ಗಡಿ ಸಂಘರ್ಷದ ಬಳಿಕ ಮೊದಲ ಸಲ ಚೀನಾ ವಿದೇಶಾಂಗ ಸಚಿವರ ಭಾರತ ಭೇಟಿ: ಫಲ ಕೊಡಲಿದೆಯೇ ಮಾತುಕತೆ?

ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ 2020ರಲ್ಲಿ ನಡೆದ ಸೈನಿಕರ ಕಾಳಗದ ಬಳಿಕ ಇದೇ ಮೊದಲ ಬಾರಿಗೆ ಚೀನಾ ಮತ್ತು ಭಾರತವು ಸಚಿವರ ಮಟ್ಟದ ಮಾತುಕತೆ ನಡೆಸುತ್ತಿವೆ. ಚೀನಾ

ಹೊಸದಿಲ್ಲಿ:ಚಿನಾ ಸೈನಿಕರ ಒಳನುಸುಳುವಿಕೆ ಹಾಗೂ ಉಭಯ ದೇಶಗಳ ನಡುವಿನ ಸಂಘರ್ಷ ತೀವ್ರಗೊಂಡ ಸುಮಾರು ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ವಿದೇಶಾಂಗ ಸಚಿವ ಎಸ್‌ ಜೈ ಶಂಕರ್‌  ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್‌ ಇ  ದಿಲ್ಲಿಯಲ್ಲಿ ಶುಕ್ರವಾರ ಭೇಟಿ ಮಾಡಿದ್ದಾರೆ. ವಾಂಗ್ ಯಿ ಅವರು ಅವರು ಕಳೆದ ರಾತ್ರಿ ಅಘೋಷಿತ ಭೇಟಿಯಲ್ಲಿ ಭಾರತಕ್ಕೆ ಬಂದಿಳಿದಿದ್ದಾರೆ.

ವಾಂಗ್ ಯಿ ಅವರು ಮೊದಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೊವೆಲ್‌  ಅವರನ್ನು ಭೇಟಿ ಮಾಡಿದ್ದರು. ಗಡಿ ವಿವಾದ ಹಾಗೂ ಉಕ್ರೇನ್ ಯುದ್ಧದ ಭೌಗೋಳಿಕ ಗೋಜಲುಗಳ ಬಗ್ಗೆ ಇಬ್ಬರೂ ಚರ್ಚೆ ನಡೆಸಿದರು ಎನ್ನಲಾಗಿದೆ. ಲಡಾಖ್‌ನಲ್ಲಿ ಗಡಿ ಸಂಘರ್ಷ ಆರಂಭವಾದ ಸಂದರ್ಭದಿಂದ ಚೀನಾದ ಉನ್ನತ ನಾಯಕರೊಬ್ಬರು ಭಾರತಕ್ಕೆ ಭೇಟಿ ನೀಡಿರುವುದು ಇದು ಮೊದಲ ಸಲವಾಗಿದೆ.

ಸಮಸ್ಯೆಗಳು ಯಶಸ್ವಿಯಾಗಿ ಪರಿಹಾರ ಕಂಡರೆ ತಾವು ಕೂಡಲೇ ಚೀನಾಕ್ಕೆ ಭೇಟಿ ನೀಡಬಹುದು ಎಂದು ಅಜಿತ್ ದೋವಲ್ ಅವರು ವಾಂಗ್ ಯಿ ನೀಡಿದ ಆಹ್ವಾನಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವರದಿಯಾಗಿದೆ.

ವಾಂಗ್ ಯಿ ಅವರು ದಿಲ್ಲಿಗೆ ಬರುವುದಕ್ಕೂ ಮುನ್ನ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದರು. ಶುಕ್ರವಾರ ಅವರು ನೇಪಾಳಕ್ಕೆ ತೆರಳಲಿದ್ದಾರೆ.

