ಜಿಲ್ಲೆಗೆ ಬಂದಿರುವ ಅಪರೂಪದ ಅತಿಥಿಗಳನ್ನು ನೋಡಲು ಬರುತ್ತಿದ್ದಾರೆ ಜನ..!

ಉತ್ತರ ಕನ್ನಡ :  ಜಿಲ್ಲೆಯ ಕಾರವಾರದ ಹೊರಭಾಗವಾದ ಕೆರವಡಿ ಗ್ರಾಮಕ್ಕೆ ಅತೀ ವಿಶೇಷವಾಗಿರುವ ‘ಸೂಜಿ ಬಾಲದ ಬಾತು’ಗಳು ವಲಸೆ ಬಂದಿವೆ.  ಇವುಗಳನ್ನು ನಾರ್ದರ್ನ್ ಪಿನ್‌ಟೈಲ್ ಎಂದೂ ಕರೆಯುತ್ತಾರೆ. ಉತ್ತರ ಅಮೇರಿಕಾ, ಉತ್ತರ ಯುರೋಪ್ ಮತ್ತು ಏಷ್ಯಾ ಖಂಡದ ವಿವಿಧ ಕಡೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಈ ಸೂಜಿ ಬಾಲದ ಬಾತುಗಳು, ಆಫ್ರಿಕಾದ ಪಶ್ಚಿಮ ಭಾಗ, ಆಗ್ನೇಯ ಏಷ್ಯಾ, ಕೊಲ್ಲಿ ರಾಷ್ಟ್ರಗಳ ದಕ್ಷಿಣದಲ್ಲಿ ಹಾಗೂ ಪಾಕಿಸ್ತಾನದ ಕೆಲವೆಡೆಯೂ ಕಾಣಸಿಗುತ್ತವೆ.

ಅಷ್ಟಕ್ಕೂ ಈ ಹಕ್ಕಿಗಳು ಜನವರಿ ತಿಂಗಳು ನಂತರ ಹೀಗೆ ವಲಸೆ ಬರುತ್ತಿದ್ದು, ಪ್ರಕೃತಿ ಸೌಂದರ್ಯ, ನೀರಿನ ಸೌಲಭ್ಯ ಹೊಂದಿರುವ ಜಾಗವನ್ನು ಗುರುತಿಸಿ ಅಲ್ಲೇ ಕೆಲವು ತಿಂಗಳು ವಾಸ ಮಾಡಿ ಮತ್ತೆ ತಮ್ಮ ತವರಿಗೆ ಮರಳುತ್ತವೆ. ವಿಶೇಷ ಹಾಗೂ ಸುಂದರವಾಗಿರುವ ಹಕ್ಕಿಗಳು ಆಗಮಿಸಿರುವುದು ಕಂಡು ಪಕ್ಷಿ ಪ್ರಿಯರಿಗೂ ಸಾಕಷ್ಟು ಸಂತೋಷವಾಗಿದೆ. 

ಅಷ್ಟಕ್ಕೂ ಚಳಿಗಾಲದ ಸಮಯದಲ್ಲಿ ಈ ಸೂಜಿ ಬಾಲದ ಬಾತುಗಳು ಭಾರತಕ್ಕೆ ಸಾಮಾನ್ಯವಾಗಿ ವಲಸೆ ಬರುತ್ತಿದ್ದು, ಹೆಚ್ಚು ಜೌಗು ಪ್ರದೇಶದಲ್ಲಿ, ಪೊದೆಗಳು ಇರುವ ಸ್ಥಳಗಳನ್ನು ಹುಡುಕಿಕೊಂಡು ಬಂದು ಒಂದಷ್ಟು ದಿನ ಇದ್ದು ವಾಪಸ್  ತೆರಳುತ್ತವೆ. ಈ ಬಾತುಗಳು ಸಾಮಾನ್ಯವಾಗಿ ಹುಲ್ಲಿನ ಮಧ್ಯೆ ಇರುವ ಕ್ರಿಮಿ ಕೀಟಗಳು, ಜಲಮೂಲಗಳಲ್ಲಿರುವ ಜೀವಿಗಳನ್ನು ತಿಂದು ತಮ್ಮ ಜೀವನ ಸಾಗಿಸುತ್ತವೆ.

ಇನ್ನು ಈ ಬಾತುಗಳ ಮರಿಗಳು ಮೊಟ್ಟೆಯೊಡೆದು ಹೊರ ಬಂದ ಕೆಲವೇ ಗಂಟೆಗಳಲ್ಲಿ ತಮ್ಮ ತಾಯಿಯನ್ನು ಅನುಸರಿಸಿಕೊಂಡು ಹೋಗುವ ಸಾಮರ್ಥ್ಯ ಪಡೆದುಕೊಂಡಿವೆ. ಪ್ರತೀವರ್ಷ ಸಾವಿರಾರು ಕಿಲೋಮೀಟರ್ ಹಾರಾಡುತ್ತಾ ವಲಸೆ ಹೋಗುವ ಈ ಪಕ್ಷಿಗಳು, ಗುಂಪು ಗುಂಪಾಗಿ ಬಂದು ಕೆಲವು ತಿಂಗಳ ಕಾಲವಿದ್ದು ಬಳಿಕ ವಾಪಾಸ್ಸಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿಯ ಮೇಲೆ ಮನುಷ್ಯನ ಅನಿಯಂತ್ರಿತ ಚಟುವಟಿಕೆಗಳಿಂದಾಗಿ ಈ ಬಾತುಗಳು ವಿನಾಶದತ್ತ ಸಾಗುತ್ತಿವೆ ಅನ್ನೋ ಕಳವಳ ಕೂಡಾ ಪಕ್ಷಿ ಪ್ರೇಮಿಗಳು ವ್ಯಕ್ತಪಡಿಸುತ್ತಾರೆ. 

WhatsApp
Facebook
Telegram
error: Content is protected !!
Scroll to Top