಯಾಚಾರ ಪ್ರಕರಣದಲ್ಲಿ ಹೇಗೆ ಎನ್​ಕೌಂಟರ್ ಮಾಡಿದ್ರೋ, ಇಲ್ಲಿಯೂ ಅದೇ ರೀತಿ ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ಷ ಬೀದಿಯಲ್ಲಿ ಹೆಣವಾಗಿ ಬಿದ್ದಿರುವುದನ್ನು ನೋಡಿದಾಗ ಮನಸ್ಸಿಗೆ ಅತೀವ ವೇದನೆಯಾಗುತ್ತದೆ. ಅದೇ ರೀತಿ ನಮ್ಮ ಸರ್ಕಾರ ಬಂದರೂ ಕೂಡ ನಮ್ಮ ಕಾರ್ಯಕರ್ತರ ಪರಿಸ್ಥಿತಿ ಈ ರೀತಿ ಆಗುತ್ತಿದೆ ಎಂದು ನನಗೆ ನಾಚಿಕೆಯಾಗುತ್ತದೆ. ಪ್ರತಿ ಬಾರಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ನಡೆದಾಗ ನಾವು ಎಸ್​​ಡಿಪಿಐ, ಕೆಎಫ್​​ಡಿ ಮತ್ತು ಸಿದ್ದರಾಮಯ್ಯ ಸರ್ಕಾರವನ್ನು ಬೈಯುತ್ತಿದ್ದೆವು. ಇದಕ್ಕೆಲ್ಲಾ ಸಿದ್ದರಾಮಯ್ಯ ಸರ್ಕಾರವೇ ಕಾರಣ ಎಂದು ಸಿದ್ದರಾಮಯ್ಯರನ್ನು ದೂರುತ್ತಿದ್ದೆವು. ಆದರೆ ಇಂದು ನಮ್ಮ ಕಾರ್ಯಕರ್ತರು ಕಷ್ಟಪಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಆದ್ರೆ ನಮ್ಮದೇ ಸರ್ಕಾರ ಇದ್ದರೂ ಕೂಡ ಈ ರೀತಿ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮದೇ ಸರ್ಕಾರ ಇದ್ದರೂ ಮಂಗಳೂರಿನಲ್ಲಿ ಸಿಎಎ ವಿರುದ್ಧ ಹೋರಾಟ ನಡೆಯಿತು. ಒಂದಿಬ್ಬರು ಪೊಲೀಸರ ಸಮಯಪ್ರಜ್ಞೆಯಿಂದ ಗೋಲಿಬಾರ್ ನಡೆದು ಸರ್ಕಾರದ ಮರ್ಯಾದೆ ಉಳಿಯಿತು. ಕೆಜಿಹಳ್ಳಿ, ಡಿಜೆ ಹಳ್ಳಿ ಘಟನೆ ವೇಳೆ ಬೀದಿಬದಿಯಲ್ಲಿ ಹಿಂದೂಗಳನ್ನು ಹೊಡೆಯುವ ಕೆಲಸ ನಡೆಯಿತು. ಆಗ ಪೊಲೀಸರ ಮೇಲೆಯೇ ಹಲ್ಲೆ ನಡೆಯಿತು. ಆಗಲು ನಮ್ಮನ್ನಾಳುವವರು ತಕ್ಷಣ ಕ್ರಮದ ಭರವಸೆ ನೀಡಿದರು. ಪಾತಾಳದಲ್ಲಿದ್ದರೂ ಬಿಡಲ್ಲ ಎಂದಿದ್ದರು. ಎಸ್​​ಡಿಪಿಐ ಬ್ಯಾನ್ ಮಾಡುವ ಕುರಿತು ಹೇಳಿಕೆ ನೀಡಿದ್ದರು.

