ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು.

ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕು ಎಂದರೆ ಆ ಸಿನಿಮಾದಲ್ಲಿ ಭರ್ಜರಿ ಮನರಂಜನೆ ಇರಬೇಕು ಎಂಬ ನಂಬಿಕೆ ಅನಾದಿಕಾಲದಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಬೇರು ಬಿಟ್ಟಿದೆ. ಅಂಥ ಪ್ರಕಾರಕ್ಕೆ ಸೇರದ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚೇನನ್ನೂ ಸಾಧಿಸಲಾಗದೆ ಕೇವಲ ಸಿನಿಮೋತ್ಸವಗಳಲ್ಲಿ ಹೊಗಳಿಕೆ ಪಡೆದುಕೊಂಡು, ಚರ್ಚೆ-ಸಂವಾದಗಳಲ್ಲಿ ಮನ್ನಣೆ ಪಡೆದುಕೊಂಡು ಸುಮ್ಮನಾಗುತ್ತವೆ. ಆದರೆ ‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಸಿನಿಮಾ ಬೇರೆನನ್ನೋ ಸಾಧಿಸುತ್ತಿದೆ. ಈ ಸಿನಿಮಾದ ಮುಖ್ಯ ಉದ್ದೇಶ ಮನರಂಜನೆ ಅಲ್ಲವೇ ಇಲ್ಲ. ಕಾಶ್ಮೀರಿ ಪಂಡಿತರ (Kashmiri Pandits) ಹತ್ಯೆ ಮತ್ತು ವಲಸೆ ಕುರಿತ ಘಟನೆಗಳನ್ನು ಆಧರಿಸಿ ತಯಾರಾದ ಈ ಸಿನಿಮಾದಲ್ಲಿ ಪ್ರೇಕ್ಷಕರು ವಾವ್​ ಎನ್ನುವಂತಹ ಅಂಶಗಳು ಸಿಗುವುದಿಲ್ಲ. ಬದಲಿಗೆ, ಶಾಕಿಂಗ್ ಎನಿಸುವಂತಹ ಸಂಗತಿಗಳನ್ನು ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ತೆರೆದಿಟ್ಟಿದ್ದಾರೆ. ಕಾಶ್ಮೀರದ ಬಗೆಗೆ ಇರುವ ಎರಡು ಬೇರೆ-ಬೇರೆ ದೃಷ್ಟಿಕೋನಗಳನ್ನು ಜನರ ಮುಂದಿಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಚರ್ಚೆ ಹುಟ್ಟುಹಾಕಿದೆ.

ಪ್ರತಿ ಐತಿಹಾಸಿಕ ಘಟನೆಗೂ ಹಲವು ಆಯಾಮಗಳು ಇರುತ್ತವೆ. ಆ ಇತಿಹಾಸವನ್ನು ಯಾರು ಬರೆದರು ಎಂಬುದರ ಮೇಲೆ ಅದರ ಆಯಾಮ ನಿರ್ಧಾರ ಆಗುತ್ತದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತಂತೆ ಈಗಾಗಲೇ ಹಲವು ಮಾಹಿತಿಗಳು ಲಭ್ಯವಿದೆ. ಆದರೆ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರ ದೃಷ್ಟಿಕೋನದ ಮೂಲಕ ಘಟನೆಗಳನ್ನು ವಿವರಿಸುವ ಪ್ರಯತ್ನ ಮಾಡಲಾಗಿದೆ. 1990ರ ಸಮಯದಲ್ಲಿ ಕಾಶ್ಮೀರದಲ್ಲಿನ ಭಯೋತ್ಪಾದಕರ ಹಿಂಸೆಗೆ ನಲುಗಿ ಪ್ರಾಣ ಕಳೆದುಕೊಂಡ ಒಂದು ಕುಟುಂಬದ ಕಥೆಯನ್ನು ಜನರ ಮುಂದೆ ಇಡಲಾಗಿದೆ.

