Budget Reaction: ಇದು ಉಪ್ಪು, ಹುಳಿ, ಖಾರ ಇಲ್ಲದ ಬಜೆಟ್: ಡಿ.ಕೆ.‌ ಸುರೇಶ್

ಈ ಬಜೆಟ್ ನಲ್ಲಿ ಉಪ್ಪು, ಉಳಿ, ಖಾರ ಯಾವುದೂ ಇಲ್ಲ. ಕಾರಣ ಮೋದಿ ಅವರು ‘ಯಾರೂ ತಿನ್ನಬೇಡಿ’ ಎಂದು ಹೇಳಿರುವುದರಿಂದ ಇವರು ಜನಸಾಮಾನ್ಯರೂ ಏನನ್ನೂ ತಿನ್ನದಂತೆ ಮಾಡಲು ಹೊರಟಿದ್ದಾರೆ ಎಂದು ಸಂಸದ ಡಿ.ಕೆ‌.‌ ಸುರೇಶ್ ಹೇಳಿದ್ದಾರೆ.

ನವದೆಹಲಿ (ಫೆ. 1) : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ (Union Finance Minister Nirmala Seetaraman) ಅವರು ನಾಲ್ಕನೇ ಬಜೆಟ್ (Budget) ಮಂಡಿಸಿದ್ದು, ಇದು ಬಜೆಟ್ ಎಂಬುದಕ್ಕಿಂತ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ಅವರು ಸಾರ್ವಜನಿಕ ಭಾಷಣಗಳಲ್ಲಿ ಹೇಳುವ ಸರ್ಕಾರದ ಸಾಧನೆಯ ಪಟ್ಟಿಯನ್ನು ಎಲ್ಲಾ ಸಂಸದರನ್ನು ಕೂರಿಸಿಕೊಂಡು ಒಪ್ಪಿಸುವಂತಿದೆ. ಒಟ್ಟಾರೆ 39 ಲಕ್ಷ ಕೋಟಿ ರೂಪಾಯಿ ಬಜೆಟ್ ನಲ್ಲಿ ಕೋವಿಡ್ ಪಿಡುಗಿನ ಸಂದರ್ಭ ಕೆಲಸ ಮಾಡಿದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದು ಬಿಟ್ಟರೆ ಉಳಿದಂತೆ ಸಂಕಷ್ಟಕ್ಕೆ ಸಿಲುಕಿದವರಿಗೆ ಯಾವುದೇ ರೀತಿಯ ಭರವಸೆ ಮೂಡಿಸುವ ಅಂಶಗಳಿಲ್ಲ. ಈ ಬಜೆಟ್ ನಲ್ಲಿ ಉಪ್ಪು, ಉಳಿ, ಖಾರ ಯಾವುದೂ ಇಲ್ಲ. ಕಾರಣ ಮೋದಿ ಅವರು ‘ಯಾರೂ ತಿನ್ನಬೇಡಿ’ ಎಂದು ಹೇಳಿರುವುದರಿಂದ ಇವರು ಜನಸಾಮಾನ್ಯರೂ ಏನನ್ನೂ ತಿನ್ನದಂತೆ ಮಾಡಲು ಹೊರಟಿದ್ದಾರೆ ಎಂದು ಸಂಸದ ಡಿ.ಕೆ‌.‌ ಸುರೇಶ್ (MP D.K. Suresh) ಹೇಳಿದ್ದಾರೆ.

