ಹರಾಜಿನಲ್ಲಿ ಖರೀದಿಸುವುದಾಗಿ ಹೇಳಿ ವಂಚಿಸಿದರು! ಚಹಲ್​ಗೆ ಮಾತು ಕೊಟ್ಟು ಮೋಸ ಮಾಡ್ತಾ ಆರ್​ಸಿಬಿ?

IPL 2022)ನ 15 ನೇ ಋತುವಿನಲ್ಲಿ, ಯುಜ್ವೇಂದ್ರ ಚಹಲ್ (Yuzvendra Chahal) ರಾಜಸ್ಥಾನ್ ರಾಯಲ್ಸ್ ಪರ ಆಡಲಿದ್ದಾರೆ. ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ರಾಜಸ್ಥಾನ 6.5 ಕೋಟಿ ಬೃಹತ್ ಬೆಲೆಗೆ ಖರೀದಿ ಮಾಡಿದೆ. ಚಹಲ್ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ((Royal Challengers Bangalore)) ತಂಡದ ಭಾಗವಾಗಿದ್ದರು. ಜೊತೆಗೆ ಈ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ, ಆರ್​ಸಿಬಿ ಹರಾಜಿಗೂ ಮುನ್ನ ಈ ದೊಡ್ಡ ಮ್ಯಾಚ್ ವಿನ್ನರ್‌ಗಳಲ್ಲಿ ಒಬ್ಬರಾದ ಚಹಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಿಲ್ಲ. ಬೆಂಗಳೂರು (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತನ್ನ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದಾಗ, ಅದರಲ್ಲಿ ಚಹಲ್ ಹೆಸರು ಇರಲಿಲ್ಲ. ಇದರ ನಂತರ ಚಹಲ್ ತಂಡದಲ್ಲಿ ಉಳಿದುಕೊಳ್ಳಲು ನಿರಾಕರಿಸಿದ್ದರಿಂದ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈಗ ಸತ್ಯ ಮುನ್ನೆಲೆಗೆ ಬಂದಿದೆ. ಈ ವಿಷಯದ ಬಗ್ಗೆ ಯುಜ್ವೇಂದ್ರ ಚಹಲ್ ಮನಬಿಚ್ಚಿ ಮಾತನಾಡಿದ್ದಾರೆ.

ಚಹಲ್ ಹೇಳಿದ್ದೇನು?
ಕ್ರೀಡಾ ಪತ್ರಕರ್ತ ರವೀಶ್ ಬಿಶ್ತ್ ಅವರೊಂದಿಗಿನ ವಿಶೇಷ ಸಂವಾದದಲ್ಲಿ ಯುಜ್ವೇಂದ್ರ ಚಹಾಲ್ ಮಾತನಾಡಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ತಂಡದಿಂದ ಕೈಬಿಟ್ಟ ನಂತರ ಹರಾಜಿಗೂ ಮುನ್ನ ನನಗೆ (ಚಹಲ್​ಗೆ) ಕರೆ ಮಾಡಿದ್ದ RCB ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಆರ್​ಸಿಬಿ ಉಳಿಸಿಕೊಂಡಿರುವ ಆಟಗಾರರ ಹೆಸರನ್ನು ಹೇಳಿದರು. ನಂತರ ಹರಾಜಿನಲ್ಲಿ ನನ್ನನ್ನು ಖರೀದಿಸುವುದಾಗಿ ಹೆಸ್ಸನ್ ಭರವಸೆ ನೀಡಿದ್ದರು ಎಂಬ ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಮುಂದುವರೆದು ಮಾತನಾಡಿದ ಯುಜ್ವೇಂದ್ರ ಚಹಲ್, ತಂಡದಲ್ಲಿ ಉಳಿಸಿಕೊಳ್ಳುವ ಸಮಯದಲ್ಲಿ ನಾನು ಆರ್‌ಸಿಬಿಯಿಂದ ಯಾವುದೇ ಹಣವನ್ನು ಕೇಳಿರಲಿಲ್ಲ. ಆದರೆ ಊಹಪೋಹಾಗಳಲ್ಲಿ ನಾನು 10-12 ಕೋಟಿ ಕೇಳಿದ್ದೆ ಎಂದು ವರದಿಗಳು ಬಂದವು. ಆದರೆ ಅವುಗಳೆಲ್ಲ ಶುದ್ಧ ಸುಳ್ಳು ಎಂದು ಚಹಲ್ ಹೇಳಿದ್ದಾರೆ. ಅಂದು ನನಗೆ ಕರೆ ಮಾಡಿದ್ದ ಹೆಸ್ಸನ್, ನೀವೇನಾದರೂ ಹರಾಜಿಗೂ ಮುನ್ನವೇ ಉಳಿದ ಎರಡು ಹೊಸ ತಂಡಗಳಿಗೆ ಸೇರಿ ಬಿಟ್ಟರೆ ನಾವು ಏನು ಮಾಡಲಾಗುವುದಿಲ್ಲ ಎಂದಿದ್ದರು. ಆದರೆ ನಾನು ಆ ತಂಡಗಳಿಗೆ ಹೋಗುವುದಿಲ್ಲ ಎಂದು ಅವರಿಗೆ ಭರವಸೆ ನೀಡಿದ್ದೆ. ಬಳಿಕ ನಾನು ಹರಾಜಿನಲ್ಲಿ ಹೆಸರು ನೋಂದಾಯಿಸಿದ್ದೆ. ಆದರೆ ಆರ್​ಸಿಬಿ ನನ್ನನ್ನೂ ಖರೀದಿಸುವ ಗೋಜಿಗೆ ಹೊಗಲಿಲ್ಲ ಎಂದು ಚಹಲ್ ತಮ್ಮ ನೋವನ್ನು ಹೊರಹಾಕಿದ್ದಾರೆ. ಅಲ್ಲದೆ ನಾನು RCB ತಂಡದಲ್ಲಿ ಹಲವು ವರ್ಷಗಳಿಂದ ಆಡಿದ್ದರಿಂದ ಎಲ್ಲರಿಗೂ ಪರಿಚಿತನಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.

