ಪಂತ್ 96 ರನ್​ಗೆ ಔಟಾದ ಬಗ್ಗೆ ಗಂಭೀರ್ ಮಾತು..!

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ಭಾರತ (India vs Sri Lanka) ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಮೊದಲ ದಿನ ಸಂಪೂರ್ಣ ಯಶಸ್ಸು ಸಾಧಿಸಿದ ಟೀಮ್ ಇಂಡಿಯಾ (Team India) ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 357 ರನ್ ಕಲೆಹಾಕಿದೆ. ಕ್ರೀಸ್​ನಲ್ಲಿ ಅರ್ಧಶತಕದ ಅಂಚಿನಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಇದ್ದರೆ, ರವಿಚಂದ್ರನ್ ಅಶ್ವಿನ್ 10 ರನ್ ಗಳಿಸಿ ಮೊದಲ ದಿನದಾಟ ಅಂತ್ಯಗೊಳಿಸಿದ್ದು, 500 ರನ್​ಗಳ ಟಾರ್ಗೆಟ್ ಮೇಲೆ ಭಾರತ ಕಣ್ಣಿಟ್ಟಿದೆ. ಟೀಮ್ ಇಂಡಿಯಾ ಮೊದಲ ದಿನವೇ ಇಷ್ಟು ದೊಡ್ಡ ಮೊತ್ತ ಕಲೆಹಾಕಲು ಕಾರಣವಾಗಿದ್ದು ರಿಷಭ್ ಪಂತ್ (Risbah Pant). ಸ್ಫೋಟಕ ಆಟವಾಡಿ ಲಂಕಾನ್ನರ ಬೆವರಿಳಿಸಿ ಶತಕ ವಂಚಿತರಾಗಿ ಪಂತ್ 96 ರನ್​ಗೆ ನಿರ್ಗಮಿಸಿದರು. ಥೇಟ್ ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದ ಪಂತ್ ಆಟದ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಗೌತಮ್ ಗಂಭೀರ್ ಕೂಡ ಪಂತ್ ಆಟವನ್ನು ಕೊಂಡಾಡಿದ್ದಾರೆ. ರಿಷಭ್ ಪಂತ್ 97 ರನ್​ಗಳ ಇನ್ನಿಂಗ್ಸ್ ಅನ್ನು ಸ್ಮಾರ್ಟ್​ ಕ್ರಿಕೆಟ್ ಎಂದಿರುವ ಗಂಭಿರ್, ಎಂಎಸ್ ಧೋನಿ 2011ರ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಸಿಡಿಸಿದ 90 ರನ್​ಗೆ ಹೋಲಿಕೆ ಮಾಡಿದ್ದಾರೆ. ಸ್ಟಾರ್ ಸ್ಫೋರ್ಟ್ಸ್​ ಜೊತೆ ಮೊದಲ ದಿನದಾಟದ ಬಗ್ಗೆ ಮಾತನಾಡಿದ ಗಂಭೀರ್, ಪ್ರಮುಖವಾಗಿ ಪಂತ್ ಆಟಕ್ಕೆ ಮನಸೋತರು. ಶ್ರೀಲಂಕಾ ಹೊಸ ಚೆಂಡು ತೆಗೆದುಕೊಳ್ಳುವ ಮುನ್ನ ಭಾರತ ಎದುರಾಳಿಯನ್ನು ಚೆನ್ನಾಗಿ ದಂಡಿಸಿತು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.