ತೆರಿಗೆ ವಸೂಲಿಯಲ್ಲಿ ನಿರತವಾಗಿರುವ ಸರ್ಕಾರ
ಕೇಂದ್ರ ಬಜೆಟ್ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ. ಸುರೇಶ್ ಅವರು, ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೋವಿಡ್ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಈ ಬಜೆಟ್ ಮೇಲೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು. ಬಹಳ ಅಚ್ಚರಿ ವಿಚಾರ ಎಂದರೆ ಕೇಂದ್ರ ಸರ್ಕಾರಕ್ಕೆ ಜನವರಿ ತಿಂಗಳಲ್ಲಿ 1.40 ಲಕ್ಷ ಕೋಟಿ ರು. ಆದಾಯ ಬಂದಿದೆ ಎಂದು ಹೇಳಿದ್ದಾರೆ. ಇವರು ಜಿಎಸ್ಟಿಯಲ್ಲಿ ಶೇ.18, ಶೇ.28 ರಷ್ಟು ತೆರಿಗೆ ವಿಧಿಸಿದರೆ ಆದಾಯ ಬಂದೇ ಬರುತ್ತದೆ. ಆದರೆ ಬಡವರು, ಮಧ್ಯಮವರ್ಗದವರ ತೆರಿಗೆ ಕಡಿಮೆ ಮಾಡುವ ಬಗ್ಗೆ ಪ್ರಸ್ತಾಪವೇ ಇಲ್ಲ. ಇದು ಸರ್ಕಾರ ಎಲ್ಲರಿಂದಲೂ ತೆರಿಗೆ ವಸೂಲು ಮಾಡುವುದರಲ್ಲಿ ನಿರತವಾಗಿದ್ದು, ಯಾರೂ ಅಡ್ಡಿಪಡಿಸಬೇಡಿ ಎಂದು ಹೇಳುವಂತಿದೆ ಎಂದು ವ್ಯಾಖ್ಯಾನಿಸಿದರು.

