ಗಾಂಜಾ ದಂಧೆ ಮಾಹಿತಿದಾರನಿಗೆ ದುಷ್ಕರ್ಮಿಯಿಂದ ಚೂರಿ ಇರಿತ..!

ದಕ್ಷಿಣಕನ್ನಡ (ಮಂಗಳೂರು): ಗಾಂಜಾ ವ್ಯಸನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಆರೋಪದ ಮೇಲೆ ಹಾಡಹಗಲೇ ಕರಾಟೆ ಮಾಸ್ಟರ್‌ ಅನ್ನು ಮಾರಕಾಸ್ತ್ರದಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲದಲ್ಲಿ ಮಂಗಳವಾರ ಸಂಜೆ ನಡೆದಿದೆ.ಉಳ್ಳಾಲ ಉಳಿಯ ನಿವಾಸಿ ಹರೀಶ್ ಗಾಣಿಗ (42) ಇರಿತಕ್ಕೊಳಗಾದವರು. ವಿಶಾಲ್ ಯಾನೆ ವಿಕಾಸ್ ಪ್ರಕರಣದ ಆರೋಪಿ.

ಉಳ್ಳಾಲ ವೀರಭದ್ರ ದೇವಸ್ಥಾನದ ಬಳಿಯಲ್ಲಿರುವ ಹರೀಶ್ ಅವರ ಗ್ಯಾಸ್ ಬಿಡಿ ಭಾಗದ ಮಾರಾಟದ ಅಂಗಡಿಯಲ್ಲಿ ಇರಿತ ನಡೆದಿದ್ದು, ಗಾಯಾಳುವನ್ನು ದೇರಳ ಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳೀಯ ಗಾಂಜಾ ವ್ಯಸನಿ ಎನ್ನಲಾದ ವಿಶಾಲ್ ಯಾನೆ ವಿಕಾಸ್ ಎಂಬಾತ ಹರೀಶ್ ಅವರ ಅಂಗಡಿಗೆ ನುಗ್ಗಿ ಸೀಯಾಳ ಕೆತ್ತುವ ಕತ್ತಿ ಮತ್ತು ಚಾಕುವಿನಿಂದ ಇರಿದಿದ್ದಾನೆ.

ಉಳ್ಳಾಲದ ಉಳಿಯದಲ್ಲಿ ವಿಶಾಲ್ ಸೇರಿದಂತೆ ಯುವಕರು ಗಾಂಜಾ ವ್ಯಸನಕ್ಕೆ ಬಲಿಯಾಗಿ ದುಷ್ಕೃತ್ಯಗಳನ್ನು ಎಸಗುತ್ತಿದ್ದು ಈ ಬಗ್ಗೆ ಉಳಿಯ ನಿವಾಸಿ ಕರಾಟೆ ಮಾಸ್ಟರ್ ಆಗಿರುವ ಹರೀಶ್ ಅವರು ಎರಡು ಬಾರಿ ಉಳ್ಳಾಲ ಠಾಣೆಗೆ ದೂರು ನೀಡಿದ್ದರು.

ಮಂಗಳೂರು ಗಾಂಜಾ ವ್ಯಸನಿಗಳಿಂದ ಜೀವ ಬೆದರಿಕೆ ಇರುವುದಾಗಿಯೂ ಪೊಲೀಸರಿಗೆ ತಿಳಿಸಿದ್ದರು. ಆದರೆ ಪೊಲೀಸರು ಗಾಂಜಾ ಮಾಫಿಯಾದ ವಿರುದ್ಧ ಯಾವುದೇ ಕಟ್ಟು ನಿಟ್ಟಿನ ಕ್ರಮ ಕೆಗೊಂಡಿರಲಿಲ್ಲ. ಒಂದು ತಿಂಗಳ ಹಿಂದೆ ಗಾಂಜಾ ವ್ಯಸನಿ ವಿಶಾಲ್ ವಿರುದ್ಧ ಹರೀಶ್ ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮಂಗಳವಾರ ಬೆಳಗ್ಗೆ ವಿಶಾಲ್‌ನನ್ನು ಠಾಣೆಗೆ ವಿಚಾರಣೆಗೆ ಕರೆಸಿದ್ದಾರಂತೆ.

ಅದರಿಂದ ಕುಪಿತಗೊಂಡ ವಿಶಾಲ್ ಮಂಗಳವಾರ ಸಂಜೆ ಒಬ್ಬನೇ ಎರಡು ಮಾರಕಾಸ್ತ್ರಗಳನ್ನ ಹಿಡಿದು ಹರೀಶ್ ಅವರ ಅಂಗಡಿಗೆ ನುಗ್ಗಿ ಇರಿದಿದ್ದಾನೆ.

ಉಳ್ಳಾಲದಾದ್ಯಂತ ಗಾಂಜಾ ಮಾಫಿಯಾ ವ್ಯಾಪಕವಾಗಿದ್ದು ಪೊಲೀಸರು ದೂರು ನೀಡಿ ಸಲಹೆ ನೀಡುವುದು ಒಂದೆಡೆಯಾದರೆ ದೂರು ಕೊಟ್ಟವರು ಹೀನಾಯವಾಗಿ ಇರಿತಕ್ಕೊಳಗಾಗುತ್ತಿದ್ದು ಪೊಲೀಸರ ಬಗ್ಗೆ ಜನರು ಅನುಮಾನ ಪಡುವಂತಾಗಿದೆ.

WhatsApp
Facebook
Telegram
error: Content is protected !!
Scroll to Top