ಇದೇನೂ ಗೊತ್ತಿಲ್ಲದವರು ನನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದರು, ನಿಂದಿಸಿದರು. ಜೊತೆಗೆ ಯುಜ್ವೇಂದ್ರ ಚಹಲ್‌ಗೆ ಆರ್‌ಸಿಬಿ ತುಂಬಾ ನೀಡಿದೆ, ಅದೆಲ್ಲವನ್ನೂ ಮರೆತು ಚಹಲ್ ತಂಡ ತೊರೆದಿದ್ದಾರೆ ಎಂದು ಹಲವರು ಆರೋಪಿಸಿದ್ದರು. ಆದರೆ ಆರ್‌ಸಿಬಿ ನನಗೆ ಏನನ್ನೂ ಹೇಳಿಲ್ಲ ಎಂಬುದು ಸತ್ಯ. ಅವರು ಕೇವಲ 3 ಆಟಗಾರರನ್ನು ಉಳಿಸಿಕೊಳ್ಳುವ ಹೆಸರನ್ನು ಹೇಳಿದರು ಮತ್ತು ಹರಾಜಿನಲ್ಲಿ ನನ್ನನ್ನು ಖರೀದಿಸುವ ಭರವಸೆ ನೀಡಿದರು. ಅದಾಗ್ಯೂ ಆರ್​ಸಿಬಿ ನನ್ನನ್ನು ಹರಾಜಿನಲ್ಲಿ ಖರೀದಿಸಲಿಲ್ಲ ಎಂಬುದನ್ನು ಚಹಲ್ ಹೇಳಿದ್ದಾರೆ.

ಚಹಲ್‌ ಖರೀದಿಸಲು ಮುಂದಾಗದ ಬೆಂಗಳೂರು
ಯುಜ್ವೇಂದ್ರ ಚಹಲ್ ಪ್ರಕಾರ, ಐಪಿಎಲ್ 2022 ರ ಹರಾಜಿನಲ್ಲಿ ನನ್ನ ಮೇಲೆ ಬಿಡ್ ಮಾಡುವುದಾಗಿ ಹೆಸ್ಸನ್ ಭರವಸೆ ನೀಡಿದ್ದರು ಎಂಬುದನ್ನು ಚಹಲ್ ಹೇಳುತ್ತಿದ್ದಾರೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಲೆಗ್ ಸ್ಪಿನ್ನರ್‌ಗೆ ಒಂದೇ ಒಂದು ಬಿಡ್ ಕೂಡ ಮಾಡಲಿಲ್ಲ ಎಂಬುದು ಸತ್ಯ ಸಂಗತಿಯಾಗಿದೆ. ಚಹಲ್ ಮೂಲ ಬೆಲೆ 2 ಕೋಟಿ ರೂ.ಗಳಾಗಿದ್ದು, ಮುಂಬೈ, ದೆಹಲಿ, ಸನ್ ರೈಸರ್ಸ್ ಹೈದರಾಬಾದ್ ಅವರನ್ನು ಖರೀದಿಸಲು ಬಿಡ್ ಮಾಡಿತ್ತು. ಆದರೆ ಕೊನೆಯಲ್ಲಿ, ರಾಜಸ್ಥಾನ್ ರಾಯಲ್ಸ್ ಅವರನ್ನು 6.5 ಕೋಟಿಗೆ ಖರೀದಿಸಿತು. ಈ ಮೂಲಕ ಆರ್‌ಸಿಬಿ ಕ್ರಿಕೆಟ್‌ ನಿರ್ದೇಶಕ ಮೈಕ್ ಹೆಸ್ಸನ್ ಚಹಲ್ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂಬುದು ಈ ಮೂಲಕ ಸ್ಪಷ್ಟವಾಗಿದೆ.

WhatsApp
Facebook
Telegram
error: Content is protected !!
Scroll to Top