ಬಜೆಟ್‌ನಲ್ಲಿ ರೈತರಿಗೆ ಅನ್ಯಾಯ
ಕೇಂದ್ರ ಸರ್ಕಾರ ಬಜೆಟ್ ನಲ್ಲಿ ರಾಜ್ಯಗಳಿಗೆ ಸಾಲದ ರೂಪದಲ್ಲಿ ಅನುದಾನ ನೀಡುವುದಾಗಿ ಹೇಳಿದೆ. ಬಡವರಿಗೆ ಮನೆ ನೀಡುತ್ತೇವೆ ಎಂದಿದೆ. ಆದರೆ ಅದನ್ನು ಕಟ್ಟಲು ಬೇಕಾಗಿರುವ ಸಾಮಾಗ್ರಿಗಳ ಬೆಲೆ ಕಡಿಮೆ ಮಾಡಿಲ್ಲ. ಈ ಬಜೆಟ್ ನಲ್ಲಿ ಕನಿಷ್ಠ ಬೆಂಬಲ ಬೆಲೆ ಬಗ್ಗೆ ರೈತರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸರ್ಕಾರ ಬೆಂಬಲ ಬೆಲೆಯನ್ನು ಕಳೆದ ವರ್ಷದಷ್ಟೇ ಮುಂದುವರಿಸಿದೆ. ಜತೆಗೆ ಮಿತಿ ಹಾಕುವುದರ ಮೂಲಕ ಎಲ್ಲ ವರ್ಗದ ರೈತರಿಗೆ ಅನ್ಯಾಯ ಮಾಡಿರುವುದು ಎದ್ದು ಕಾಣುತ್ತದೆ  ಎಂದು ಡಿ.ಕೆ. ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಸುಳ್ಳು ಭರವಸೆಗಳು ತುಂಬಿದ ಬಜೆಟ್
ಒಟ್ಟಾರೆಯಾಗಿ ಈ ಬಜೆಟ್ ನಲ್ಲಿ ಚರ್ಚೆ ಮಾಡುವಂತಹ ಯಾವುದೇ ಅಂಶಗಳಿಲ್ಲ. ರಕ್ಷಣಾ ಕ್ಷೇತ್ರದಲ್ಲಿ ಆಂತರಿಕ ಉತ್ಪಾದನೆ, 60 ಲಕ್ಷ ಉದ್ಯೋಗ ಸೃಷ್ಟಿ ಬಗ್ಗೆ ಹೇಳಿದ್ದಾರೆ. ಆ ಮೂಲಕ ಪ್ರಧಾನ ಮಂತ್ರಿಗಳು ನಮಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡಲು ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇದೆಲ್ಲವನ್ನು ನೋಡಿದರೆ ಈ ಬಜೆಟ್ ನಲ್ಲಿ ಬರೀ ಸುಳ್ಳು ಭರವಸೆಗಳೇ ತುಂಬಿವೆ. ಸರ್ಕಾರ ಯಾವುದೇ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಕ್ರಮ ಕೈಗೊಂಡಿಲ್ಲ ಎಂದು ಕಿಡಿ ಕಾರಿದರು.
39 ಲಕ್ಷ ಕೋಟಿ ರೂ. ಕೊರತೆ
25 ವರ್ಷಗಳ ನೀಲನಕ್ಷೆ ಪ್ರಸ್ತಾಪ ಮಾಡಿರುವ ಕೇಂದ್ರ ಸರ್ಕಾರ ಇದಕ್ಕೆ ಹಣವನ್ನೇ ನೀಡಲಿಲ್ಲ ಎಂದರೆ ಅಭಿವೃದ್ಧಿ ಹೇಗೆ ಸಾಧ್ಯ? ರಾಷ್ಟ್ರೀಯ ಹೆದ್ದಾರಿಗಳನ್ನು 25 ಸಾವಿರ ಕಿ.ಮೀ ವಿಸ್ತರಿಸುತ್ತೇವೆ, ಇದಕ್ಕೆ 20 ಸಾವಿರ ಕೋಟಿ ನೀಡುತ್ತೇವೆ ಎಂದು ಹೇಳಿದ್ದಾರೆ. ಇದರಲ್ಲಿ ಅನುದಾನಗಳ ಕೊರತೆ ಎದ್ದು ಕಾಣುತ್ತಿದೆ. ಕೇಂದ್ರ ಸರ್ಕಾರಕ್ಕೆ 24 ಲಕ್ಷ ಕೋಟಿ ರು. ಆದಾಯ ಬರುವುದಾಗಿ ಹೇಳಿದ್ದು, 39 ಲಕ್ಷ ಕೋಟಿ ಬಜೆಟ್ ನಲ್ಲಿ ಆರ್ಥಿಕ ಕೊರತೆ ದೊಡ್ಡ  ಪ್ರಮಾಣದಲ್ಲಿ ಎದ್ದು ಕಾಣುತ್ತಿದೆ. ಇದನ್ನು ಹೇಗೆ ಸರಿದೂಗಿಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯಕ್ಕೆ ಅನ್ಯಾಯ
ಒಟ್ಟಾರೆಯಾಗಿ ಭಾರತೀಯರ ಮೇಲೆ ಸಾಲದ ಹೊರೆ ಮತ್ತಷ್ಟು ಹೆಚ್ಚಿಸಲಾಗುತ್ತಿದೆ. ನೇರ ತೆರಿಗೆ, ಪರೋಕ್ಷ ತೆರಿಗೆ ಎರಡೂ ಹೆಚ್ಚಾಗಿರುವುದರಿಂದ ಜನರ ನಿರೀಕ್ಷೆ ಸಂಪೂರ್ಣವಾಗಿ ಹುಸಿಯಾಗಿದೆ.‌ ನಿರ್ಮಲಾ ಸೀತರಾಮನ್ ಅವರು ತಮ್ಮ ಬಜೆಟ್ ನಲ್ಲಿ ಕರ್ನಾಟಕ ರಾಜ್ಯಕ್ಕೂ ಅನ್ಯಾಯ ಎಸಗಿದ್ದು, ಕಾವೇರಿ- ಪೆನ್ನಾರ್ ನದಿ ಜೋಡಣೆ ಎಂದು ಹೇಳಿದ್ದು, ಕೊನೆಗೆ ಎರಡೂ ರಾಜ್ಯಗಳು ಒಪ್ಪಿದರೆ ಎಂದು ಸೇರಿಸಿದ್ದಾರೆ. ರಾಜ್ಯಕ್ಕೆ ಅನುಕೂಲವಾಗುವ ಯಾವುದೇ ಅಂಶಗಳು ಈ ಬಜೆಟ್ ನಲ್ಲಿ ಇಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

WhatsApp
Facebook
Telegram
error: Content is protected !!
Scroll to Top