ಭಟ್ಕಳ : ಮಂಗಳವಾರದಂದು ಸುರಿದ ಮಳೆಗೆ ಇಲ್ಲಿನ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿದು ನಾಲ್ವರು ಮೃತಪಟ್ಟ ಸ್ಥಳಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಂದಾಯ ಸಚಿವ ಆರ್.ಅಶೋಕ ಅವರೊಂದಿಗೆ ಬುಧವಾರ ಆಗಮಿಸಿ ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ ಪರಿಹಾರ ಮೊತ್ತದ ಚೆಕ್‌ನ್ನು ನೀಡಿದರು

ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಮಳೆಯಿಂದ ತಾಲೂಕಿನಲ್ಲಿ ಹಲವಾರು ನಷ್ಟ ಸಂಭವಿಸಿದೆ. 2175 ಕ್ಕೂ ಅಧಿಕ ಮನೆಗಳಿಗೆ ಮಳೆ ನೀರು ನುಗ್ಗಿ ಹಾನಿಯಾಗಿದೆ. ಅಂಗಡಿ ಮುಂಗಟ್ಟುಗಳೀಗೂ ನೀರು ನುಗ್ಗಿ ಹಾನಿಯಾಗಿದೆ. ಬೆಳೆ ನಾಶವಾಗಿದೆ ಎಂದರು.
ಮಂಗಳವಾರದ ಮಳೆಯಲ್ಲಿ ಮೀನುಗಾರಿಕಾ ದೋಣಿಗಳು
ನಾಶವಾಗಿದೆ. ರಸ್ತೆಗಳು, ಶಾಲಾ ಕಟ್ಟಡಗಳು ಪ್ರಾಥಮಿಕ ಸೇತುವೆಗಳು ಹಾನಿಯಾಗಿದ್ದು ಅಂದಾಜಿನಂತೆ ತಾಲೂಕಿನಲ್ಲಿ 35 ರಿಂದ 40 ಕೋಟಿಗೂ ಅಧಿಕ ಹಾನಿಯಾಗಿದ್ದು ಜಿಲ್ಲಾಧಿಕಾರಿಗಳ ಫಂಡ್‌ನಲ್ಲಿ ಈಗಾಗಲೆ ಪ್ರಕೃತಿ ವಿಕೋಪ ನಿರ್ವಹಣೆಗಾಗಿ ರೂ. 38 ಕೋಟಿ ಹಣವಿದ್ದು ಮನೆಗಳ ಹಾನಿಗೆ ಈ ಹಣವನ್ನು ನೀಡಲು ಈಗಾಗಲೇ ಆದೇಶ ನೀಡಲಾಗಿದೆ ಎಂದರು. ಮಳೆಯಿಂದ ಅಂಗಡಿಗಳಿಗೂ ನೀರು ನುಗ್ಗಿದ್ದು ಅವರಿಗೂ ಪರಿಹಾರ ನೀಡುತ್ತೇವೆ. ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆಗಳಿಗೆ ಹಣವನ್ನು ಬಿಡುಗಡೆ ಮಾಡುತ್ತೇವೆ. ಕೆಲವಡೆ ಹೊಳೆ ಹಾಗೂ ನದಿಗಳಲ್ಲಿ ಹೂಳು ತುಂಬಿದ್ದು ಹೂಳನ್ನು ತೆಗೆಯಲು ಹಣ ಬಿಡುಗಡೆ ಮಾಡುವಂತೆ ಅಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮೀನುಗಾರರ ದೋಣಿಗಳಿಗೂ ಈ ನೆರೆ ಹಾವಳಿಯಿಂದ ನಷ್ಟವಾಗಿದೆ. ಮೀನುಗಾರಿಕಾ ಇಲಾಖೆಯಿಂದ ಸಮಗ ಮಾಹಿತಿ ಪಡೆದು ಇದಕ್ಕೂ ಹಣ ಬಿಡುಗಡೆ ಮಾಡುತ್ತೇನೆ ಎಂದ ಮುಖ್ಯಮಂತ್ರಿಗಳು ಮಳೆಯಿಂದ ರಾಜ್ಯದ ಸುಮಾರು 14 ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿದ್ದು 115 ಹಳ್ಳಿಗಳಿಗೆ ತೊಂದರೆಯಾಗಿದೆ.
ಮೃತರ ಕುಟುಂಬದವರ ಮಕ್ಕಳ ಸ್ನಾತಕ್ಕೋತ್ತರ ವಿದ್ಯಾಭ್ಯಾಸದವರೆಗಿನ ವೆಚ್ಚವನ್ನು ಸರಕಾರ ವಹಿಸಿಕೊಳ್ಳಲಿದೆ. ಇವರ ಕುಟುಂಬಗಳಿಗೆ ಮನೆಯ ಅವಶ್ಯವಿದ್ದರೆ ಮನೆಯನ್ನೂ ನೀಡುತ್ತೇವೆ ಎಂದರು.
ಐ.ಆರ್.ಬಿ. ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹೋಗದ ಕಾರಣ ನೆರೆ ಬರುತ್ತಿದೆ ಎಂದು ಸಾರ್ವಜನಿಕರ ಆರೋಪವಾಗಿದೆ ಇದರ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಮುಖ್ಯ ಮಮತ್ರಿಗಳಿಗೆ ಪ್ರಶ್ನೆ ಮಾಡಿದ ಮಾಧ್ಯಮದವರು ಐ.ಆರ್.ಬಿ. ಕಂಪನಿಯ ಇಂಜನೀಯರುಗಳನ್ನು ಬೆಂಗಳೂರಿನಲ್ಲಿ ಕರೆದು ಇದರ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳತ್ತೇನೆ ಎಂದರು.
ಜಿಲ್ಲೆಯ ಮೊಗೇರರು ನೂರಾರು ದಿನಗಳಿಂದ ಮುಷ್ಕರ ಹೂಡಿತ್ತಿದ್ದಾರೆ ಇಂದು ಸಹ ರಸ್ತೆ ಬದಿಯಲ್ಲಿ ನಿಂತು ಪ್ರತಿಭಟನೆ ಮಾಡುತ್ತಿದ್ದಾರೆ ಇದರ ಬಗ್ಗೆ ಕೇಳಿದ ಪ್ರಶ್ನೆಗೆ ಜಾತಿ ಬಗ್ಗೆ ಒಂದು ತಜ್ಞ ಸಮಿತಿ ನೇಮಿಸಿದ್ದು ಸಮಿತಿಯ ವರದಿ ಬಂದ ನಂತರ ತೀರ್ಮಾನಿಸುತ್ತೇವೆ ಎಂದರು.