ಹಿಜಾಬ್ ವಿಚಾರದಲ್ಲಿಯೂ ಕೂಡ ಇಡೀ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ನ್ಯಾಯಾಲಯ ಮಧ್ಯಂತರ ಆದೇಶ ನೀಡಿ ಸಮವಸ್ತ್ರ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದಿದ್ದರೂ, ನಿಷೇಧಾಜ್ಞೆ ಇದ್ದರೂ ಕೂಡ ಅದನ್ನು ಉಲ್ಲಂಘಿಸುವವರ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ ಯಾಕೆ? ಯಾವಾಗ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದರು. ಡಿಜೆ ಹಳ್ಳಿ ಪ್ರಕರಣ ಆದಾಗ ಕ್ರಮ ಕೈಗೊಂಡಿದ್ದರೆ, ಇಂದು ಈ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ? ಎಂದು ಬಿಜೆಪಿ ಸರ್ಕಾರವನ್ನೇ ತರಾಟೆಗೆ ತೆಗೆದುಕೊಂಡರು.

ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ಮಂಗಳೂರಿನಲ್ಲಿ ಸಿಎಎ ಗಲಾಟೆ ನಡೆದಿದೆ. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರಕರಣ ಸಂಭವಿಸಿದೆ. ಹಾಗಾಗಿ ಅವರಿಗೆ ಎಸ್​ಡಿಪಿಐ ಕೆಎಫ್​​ಡಿ ಬಗ್ಗೆಯೂ ಗೊತ್ತಿದೆ. ಕೇರಳ ಮಾದರಿ ಹತ್ಯೆಯನ್ನು ರಾಜ್ಯದಲ್ಲಿ ತಂದವರು ಅವರೇ ಎಂದು ಗೊತ್ತಿದೆ. ಇನ್ನಾದರೂ ರಾಜ್ಯದಲ್ಲಿ ಆ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಅಸ್ಸೋಂ ಮುಖ್ಯಮಂತ್ರಿ ಹಿಮಾಂಶು ಬಿಸ್ವಾಸ್​ ಈಗಾಗಲೇ ಎಸ್​​ಡಿಪಿಐ ಬ್ಯಾನ್ ಮಾಡಬೇಕು ಎಂದು ಹೇಳಿದ್ದಾರೆ. ಆ ಸಂಘಟನೆ ಮೇಲೆ ಹೆಚ್ಚು ಕೊಲೆ ಮಾಡಿರುವ ಕೇಸ್​ಗಳು ಕರ್ನಾಟಕದಲ್ಲಿ ದಾಖಲಾಗಿವೆ. ಹಾಗಾಗಿ ನಮ್ಮಲ್ಲೂ ಎಸ್​​ಡಿಪಿಐ, ಕೆಎಫ್​​ಡಿ ನಿಷೇಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿದರು.

ಕೇವಲ ಕ್ರಮ ಎಂದು ಪತ್ರಿಕಾ ಹೇಳಿಕೆ ನೀಡಿದರೆ ಏನೂ ಉಪಯೋಗವಿಲ್ಲ. ಎನ್​ಕೌಂಟರ್ ಮಾಡಿದರೆ, ಅವರೆಲ್ಲಾ ಪಾಠ ಕಲಿಯುತ್ತಾರೆ. ಕಠಿಣ, ನಿರ್ದಾಕ್ಷಿಣ್ಯ ಕ್ರಮ, ಪಾತಾಳದಲ್ಲಿ ಅಡಗಿದ್ದರು ಬಿಡಲ್ಲ ಎಂದರೆ ಏನು ಆಗುವುದಿಲ್ಲ. ನಮ್ಮ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ. ಅವರಿಗೆ ಭ್ರಮನಿರಸವಾಗಿದೆ. ಇನ್ನಾದರೂ ಕೂಡ ನಾವು ಮಾತು ನಿಲ್ಲಿಸಿ ಕೃತಿಯಲ್ಲಿ ನಿರ್ಧಾಕ್ಷಣ್ಯತೆಯನ್ನು ತೋರಬೇಕು ಎಂದು ಸಂಸದ ಪ್ರತಾಪ್​ ಸಿಂಹ ಒತ್ತಾಯಿಸಿದರು.

WhatsApp
Facebook
Telegram
error: Content is protected !!
Scroll to Top