ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಆಡಳಿತ ಅಂತ್ಯ?: ಪಿಟಿಐ ಸರ್ಕಾರಕ್ಕೆ ಪತನದ ಭೀತಿ

ಪಾಕಿಸ್ತಾನ ರಾಜಕೀಯದಲ್ಲಿ ತೀವ್ರ ಕೋಲಾಹಲ ಉಂಟಾಗಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಮಂಡಿಸಲಾಗುತ್ತಿರುವ ಅವಿಶ್ವಾಸ ನಿರ್ಣಯಕ್ಕೆ ಸ್ವತಃ ಅವರದೇ ಪಿಟಿಐ ಪಕ್ಷದ ಸಂಸದರಿಂದ ಬೆಂಬಲ ದೊರಕಿದೆ. ಈ ಭಿನ್ನಮತೀಯ ಸಂಸದರು ಸಿಂಧ್ ಹೌಸ್‌ನಲ್ಲಿ ಆಶ್ರಯ ಪಡೆದಿದ್ದಾರೆ.

ಕರಾಚಿ: ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. ಪ್ರಧಾನಿ ಇಮ್ರಾನ್‌ ಖಾನ್‌  ವಿರುದ್ಧ ಅವಿಶ್ವಾಸ ಗೊತ್ತುವಳಿ ನಿಲುವಳಿ ಮಂಡನೆಗೂ ಮುನ್ನ ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷದ 24 ಸಂಸದರು ಸಿಂಧ್ ಹೌಸ್‌ನಲ್ಲಿ ಆಶ್ರಯ ಕೋರಿದ್ದಾರೆ. ತಮ್ಮ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಇಮ್ರಾನ್ ಖಾನ್ ಭರವಸೆ ನೀಡಿದರೆ ಮಾತ್ರ ಪಾರ್ಲಿಮೆಂಟ್ ಲಾಡ್ಜ್‌ಗಳಿಗೆ ಮರಳಲು ಸಿದ್ಧರಾಗಿರುವುದಾಗಿ ರಾಷ್ಟ್ರೀಯ ಅಸೆಂಬ್ಲಿ ಸದಸ್ಯರು (ಎಂಎನ್‌ಎಸ್) ತಿಳಿಸಿದ್ದಾರೆ.

ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಉರುಳಿಸುವುದಾಗಿ ಬಹಿರಂಗ ಬೆದರಿಕೆ ಹಾಕಿರುವ ಈ 24 ಸಂಸದರು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಈ ತಿಂಗಳ ಅಂತ್ಯದಲ್ಲಿ ಅವಿಶ್ವಾಸ ನಿರ್ಣಯ  ಮಂಡನೆ ಮಾಡುವ ನಿರೀಕ್ಷೆ ಇದೆ. ತಮ್ಮ ವಿರುದ್ಧ ಮತ ಚಲಾಯಿಸಲಿರುವ ಸದಸ್ಯರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಭಿನ್ನಮತೀಯ ಸದಸ್ಯ ರಾಜಾ ರಿಯಾಜ್ ಅವರು ಇಮ್ರಾನ್‌ ಖಾನ್‌ಗೆ ಒತ್ತಾಯಿಸಿದ್ದಾರೆ.

ಸಿಂಧ್ ಪ್ರಾಂತ್ಯದಿಂದ ಇಸ್ಲಾಮಾಬಾದ್‌ಗೆ ಬರುವ ಪ್ರಮುಖ ಅಧಿಕಾರಿಗಳಿಗೆ ಉಳಿದುಕೊಳ್ಳಲು ಸಿಂಧ್ ಹೌಸ್ ವ್ಯವಸ್ಥೆ ಕಲ್ಪಿಸುತ್ತದೆ. ಈ ಕಟ್ಟಡವು ಕುದುರೆ ವ್ಯಾಪಾರದ ಕೇಂದ್ರವಾಗಿದೆ ಎಂದು ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಆರೋಪಿಸಿದೆ.