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಕಥೆ ತೆರೆದುಕೊಳ್ಳುವುದು ಹೀಗೆ; ಮುಸ್ಲಿಂ ಹುಡುಗರ ಜೊತೆ ಒಬ್ಬ ಹಿಂದೂ ಬಾಲಕ ಕ್ರಿಕೆಟ್​ ಆಡುತ್ತಾ ಇರುತ್ತಾನೆ. ರೇಡಿಯೋದಲ್ಲಿ ಕ್ರಿಕೆಟ್​ ಕಾಮೆಂಟರಿ ಕೇಳಿಸಿಕೊಂಡ ಆ ಹಿಂದೂ ಬಾಲಕ ‘ಸಚಿನ್​ ಸಚಿನ್​’ ಎಂದು ಖುಷಿಯಿಂದ ಕೂಗುತ್ತಾನೆ. ಅದಕ್ಕೆ ಪ್ರತಿಯಾಗಿ, ಪಕ್ಕದಲ್ಲಿದ್ದ ಮುಸ್ಲಿಂ ಯುವಕರು ಹಿಂದೂ ಬಾಲಕನ ಮೇಲೆ ಹಲ್ಲೆ ಮಾಡುತ್ತಾರೆ. ನಂತರದ ದೃಶ್ಯಗಳಲ್ಲಿ ಗುಂಡಿನ ಸುರಿಮಳೆ ಆಗುತ್ತದೆ. ‘ಮತಾಂತರಗೊಳ್ಳಿ.. ಓಡಿಹೋಗಿ ಅಥವಾ ಸಾಯಿರಿ’ ಎಂಬ ಘೋಷಣೆಗಳು ಮೊಳಗುತ್ತವೆ. ಕಾಶ್ಮೀರಿ ಪಂಡಿತರ ಮೇಲೆ ಅಲ್ಲಿನ ಮುಸ್ಲಿಮರಿಗೆ ಈ ಪರಿ ದ್ವೇಷ ಯಾಕೆ? ಅಂತಿಮವಾಗಿ ಹಿಂದೂ ಕುಟುಂಬಗಳ ಪರಿಸ್ಥಿತಿ ಏನಾಯಿತು? ಅಂದಿನ ಸರ್ಕಾರ ಎಡವಿದ್ದು ಎಲ್ಲಿ? ಅಧಿಕಾರಿಗಳು ಮತ್ತು ಪತ್ರಕರ್ತರ ಕೈ ಯಾಕೆ ಕಟ್ಟಿಹೋಯಿತು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರಕಿಸಲು ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಪ್ರಯತ್ನಿಸಿದೆ.

ಭಾರತದ ಬೇರೆ ಭಾಗದಲ್ಲಿ ಕುಳಿತು ಕಾಶ್ಮೀರದ ಬಗ್ಗೆ ಕೇಳಿಸಿಕೊಳ್ಳುವವರಿಗೆ ಅದು ತುಂಬ ದೂರದ ಕಥೆಯಂತೆ ಭಾಸವಾಗುತ್ತದೆ. ಆದರೆ ಕಾಶ್ಮೀರದಲ್ಲೇ ಹುಟ್ಟು ಬೆಳೆದು, ಅಲ್ಲಿನ ಹಿಂಸಾಚಾರಕ್ಕೆ ಬದುಕನ್ನು ಕಳೆದುಕೊಂಡವರಿಗೆ ಅದು ಅಕ್ಷರಶಃ ನರಕ. ಬೇರೆ ಬೇರೆ ರಾಜ್ಯಗಳ ಜನರಿಗೆ ಕಾಶ್ಮೀರದ ಚಿತ್ರಣವನ್ನು ವಿವರಿಸಿದ ಮಾಧ್ಯಮಗಳ ಹಿಂದೆ ರಾಜಕೀಯ ಪ್ರೇರಿತ ಉದ್ದೇಶವಿತ್ತಾ? ಭಯದ ಕಾರಣಕ್ಕಾಗಿ ಸತ್ಯವನ್ನು ತಿರುಚಲಾಯ್ತಾ ಎಂಬಿತ್ಯಾದಿ ವಿಷಯಗಳನ್ನು ಕೂಡ ಈ ಸಿನಿಮಾ ಚರ್ಚಿಸುತ್ತದೆ.

ಮೇಲ್ನೋಟಕ್ಕೆ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಲ್ಲಿ ಎರಡು ಆಯಾಮದ ನಿರೂಪಣೆ ಇದೆ ಎನಿಸಿದಂತೆ ಭಾಸವಾದರೂ ಕೂಡ ಅಂತಿಮವಾಗಿ ನಿರ್ದೇಶಕರು ತಮ್ಮ ನಿಲುವು ಯಾವುದರ ಪರ ಇದೆ ಎಂಬುದನ್ನು ಎಲ್ಲ ದೃಶ್ಯದಲ್ಲೂ ರುಜುವಾತು ಮಾಡಿದ್ದಾರೆ. ಸಿನಿಮಾವನ್ನು ರಂಜನೀಯವಾಗಿಸಬೇಕು ಎಂಬ ಉದ್ದೇಶ ನಿರ್ದೇಶಕರಿಗೆ ಇಲ್ಲ. ಹಾಗಾಗಿ ವೇಗದ ನಿರೂಪಣೆಯನ್ನು ಅವರು ನೆಚ್ಚಿಕೊಂಡಿಲ್ಲ. ಅದರ ಬದಲು, ನೋಡುಗರನ್ನು ವಿಚಲಿತಗೊಳಿಸುವಂತಹ ದೃಶ್ಯಗಳಿಗೆ ನಿರ್ದೇಶಕರು ಹೆಚ್ಚು ಮಹತ್ವ ನೀಡಿದ್ದಾರೆ.

