ದ.ಕ-ಉಡುಪಿಯ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ಮುಂದುವರಿದ ಬಹಿಷ್ಕಾರ : ಯಾವ ದೇಗುಲಗಳಲ್ಲಿ ನಿಷೇಧ?

ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಕರಾವಳಿ ಕರ್ನಾಟಕದಲ್ಲಿ ತೀವ್ರವಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಮುಂದುವರಿದಿದ್ದು ಇದು ಹಿಜಾಬ್‌ ಸಂಬಂಧಿತವಾಗಿ ಮುಸ್ಲಿಂ ವ್ಯಾಪಾರಿಗಳಿಂದ ನಡೆದ ಸಂಪೂರ್ಣ ಬಂದ್‌ ಆಚರಣೆಗೆ ಪ್ರತಿಕ್ರಿಯಾತ್ಮಕ ಎನ್ನಲಾಗುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

 ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಕೆಲವೆಡೆ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಮುಂದುವರಿದಿದ್ದು, ಇದು ಹಿಜಾಬ್‌ ಸಂಬಂಧಿತವಾಗಿ ಮುಸ್ಲಿಂ ವರ್ತಕರಿಂದ ನಡೆದ ಸಂಪೂರ್ಣ ಬಂದ್‌ ಆಚರಣೆಗೆ ಪ್ರತಿಕ್ರಿಯಾತ್ಮಕ ಎನ್ನಲಾಗುತ್ತಿದೆ.

ಮಾ.17ರಂದು ಹಿಜಾಬ್ ವಿರುದ್ಧ ಹೈಕೋರ್ಟ್‌ ತೀರ್ಪು ಪ್ರತಿಭಟಿಸಿ ಮುಸ್ಲಿಂ ಸಂಘಟನೆಗಳು ಕೊಟ್ಟ ಬಂದ್‌ ಕರೆಗೆ ಸ್ಪಂದಿಸಿ ರಾಜ್ಯಾದ್ಯಂತ ಮುಸ್ಲಿಂ ವ್ಯಾಪಾರಿಗಳು ಸಂಪೂರ್ಣ ಬಂದ್‌ ಆಚರಿಸಿದ್ದರು. ಮೆಡಿಕಲ್, ಹೋಟೆಲ್, ತರಕಾರಿ, ಮೀನು, ಜಿನಸು ಅಂಗಡಿಗಳಂತಹ ಮೂಲ ಸೌಕರ್ಯಗಳನ್ನೇ ಬಂದ್‌ ಮಾಡಿದ್ದು, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಅವರಿಗೆ ಮಕ್ಕಳ ಶಿಕ್ಷಣಕ್ಕಿಂತ ಧರ್ಮ ಮುಖ್ಯವಾದರೆ ನಮಗೂ ನಮ್ಮ ಧರ್ಮವೇ ಮುಖ್ಯ. ನಾವೇಕೆ ನಮ್ಮ ಧಾರ್ಮಿಕ ಆಚರಣೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ಅವಕಾಶ ಕೊಡಬೇಕು ಎಂಬುದು ಹಿಂದೂ ಸಂಘಟನೆಗಳ ಅಭಿಮತ. ಇದರ ಪರಿಣಾಮವಾಗಿ ದೇವಸ್ಥಾನಗಳ ಜಾತ್ರೆ, ಉತ್ಸವ, ದೈವಸ್ಥಾನಗಳ ನೇಮ, ಕೋಲಗಳಲ್ಲೂ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಲಾಗುತ್ತಿದೆ.


ವರ್ಷಪೂರ್ತಿ ಕೋಟ್ಯಂತರ ರೂ. ವ್ಯವಹಾರ:
ಕರಾವಳಿಯಲ್ಲಿ ರಥೋತ್ಸವ, ಕೋಲ ನೇಮೋತ್ಸವ, ಬ್ರಹ್ಮಕಲಶೋತ್ಸವ ಸಂಭ್ರಮಾಚರಣೆಗಳಿಂದಾಗಿ ಕೋಟ್ಯಂತರ ರೂ. ವ್ಯಾಪಾರ ವಹಿವಾಟು ನಡೆಯುತ್ತದೆ. ಅದರಲ್ಲೂ ಕಳೆದೆರಡು ವರ್ಷ ಕೊರೊನಾದಿಂದಾಗಿ ಮುಂದೂಡಲ್ಪಟ್ಟಿದ್ದ ದೇವಸ್ಥಾನಗಳ ವಿವಿಧ ಉತ್ಸವಾಚರಣೆಗಳು ಈ ಬಾರಿ ವರ್ಷಪೂರ್ತಿ ನಿಬಿಡವಾಗಿ ನಡೆಯುತ್ತಿವೆ.

