ಮೃತದೇಹ ಮೆರವಣಿಗೆ ವೇಳೆ ಕೇಸರಿ ಧ್ವಜ ಹಿಡಿದು ಕಲ್ಲು ತೂರಾಟ; ಪೊಲೀಸರನ್ನೇ ತಳ್ಳಿ ಅಂಗಡಿಗಳಿಗೆ ನುಗ್ಗಿದ ಕೆಲ ಯುವಕರು…!

ರಾಜ್ಯ(ಶಿವಮೊಗ್ಗ): ಭಜರಂಗದಳ ಕಾರ್ಯಕರ್ತ ಹರ್ಷನ ಮೃತದೇಹವನ್ನು ಮೆರವಣಿಗೆ ಮಾಡುತ್ತಿದ್ದ ವೇಳೆ ಕೆಲ ಯುವಕರು ಕೇಸರಿ ಧ್ವಜ ಹಿಡಿದು, ಕೆಎಸ್‌ಆರ್‌ಟಿಸಿ ಬಸ್, ಮನೆ ಹಾಗೂ ಕಟ್ಟಡದ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಮೆಗ್ಗಾನ್ ಆಸ್ಪತ್ರೆಯಿಂದ ಮೃತನ ನಿವಾಸದವರೆಗೆ ಮೆರವಣಿಗೆ ಮಾಡಲಾಗುತ್ತಿದ್ದು, ಬಸ್ ನಿಲ್ದಾಣದ ಮೂಲಕ ಸೀಗೆಹಟ್ಟಿಯ ನಿವಾಸದವರೆಗೆ ಮೆರವಣಿಗೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಮೆರವಣಿಗೆ ವೇಳೆ ನೂರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು. ಆದರೆ ಮೆರವಣಿಗೆಯಲ್ಲಿ ಭಾಗವಹಿಸಿರುವ ಯುವಕರು ಸಿಕ್ಕ-ಸಿಕ್ಕವರ ಮೇಲೆ ಕಲ್ಲು ತೂರಾಟ ನಡೆಸಿದರು. ಜೊತೆಗೆ 2 ಬೈಕ್‌ಗಳಿಗೆ ಹಾಗೂ ಕಾರುಗಳಿಗೆ ಬೆಂಕಿಯನ್ನು ಹಚ್ಚಿದ್ದಾರೆ.

ಅಂಬುಲೆನ್ಸ್ ಮೂಲಕ ಮೃತದೇಹ ರವಾನೆ ಮಾಡುವಾಗಲೇ ಕಾರ್ಯಕರ್ತರು ಅಮರ್ ರಹೇ ಅಮರ್ ರಹೇ ಹರ್ಷ ಅಮರ್ ರಹೇ ಎಂಬ ಉದ್ಘಾರದೊಂದಿಗೆ ಅಂಬುಲೆನ್ಸ್ ಮುಂದೆ ಕೇಸರಿ ಧ್ವಜಗಳನ್ನು ಹಾರಾಟ ನಡೆಸಿದ್ದರು.

ನಿಷೇಧಾಜ್ಞೆ ನಡುವೆಯೂ ಪೊಲೀಸರು ಮೆರವಣಿಗೆಗೆ ಅವಕಾಶ ನೀಡಿದ್ದರು. ಆದರೆ ಪೊಲೀಸರನ್ನೇ ತಳ್ಳಿ ಅಂಗಡಿಗಳಿಗೆ ನುಗ್ಗಿ ಕೆಲ ಯುವಕರು ದಾಂಧಲೆ ನಡೆಸಿದರು. ಮನೆ, ಬ್ಯಾಂಕ್ ಅಂಗಡಿಗಳ ಮೇಲೆ ಕಲ್ಲುತೂರಾಟ ನಡೆದಿದ್ದು, ಶಿವಮೊಗ್ಗ ನಗರದಲ್ಲಿ ಆತಂಕದ ವಾತಾವರಣ ಉಂಟಾಗಿದೆ.

ಈ ಎಲ್ಲಾ ಘಟನೆ ಪೊಲೀಸರ ಎದುರೇ ನಡೆಯುತ್ತಿದ್ದರೂ ಮೂಕಪ್ರೇಕ್ಷಕರಂತೆ ಇದ್ದರು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲರಾದರು. ಇತ್ತ ಗಲಾಟೆ ಹಿನ್ನೆಲೆಯಲ್ಲಿ ನಗರದಲ್ಲಿ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ.

WhatsApp
Facebook
Telegram
error: Content is protected !!
Scroll to Top