ಮನುಷ್ಯನ ಇತಿಹಾಸದಲ್ಲಿ ಅನೇಕ ಕೆಟ್ಟ ಘಟನೆಗಳಿವೆ. ಅದರಲ್ಲಿ ಯಾರದ್ದು ಸರಿ, ಯಾರದ್ದು ತಪ್ಪು ಎಂಬುದರ ಚರ್ಚೆಗೆ ಅಂತ್ಯವಿಲ್ಲ. ಪ್ರತಿ ಘಟನೆಯಲ್ಲೂ ಎರಡೂ ಕಡೆಯವರು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ. ವಸ್ತುನಿಷ್ಠವಾಗಿ ನೋಡಿ ದಾಖಲಿಸಬೇಕಾದ ಮಾಧ್ಯಮದವರು, ಇತಿಹಾಸಕಾರರು, ಅಧಿಕಾರಿಗಳು, ಲೇಖಕರು ಮುಂತಾದವರು ಕೆಲವೊಮ್ಮೆ ಮೌನಕ್ಕೆ ಜಾರುತ್ತಾರೆ. ಇನ್ನೂ ಕೆಲವೊಮ್ಮೆ ಆಮಿಷಕ್ಕೆ ಅಥವಾ ಭಯಕ್ಕೆ ಒಳಗಾಗಿ ಯಾವುದೋ ಒಂದರ ಪರ ವಹಿಸುತ್ತಾರೆ. ಅಂದು ಆಗಿ ಹೋದ ಘಟನೆಯನ್ನು ಈಗ ಮತ್ತೆ ಈ ಸಿನಿಮಾ ಮೂಲಕ ಜನಮನಕ್ಕೆ ತಲುಪಿಸುವ ಕಾರ್ಯ ಆಗಿದೆ. ಕೆಟ್ಟ ಅಥವಾ ಭಯಾನಕ ಇತಿಹಾಸವನ್ನು ಜನರು ಮರೆಯಬಾರದು. ಅದೇ ರೀತಿ ಭಯಾನಕ ಇತಿಹಾಸ ಮರುಕಳಿಸಲೂಬಾರದು. ಈ ಎರಡೂ ಉದ್ದೇಶವನ್ನು ಸಾಧಿಸುವ ನಿಟ್ಟಿನಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಮೂಡಿಬಂದಿದ್ದರೆ ಇನ್ನೂ ಒಳಿತಾಗುತ್ತಿತ್ತು.

ಹಸಿ ಮಣ್ಣಿನ ಗೋಡೆಯಂತಹ ಮನಸ್ಸನ್ನು ಹೊಂದಿರುವ ಯುವಜನತೆಯನ್ನು ಗಮನದಲ್ಲಿ ಇಟ್ಟುಕೊಂಡು ಇದರ ನಿರೂಪಣೆ ಮಾಡಲಾಗಿದೆ. ಆ ಮನಸ್ಸಿಗೆ ಏನನ್ನು ಎಸೆದರೂ ಚೆನ್ನಾಗಿ ಅಂಟಿಕೊಳ್ಳುತ್ತದೆ. ಹಿಂದೆ ಏನಾಗಿದೆ ಎಂಬುದರ ಜೊತೆಗೆ ಮುಂದೆ ಹೇಗೆ ನಡೆದುಕೊಳ್ಳಬೇಕು ಎಂಬ ಜವಾಬ್ದಾರಿಯೂ ಕೂಡ ಯುವ ಮನಸ್ಸುಗಳಲ್ಲಿ ಮೂಡುವಂತೆ ಮಾಡಲು ನಿರ್ದೇಶಕರು ಪ್ರಯತ್ನಿಸಬಹುದಿತ್ತು.

ಈ ಸಿನಿಮಾದಲ್ಲಿ ಅನುಪಮ್​ ಖೇರ್​, ಪ್ರಕಾಶ್​ ಬೆಳವಾಡಿ, ಮಿಥುನ್​ ಚಕ್ರವರ್ತಿ, ಪುನೀತ್ ಇಸಾರ್​ ಅವರಂತಹ ಅನುಭವಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ಎಲ್ಲರೂ ಕೂಡ ಅವರವರ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪಲ್ಲವಿ ಜೋಶಿ, ದರ್ಶನ್​ ಕುಮಾರ್​ ಅಭಿನಯ ಗಮನ ಸೆಳೆಯುತ್ತದೆ.

ಚಿತ್ರ: ದಿ ಕಾಶ್ಮೀರ್​ ಫೈಲ್ಸ್​
ನಿರ್ಮಾಣ: ಅಭಿಷೇಕ್​ ಅಗರ್​ವಾಲ್​, ಜೀ ಸ್ಟುಡಿಯೋಸ್​
ನಿರ್ದೇಶನ: ವಿವೇಕ್​ ಅಗ್ನಿಹೋತ್ರಿ
ಪಾತ್ರವರ್ಗ: ಅನುಪಮ್​ ಖೇರ್​, ದರ್ಶನ್​ ಕುಮಾರ್​, ಪಲ್ಲವಿ ಜೋಶಿ, ಮಿಥುನ್​ ಚಕ್ರವರ್ತಿ, ಪ್ರಕಾಶ್​ ಬೆಳವಾಡಿ, ಪುನೀತ್​ ಇಸಾರ್​ ಮುಂತಾದವರು.

WhatsApp
Facebook
Telegram
error: Content is protected !!
Scroll to Top