ದೇವಸ್ಥಾನ, ದೈವಸ್ಥಾನಗಳ ಧಾರ್ಮಿಕ ಆಚರಣೆಗಳಲ್ಲಿ ದೊಡ್ಡ ಮಟ್ಟದ ವ್ಯಾಪಾರ ನಡೆಯುತ್ತಿದ್ದರೂ, ಇದರಲ್ಲಿ ಬಹುಪಾಲು ಮುಸ್ಲಿಂ ವ್ಯಾಪಾರಿಗಳೇ ಅಂಗಡಿ ಮುಂಗಟ್ಟುಗಳನ್ನು ಹಾಕುತ್ತಿದ್ದುದು ಸಾಮಾನ್ಯವಾಗಿತ್ತು. ಇದೀಗ ಹಿಜಾಬ್‌ ಪರ ಬಂದ್‌ ಕರೆ ಮುಸ್ಲಿಂ ವ್ಯಾಪಾರಿಗಳಿಗೆ ತಿರುವುಮುರುವಾಗಿ ಪರಿಣಮಿಸಿದೆ.

ಧಾರ್ಮಿಕ ದತ್ತಿ ಇಲಾಖೆ ಮಾರ್ಗಸೂಚಿ ಅನುಸರಣೆ?:
ಕರಾವಳಿಯ ಪ್ರಸಿದ್ಧ ಕಾಪು ಮಾರಿಗುಡಿಯಲ್ಲಿ ನಡೆಯುವ ಮಾರಿಪೂಜೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ಹಿಂದೂ ಬಾಂಧವರು ಹೆಸರಿನಲ್ಲಿ ಕಾಪು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಧಾರ್ಮಿಕ ದತ್ತಿ ಇಲಾಖೆಯ ಮಾರ್ಗಸೂಚಿಯಲ್ಲಿ ದೇವಸ್ಥಾನದ ಸಮೀಪದ ಯಾವುದೇ ಕಟ್ಟಡ ಜಮೀನು ಅಥವಾ ನಿವೇಶನಗಳ ಸಹಿತ ಯಾವುದೇ ಸ್ವತ್ತುಗಳನ್ನು ಹಿಂದೂಯೇತೇತರರಿಗೆ ನೀಡುವಂತಿಲ್ಲ ಎಂಬ ಮಾರ್ಗಸೂಚಿಯಿದೆ.

ಅದರನ್ವಯ ಹಿಂದುಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂಬುದು ಆಗ್ರಹವಾಗಿತ್ತು. ಇದರನ್ವಯ ಮಾ.22, 23ರಂದು ನಡೆದ ಮಾರಿಪೂಜೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿತ್ತು. ಉಡುಪಿ ಜಿಲ್ಲೆಯ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಪೆರ್ಣಂಕಿಲ, ಪೆರ್ಡೂರು ದೇವಸ್ಥಾನದ ಪರಿಸರದಲ್ಲಿ ಕೂಡಾ ಮುಸ್ಲಿಮ್‌ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿದೆ.

ಸಾಮರಸ್ಯದ ಬಪ್ಪನಾಡು ಕ್ಷೇತ್ರದಲ್ಲೂ ನಿರ್ಬಂಧ:
ದಕ್ಷಿಣ ಕನ್ನಡ ಜಿಲ್ಲೆಯ ದೇಗುಲಗಳಲ್ಲೂ ಇದೀಗ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಮುಂದುವರಿದಿದೆ. ಕೋಮು ಸೌಹಾರ್ದತೆಯ ಕೇಂದ್ರವಾಗಿ ಗುರುತಿಸಿಕೊಂಡಿದ್ದ ಮೂಲ್ಕಿಯ ಬಪ್ಪನಾಡು ಕ್ಷೇತ್ರದಲ್ಲೂ ಬುಧವಾರ ನಡೆಯುತ್ತಿರುವ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ನೇರ ಪಾಲ್ಗೊಳ್ಳುತ್ತಿಲ್ಲ.

WhatsApp
Facebook
Telegram
error: Content is protected !!
Scroll to Top