ಜಹಾಂಗೀರ್ ತರೀನ್ ಗುಂಪಿನ ಸದಸ್ಯರಾಗಿರುವ ರಿಯಾಜ್, ಅತೃಪ್ತ ಸಂಸದರು ಸಿಂಧ್ ಹೌಸ್‌ನಲ್ಲಿ ವಾಸವಾಗಿದ್ದಾರೆ. ಅವರು ಇಮ್ರಾನ್ ಖಾನ್ ವಿರುದ್ಧ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಅವಿಶ್ವಾಸ ನಿರ್ಣಯದ ಪರ ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ತಾವು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಿಟಿಐನಿಂದ ಟಿಕೆಟ್ ಪಡೆದು ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಮುಖಂಡ ನವಾಬ್ ಶೇರ್ ವಸೀರ್ ತಿಳಿಸಿದ್ದಾರೆ. ಹಿಂದೂ ಸಂಸದ ರಮೇಶ್ ಕುಮಾರ್ ಕೂಡ ತಾವು ಪಿಟಿಐನಿಂದ ನಂಟು ಕಡಿದುಕೊಂಡಿರುವುದಾಗಿ ಹೇಳಿದ್ದಾರೆ.

ಸಿಂಧ್ ಹೌಸ್‌ನಲ್ಲಿ ಅತೃಪ್ತ ಸಂಸದರು ಶಾಂತಯುತವಾಗಿ ಬದುಕುತ್ತಿದ್ದಾರೆ. ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿದ ಬಳಿಕ ನಾವು ಇಲ್ಲಿಂದ ಹೊರಡುತ್ತೇವೆ ಎಂದು ಪಾಕಿಸ್ತಾನ  ಪೀಪಲ್ಸ್ ಪಾರ್ಟಿ (ಪಿಪಿಪಿ) ಅಬ್ದುಲ್ ಖಾದಿರ್ ಪಟೇಲ್ ತಿಳಿಸಿದ್ದಾರೆ.

ಈ ನಡುವೆ, ಈ ಸಂಸದರು ಸೇರಿಕೊಂಡಿರುವ ಸ್ಥಳ, ಅವರ ಮೊಬೈಲ್ ಫೋನ್ ಡೇಟಾ ಹಾಗೂ ಓಡಾಟಗಳ ಮೇಲೆ ಹದ್ದಿನ ಕಣ್ಣು ಇರಿಸುವಂತೆ ಮತ್ತು ಪ್ರತಿ ದಿನ ತಮಗೆ ವರದಿ ನೀಡುವಂತೆ ತಮ್ಮ ನಾಗರಿಕ ಗುಪ್ತಚರ ಸಂಸ್ಥೆಗಳಿಗೆ ಇಮ್ರಾನ್ ಖಾನ್ ಸೂಚನೆ ನೀಡಿದ್ದಾರೆ.

ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಸರ್ಕಾರದ ವಿರುದ್ಧ ಮಾರ್ಚ್ 8ರಂದು ವಿರೋಧಪಕ್ಷಗಳು ಅವಿಶ್ವಾಸ ನಿರ್ಣಯದ ಗೊತ್ತುವಳಿಯನ್ನು ನ್ಯಾಷನಲ್ ಅಸೆಂಬ್ಲಿ ಕಾರ್ಯಾಲಯಕ್ಕೆ ಸಲ್ಲಿಸಿದ್ದವು. ಅವಿಶ್ವಾಸ ನಿರ್ಣಯಕ್ಕೆ ಸೋಲಾಗಲಿದೆ ಎಂದು ಪಿಟಿಐ ವಿಶ್ವಾಸ ವ್ಯಕ್ತಪಡಿಸಿದೆ. ಆದರೆ, ಪಿಟಿಐನಿಂದಲೇ ಬಂಡಾಯವೆದ್ದಿರುವ ಸಂಸದರ ಬೆಂಬಲದೊಂದಿಗೆ ಇಮ್ರಾನ್ ಖಾನ್ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸುತ್ತೇವೆ ಎಂದು ವಿಪಕ್ಷಗಳು ಹೇಳಿವೆ.

WhatsApp
Facebook
Telegram
error: Content is protected !!
Scroll to Top