ಚೀನಾ ವಿದೇಶಾಂಗ ಸಚಿವರ ಭಾರತ ಭೇಟಿಯನ್ನು ಗೋಪ್ಯವಾಗಿ ಇರಿಸಲಾಗಿತ್ತು. ಇದರ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಎರಡೂ ದೇಶಗಳು ನೀಡಿರಲಿಲ್ಲ. ದೀರ್ಘಕಾಲದಿಂದ ಇರುವ ಸೇನಾ ಬಿಕ್ಕಟ್ಟಿನ ಬಳಿಕ ದೈಹಿಕ ಮಾತುಕತೆಯನ್ನು ಆರಂಭಿಸುವ ಉದ್ದೇಶದಿಂದ ಈ ಭೇಟಿ ನಡೆದಿದೆ. ಈ ವರ್ಷದ ಕೊನೆಯಲ್ಲಿ ಬೀಜಿಂಗ್ ಆತಿಥ್ಯವಹಿಸಲಿರುವ ಬ್ರಿಕ್ಸ್ (BRICS) ಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಾಂಗ್ ಅವರು ಆಹ್ವಾನಿಸಲಿದ್ದಾರೆ.

ವಾಂಗ್ ಅವರ ಭೇಟಿ ಅನೇಕ ಕಾರಣಗಳಿಂದ ಮಹತ್ವ ಪಡೆದಿದೆ. ಗಡಿ ಭಾಗದಲ್ಲಿನ ಸಂಘರ್ಷ, ಭಾರತದ ಭೂಪ್ರದೇಶದ ಅತಿಕ್ರಮಣದ ಜತೆಗೆ ಕಾಶ್ಮೀರ ಕುರಿತಾದ ಚೀನಾ ನಿಲುವು ಸಾಕಷ್ಟು ಚರ್ಚೆಯಲ್ಲಿದೆ. ಪಾಕಿಸ್ತಾನದಲ್ಲಿ ಇಸ್ಲಾಮಿಕ್ ದೇಶಗಳ ಸಮ್ಮೇಳನದಲ್ಲಿ ಮಾತನಾಡಿದ್ದ ವಾಂಗ್ ಯಿ, “ಕಾಶ್ಮೀರದ ವಿಚಾರದಲ್ಲಿ ನಮ್ಮ ಅನೇಕ ಇಸ್ಲಾಮಿಕ್ ಸ್ನೇಹಿತರ ಕರೆಯನ್ನು ಇಂದು ನಾವು ಆಲಿಸಿದ್ದೇವೆ. ಚೀನಾ ಕೂಡ ಅದೇ ಆಶಯವನ್ನು ಹಂಚಿಕೊಳ್ಳುತ್ತದೆ” ಎಂದಿದ್ದರು.

“ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ವಿಷಯವು ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರವಾಗಿದೆ. ಚೀನಾ ಸೇರಿದಂತೆ ಇತರೆ ದೇಶಗಳಿಗೆ ಇದರ ಬಗ್ಗೆ ಹೇಳಿಕೆ ನೀಡುವ ಅಧಿಕಾರವಿಲ್ಲ. ಇದು ಅನಗತ್ಯ ಉಲ್ಲೇಖ” ಎಂದು ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿತ್ತು.

ಅವರ ಆಂತರಿಕ ವಿಚಾರಗಳ ಬಗ್ಗೆ ಹೇಳಿಕೆ ನೀಡುವುದರಿಂದ ಭಾರತ ಅಂತರ ಕಾಪಾಡಿಕೊಂಡಿದೆ ಎಂಬುದನ್ನು ಅವರು ಗಮನಿಸಬೇಕು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದರು.

2020ರ ಜೂನ್ ತಿಂಗಳಲ್ಲಿ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಭಯಾನಕ ಕಾಳಗದ ಬಳಿಕ ಉಭಯ ದೇಶಗಳ ಸಂಬಂಧ ಹದಗೆಟ್ಟಿತ್ತು. ಸುಮಾರು 14 ಸುತ್ತಿನ ಸೇನಾ ಮಾತುಕತೆಗಳ ಬಳಿಕ ಎರಡೂ ದೇಶಗಳು, ಬಿಕ್ಕಟ್ಟು ಪರಿಹಾರಕ್ಕೆ ಚರ್ಚಿಸುವ ನಿರೀಕ್ಷೆ ಇದೆ.

WhatsApp
Facebook
Telegram
error: Content is protected !!
Scroll to Top