“ರಿಷಭ್ ಪಂತ್ ಅವರಿಗೆ ಹೊಸ ಬಾಲ್ ಬರಲು ಇನ್ನೂ ಹೆಚ್ಚು ಸಮಯವಿಲ್ಲ ಎಂಬುದು ತಿಳಿದಿತ್ತು. ಅಲ್ಲದೆ ಲಂಕಾದ ಪ್ರಮುಖ ವೇಗಿ ಇಂಜುರಿಗೆ ತುತ್ತಾಗಿದ್ದರು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಪಂತ್ ಲೆಫ್ಟ್ ಆರ್ಮ್ ಸ್ಪಿನ್ನರ್​​ಗೆ ಮನಬಂದಂತೆ ಚಚ್ಚಿದರು. ಯಾಕಂದ್ರೆ ಶ್ರೀಲಂಕಾ ನಾಯಕ ವೇಗಿಗಳಿಗೆ ಬೌಲಿಂಗ್ ನೀಡುತ್ತಿರಲಿಲ್ಲ. ಇದು ಪಂತ್ ಅವರ ಸ್ಮಾರ್ಟ್​ ಕ್ರಿಕೆಟ್. ಸಂದರ್ಭವನ್ನು ಅರಿತು ಎದುರಾಳಿಯನ್ನು ಎದುರಿಸುವುದು ಸುಲಭವಲ್ಲಿ, ಪಂತ್ ಅದನ್ನು ಮಾಡಿದರು,” ಎಂದು ಹೇಳಿದ್ದಾರೆ.

ಇನ್ನು ಇದೇವೇಳೆ ಪಂತ್ ಶತಕ ವಂಚಿತರಾದ ಬಗ್ಗೆ ಮಾತನಾಡಿದ ಗಂಭೀರ್, “ಶತಕ ಗಳಿಸಿದರೆ ಹೆಡ್​ಲೈನ್ ಆಗುತ್ತದೆ ನಿಜ. ಆದರೆ, 90 ರನ್ ಒಂದು ಟೂರ್ನಮೆಂಟ್ ಅಥವಾ ಸರಣಿ ಗೆಲುವಿಗೆ ಕಾರಣವಾಗುತ್ತದೆ. ಯಾಕಂದ್ರೆ ಪಂತ್ ಅವರ 90 ರನ್ ಈ ಹಿಂದೆ ಸಿಡ್ನಿ ಮತ್ತು ಬ್ರಿಸ್ಬೇನ್​ನಲ್ಲಿ ಭಾರತದ ಗೆಲುವಿಗೆ ಕಾರಣವಾಗಿದೆ. ಅಲ್ಲದೆ ಎಂ ಎಸ್ ಧೋನಿ ಅವರ 90 ರನ್ ಕೂಡ ಭಾರತ ವಿಶ್ವಕಪ್ ಗೆಲ್ಲಲು ನೆರವಾಯಿತು”, ಎಂಬುದು ಗಂಭೀರ್ ಅಭಿಪ್ರಾಯ.

ಶ್ರೇಯಸ್ ಅಯ್ಯರ್ ನಿರ್ಗಮನದ ಬಳಿಕ ಕ್ರೀಸ್​ಗೆ ಬಂದ ರಿಷಭ್ ಪಂತ್ ಆರಂಭದಲ್ಲಿ ಎಚ್ಚರಿಕೆ ಬ್ಯಾಟಿಂಗ್ ನಡೆಸಿದರು. ನಂತರ ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಲಂಕಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಪಂತ್ 73 ಎಸೆತಗಳನ್ನು ಎದುರಿಸಿ ಅರ್ಧಶತಕ ಬಾರಿಸಿ ಮತ್ತಷ್ಟು ಆಕ್ರಮಣಕಾರಿ ಆಟವಾಡಲಾರಂಭಿಸಿದರು. ಅದರಲ್ಲೂ ಲಸಿತ್ ಎಂಬುಲ್ಡೆನಿಯಾ ಬೌಲಿಂಗ್‌ನಲ್ಲಿ ಮೈಚಳಿ ಬಿಟ್ಟು ಬ್ಯಾಟಿಂಗ್ ನಡೆಸಿದ ಪಂತ್ ಒಂದೇ ಓವರ್‌ನಲ್ಲಿ 2 ಸಿಕ್ಸ್ ಹಾಗೂ 2 ಬೌಂಡರಿ ಸಹಿತ 22 ರನ್ ಚಚ್ಚಿದರು. ಅಂತಿಮವಾಗಿ ರಿಷಭ್ ಪಂತ್ 97 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 96 ರನ್ ಬಾರಿಸಿ ಲಕ್ಮಲ್‌ಗೆ ವಿಕೆಟ್ ಒಪ್ಪಿಸಿದರು.

WhatsApp
Facebook
Telegram
error: Content is protected !!
Scroll to Top